ಕರ್ನಾಟಕ ಬಜೆಟ್ 2021 ಇನ್ನೊಂದು ವಾರಕ್ಕೆ ಮಂಡನೆ ಆಗಲಿದೆ. 2021ರ ಮಾರ್ಚ್ 8ನೇ ತಾರೀಕಿನ ಸೋಮವಾರದಂದು ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಏನೆಲ್ಲ ಜಾದೂ ಮಾಡಬಹುದು. ಅದೆಂಥ ಮಂತ್ರದಂಡ ಬಳಸಬಹುದು ಎಂಬ ಕುತೂಹಲ ಎಲ್ಲ ವರ್ಗದಲ್ಲಿಯೂ ಇದೆ. ಜಾದೂ, ಮಂತ್ರದಂಡ ಇಂಥ ಪದಗಳನ್ನು ಏಕೆ ಬಳಸಬೇಕಾಗಿದೆ ಅಂದರೆ, ಇಡೀ ವರ್ಷ ರಾಜ್ಯದ ಆರ್ಥಿಕತೆಗೆ ಕೊರೊನಾ ಬಿಕ್ಕಟ್ಟು ಎದುರಾಗಿತ್ತು. ಆದರೆ ಬಜೆಟ್ನಲ್ಲಿ ಏನೆಲ್ಲ ಅಪಸವ್ಯಗಳಾಗುತ್ತವೆ, ಕೊನೆಗೆ ಬಜೆಟ್ನಲ್ಲೇ ಇರುವ ವೈಕಲ್ಯ ಏನು ಎಂಬ ಬಗ್ಗೆ ಟಿವಿ9 ಡಿಜಿಟಲ್ ಜತೆ ಮಾತನಾಡಿದ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರಾದ ಮಹಾದೇವ ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರೊಂದಿಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
“ರಾಜ್ಯ ಸರ್ಕಾರವು ಒಂದು ವರ್ಷದಲ್ಲಿ ಮಾಡುವ ಅಂದಾಜು ವೆಚ್ಚ ಹಾಗೂ ಅದಕ್ಕೆ ಬರಬಹುದಾದ ಅಂದಾಜು ಆದಾಯದ ಪಟ್ಟಿಯೇ ಬಜೆಟ್. ಎಲ್ಲ ಬಜೆಟ್ಗಳು ಜನರ ಹಿತಕ್ಕೆ ಪೂರಕವಾಗಿಯೇ ಇರುತ್ತವೆ. ಆದರೆ ಇದೊಂಥರಾ ವರ್ಷಾವರ್ಷ ನಡೆಯುವ ಹಬ್ಬದ ರೀತಿ ಆಗಿಬಿಟ್ಟಿದೆ. ಬಜೆಟ್ ಮಂಡನೆ ಆಗುತ್ತದೆ. ಆ ನಂತರ ಮರೆತು ಬಿಡುತ್ತಾರೆ. ಬಜೆಟ್ ಅನುಷ್ಠಾನ ಆಗಿದೆಯೋ ಇಲ್ಲವೋ ಹಾಗೂ ಎಷ್ಟರ ಮಟ್ಟಿಗೆ ಅನುಷ್ಠಾನ ಆಗಿದೆ ಎಂಬ ಬಗ್ಗೆ ಪರಾಮರ್ಶೆಯೇ ಆಗಲ್ಲ. ಮಾರ್ಚ್ನಲ್ಲಿ ಬಜೆಟ್ ಮಂಡನೆಯಾದರೆ ವಿವಿಧ ಇಲಾಖೆಗಳಿಗೆ ನವೆಂಬರ್ನಲ್ಲಿ ಹಂಚಿಕೆ ಆಗುತ್ತದೆ. ಆ ನಂತರ ನಿರ್ದಿಷ್ಟ ಉದ್ದೇಶಕ್ಕೆ ಖರ್ಚು ಮಾಡಲಾಗಿದೆಯಾ ಎಂಬ ಪರೀಕ್ಷೆ- ಪರಾಮರ್ಶೆ ನಡೆಯುವುದೇ ಇಲ್ಲ. ಈ ರೀತಿಯಲ್ಲಿ ಆಗಬಾರದು.
ಕೇಂದ್ರ ಸರ್ಕಾರ ಸಮಯಕ್ಕೆ ಸರಿಯಾಗಿ ಜಿಎಸ್ಟಿ ಪಾಲು ನೀಡಬೇಕು:
“ಇನ್ನು ಈ ಸಲ ಬಜೆಟ್ ಕೊರೊನಾ ಕಾರಣಕ್ಕೆ ಸವಾಲಿನದು ಎನ್ನುತ್ತಾರೆ. ಅದು ಸ್ವಲ್ಪ ಮಟ್ಟಿಗೆ ನಿಜವೂ ಇರಬಹುದು. ಆದರೆ ಈ ಸಲದ ರಾಜ್ಯದ ಜಿಡಿಪಿ (GSDP) ಉತ್ತಮವಾಗಿಯೇ ಇದೆ. ಸಮಸ್ಯೆಯಾಗೋದು ಎಲ್ಲಿಯೆಂದರೆ, ಜಿಎಸ್ಟಿ ಸಂಗ್ರಹಿಸುವ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸರಿಯಾಗಿ ಹಣವನ್ನು ನೀಡಬೇಕು ಹಾಗೂ ತಡ ಮಾಡದೆ ಕೊಡಬೇಕು. ಈಗಂತೂ ಸರಿಯಾದ ಸಮಯಕ್ಕೂ ಕೊಡದೆ, ಪೂರ್ತಿಯಾಗಿ ನೀಡದೆ ರಾಜ್ಯ ಸರ್ಕಾರಗಳ ಪಾಲಿಗೆ ಸಂಪನ್ಮೂಲ ಕ್ರೋಡೀಕರಣವೇ ಕಷ್ಟವಾಗಿದೆ. ಇನ್ನು ಜನರು ನೀಡುವ ತೆರಿಗೆ ಅದು ಇನ್ಕಮ್ ಟ್ಯಾಕ್ಸ್ ರೀತಿ ನೇರ ತೆರಿಗೆಯೇ ಇರಬಹುದು ಅಥವಾ ಪರೋಕ್ಷ ತೆರಿಗೆಯೇ ಇರಬಹುದು. ಎಲ್ಲ ಸೇರಿ ಶೇಕಡಾ 50ರಷ್ಟು ತೆರಿಗೆಯನ್ನೇ ಕಟ್ಟುತ್ತಿದ್ದೇವೆ.
“ಪೆಟ್ರೋಲ್ ಮೇಲೆ ಸೆಸ್ಗಳು ಅಂತ ಒಂದು ಸಲಕ್ಕೆ ಸರ್ಕಾರದಿಂದ ಇಷ್ಟು ಪರ್ಸೆಂಟ್ ಎಂದು ನಿಗದಿ ಮಾಡಿಬಿಡುತ್ತಾರೆ. ಮೂಲಬೆಲೆಯೂ ಸೇರಿ ಇನ್ನಷ್ಟು ಅಂಶಗಳ ಮೇಲೆ ಆ ಸೆಸ್ಗಳು ಬೀಳುತ್ತವೆ. ಮೂಲ ಬೆಲೆ ಅದೆಷ್ಟು ಹೆಚ್ಚಾಗುತ್ತಾ ಹೋಗುತ್ತದೋ ಜನರ ತಲೆ ಮೇಲೆ ಸೆಸ್ ಹೊರೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಇಂಥವು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಭಿಕ್ಷಾಟನೆ ಸೆಸ್, ಲೈಬ್ರರಿ ಸೆಸ್, ಕಾರ್ಮಿಕರ ಸೆಸ್ ಹೀಗೆ ಇನ್ನೂ ಕೆಲವು ಸೆಸ್ಗಳಿವೆ. ಅವುಗಳ ಸಂಗ್ರಹದಲ್ಲಿ ಯಾವ ಲೋಪವೂ ಆಗಲ್ಲ. ಭಿಕ್ಷಾಟನೆ ಸೆಸ್ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಆಗಿದೆ. ಅದು ಅದರ ಮೂಲ ಉದ್ದೇಶಕ್ಕೆ ಬಳಕೆಯಾಗಿದ್ದರೆ ಭಿಕ್ಷಾಟನೆ ಯಾವಾಗಲೋ ನಿರ್ಮೂಲನ ಆಗಬೇಕಿತ್ತು. ಇನ್ನು ಲೈಬ್ರರಿ ಸೆಸ್ ಅನ್ನು ರಾಜ್ಯ ಸರ್ಕಾರ, ಬಿಬಿಎಂಪಿ ಎರಡೂ ಸಂಗ್ರಹಿಸುತ್ತದೆ. ಸಾವಿರಾರು ಕೋಟಿ ಬರುತ್ತದೆ. ಆದರೂ ಈಗ ಹೋಗಿ ಕೇಳಿ, ಪುಸ್ತಕ ಖರೀದಿಗೆ ಹಣ ಇಲ್ಲ ಅಂತಾರೆ. ಈ ವಿಷಯದಲ್ಲಿ ತಮಿಳುನಾಡು ನಮಗೆ ಉದಾಹರಣೆಯಾಗಬೇಕು. ಅಲ್ಲಿ ಲೈಬ್ರರಿ ಇಲಾಖೆಗೆ ಅಂತ ಮೀಸಲಿಟ್ಟ ಹಣ ಅದೇ ಉದ್ದೇಶಕ್ಕೇ ಆಗುತ್ತದೆ. ಇನ್ನು ಕಾರ್ಮಿಕರ ಸೆಸ್ 8000 ಕೋಟಿ ರೂಪಾಯಿ ಇದೆ. ಅದನ್ನು ಬೇರೆ ಇಲಾಖೆಗೆ ಬಳಸಿಕೊಳ್ಳುವುದಕ್ಕೆ ಅಂತ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕೇಳಿದರು. ಆದರೆ ಅದನ್ನು ನೀಡಲು ರೋಹಿಣಿ ಸಿಂಧೂರಿ ನಿರಾಕರಿಸಿದ್ದರು. ಆ ಕಾರಣಕ್ಕೆ ತಿಕ್ಕಾಟ ಆಗಿತ್ತು.
ದುಂದು ವೆಚ್ಚವೇ ಹೆಚ್ಚಾಗುತ್ತಿದೆ:
“ಸೆಸ್ಗಳ ಸಂಗ್ರಹದ ಹಣ, ಬಜೆಟ್ನಲ್ಲಿ ಮೀಸಲಾದ ಹಣ ಆಯಾ ಇಲಾಖೆಗೆ ಅಂತಲೇ ಖರ್ಚಾಗಬೇಕು ಅನ್ನೋದು ಶಿಸ್ತು. ಉದಾಹರಣೆಗೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಖರ್ಚಾಗದೆ ಹಣ ಉಳಿದುಬಿಡುತ್ತದೆ. ಅದನ್ನು ಬೇರೆ ಇಲಾಖೆಗೆ ಬಳಸಿಕೊಳ್ಳುತ್ತಾರೆ. ಕೆಲವು ಇಲಾಖೆಯಲ್ಲಿ ಅಂದಾಜಿಗಿಂತ ಹೆಚ್ಚು ಖರ್ಚು, ಮತ್ತೆ ಕೆಲವು ಇಲಾಖೆಯಲ್ಲಿ ನಿರೀಕ್ಷೆಯಷ್ಟು ಖರ್ಚೇ ಇಲ್ಲ. ಏಕೆ ಹೀಗಾಗುತ್ತದೆ? ಈ ಹಿಂದೆಲ್ಲ ಸರ್ಕಾರದಲ್ಲಿ ಒಬ್ಬ ಸೆಕ್ರೆಟರಿ ಇರುತ್ತಿದ್ದರು. ಈಗ ಪ್ರಿನ್ಸಿಪಾಲ್ ಸೆಕ್ರೆಟರಿ, ಅವರ ಕೆಳಗೆ ಹದಿನೈದು ಹೆಚ್ಚುವರಿ ಸೆಕ್ರೆಟರಿಗಳು ಮತ್ತು ಅವರ ಅಡಿಯಲ್ಲಿ ಸೆಕ್ರೆಟರಿಗಳು ಹಾಗೂ ಇವರೆಲ್ಲರ ಸಂಬಳ, ಸಾರಿಗೆ, ಕಾರು ವಗೈರೆ ಇವೆಲ್ಲಕ್ಕೂ ಹಣ ದುಂದು ವೆಚ್ಚ ಮಾಡುವುದಕ್ಕೆ ಇರುತ್ತದೆಯೇ?
“ನನ್ನ ಅನುಭವದಲ್ಲಿ ನೋಡಿದ ಅತ್ಯುತ್ತಮ ಬಜೆಟ್ ಅಂದರೆ ರಾಮಕೃಷ್ಣ ಹೆಗ್ಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಡನೆ ಆಗಿದ್ದು ಹಾಗೂ ಅದೇ ರೀತಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದಾಗ ಎಂ.ರಾಜಶೇಖರ್ ಮೂರ್ತಿ ಅವರು ಹಣಕಾಸು ಸಚಿವರಾಗಿದ್ದರು ಆ ವೇಳೆಯಲ್ಲೂ ಉತ್ತಮ ಬಜೆಟ್ ನೀಡಿದ್ದರು. ಆ ವರ್ಷ ಬಜೆಟ್ ಮಂಡನೆಯಾದ ಆರು ತಿಂಗಳ ಒಳಗೇ ಸರ್ಪ್ಲಸ್ (ಮಿಗತೆ) ಆದಾಯ ಆಗಿತ್ತು. ಆದ್ದರಿಂದ ಆರಂಭದಲ್ಲೇ ಹೇಳಿದ ಹಾಗೆ ಬಜೆಟ್ ಅನ್ನೋದು ನೆಪಕ್ಕೆ ಮಂಡನೆ ಆಗುವ ವರ್ಷಾವರ್ಷದ ಶಾಸ್ತ್ರ ಅಂತಾಗದೆ ಪ್ರತಿ ಮೂರು ತಿಂಗಳಿಗೊಮ್ಮೆ ಅದರ ಬೆಳವಣಿಗೆಯ ಲೆಕ್ಕಾಚಾರವನ್ನು ಗಮನಿಸಬೇಕು. ಆರ್ಥಿಕ ತಜ್ಞರು, ವಿವಿಧ ಇಲಾಖೆಗೆ ಸಂಬಂಧಿಸಿದವರು ಮತ್ತು ಜನಸಾಮಾನ್ಯರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ಮಾಡಿ, ಪರಾಮರ್ಶೆ ನಡೆಸಬೇಕು,” ಎಂದು ಮಾತು ಮುಗಿಸಿದರು ಮಹಾದೇವಪ್ರಕಾಶ್.
ಇದನ್ನೂ ಓದಿ: Karnataka Budget 2021: ಕರ್ನಾಟಕ ಬಜೆಟ್ ಇತಿಹಾಸ, 10 ಆಸಕ್ತಿಕರ ಸಂಗತಿ
Karnataka Budget 2021: ರಾಜ್ಯ ಸರ್ಕಾರದ ಆದಾಯಕ್ಕೆ ಹೇಗೆಲ್ಲ ಬಿದ್ದಿದೆ ಕತ್ತರಿ?
Published On - 2:43 pm, Mon, 1 March 21