ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ(88) ಇಂದು ಬೆಳಗಿನ ಜಾವ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಇಂದು ಇಡೀ ದಿನ ನಗರದ ಆರ್‌ಪಿಸಿ ಲೇಔಟ್‌ನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
ಡಾ.ಎಂ.ಚಿದಾನಂದಮೂರ್ತಿ ಅವರ ಆಸೆಗಳಿಗೆ ಧಕ್ಕೆಯಾಗಬಾರದು. ಹೀಗಾಗಿ ಚಿಮೂ ಪಾರ್ಥಿವ ಶರೀರಕ್ಕೆ ಪೂಜೆ ಪುನಸ್ಕಾರ ಮಾಡುವುದಿಲ್ಲ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಕುಟುಂಬಸ್ಥರು ಹಾಗು ಚಿಮೂ ಅನುಯಾಯಿಗಳಿಗೆ ಚಿದಾನಂದಮೂರ್ತಿ ಅವರ ಪುತ್ರ ಮನವಿ ಮಾಡಿದ್ದಾರೆ.
ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ:
ನಾಳೆ ಅಂತಿಮ ದರ್ಶನಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ಬರುವ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಅಂತಿಮ ವಿಧಿ ವಿಧಾನ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ವೀರಶೈವ ಸಂಪ್ರದಾಯದಂತೆ ಚಿದಾನಂದಮೂರ್ತಿ ಅಂತಿಮ ವಿಧಿವಿಧಾನಗಳನ್ನು ಮಾಡಲು ತೀರ್ಮಾನಿಸಿದ್ದಾರೆ.
ಡಾ.ಎಂ.ಚಿದಾನಂದಮೂರ್ತಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಡಿಸಿಎಂ ಡಾ.ಅಶ್ವತ್ಥ್ ನಾರಾಯಣ, ಸಚಿವ ಬಿ.ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಾಹಿತಿ ಎಸ್.ಎಲ್.ಭೈರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡಕ್ಕೆ ಮಿಡಿಯುತ್ತಿದ್ದ, ಲೇಖಕ, ಸಂಶೋಧಕ, ಚಿಂತಕ, ಇತಿಹಾಸಕಾರರಾಗಿದ್ದ ಚಿ.ಮೂ ಇನ್ನಿಲ್ಲದ ವಿಷಯ ನೋವಿನದ್ದು ಮತ್ತು ಅವರ ಸ್ಥಾನ ಅನನ್ಯ, ಯಾರೂ ತುಂಬಲಾಗದು. ಹಂಪಿಯ ಸ್ಮಾರಕಗಳನ್ನು ಉಳಿಸುವಲ್ಲಿ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ಇವರ ಪ್ರಯತ್ನ ಸ್ಮರಣೀಯ. ಅವರಾತ್ಮಕ್ಕೆ ಶಾಂತಿ ದೊರಕಲಿ. #RIPChidanandaMurthi pic.twitter.com/PlNINCGeDI
— B.S. Yediyurappa (@BSYBJP) January 11, 2020
Published On - 9:41 am, Sat, 11 January 20