ಬೆಂಗಳೂರು: ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ನೀಡುವ ವಿಚಾರವಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಪರಿಷತ್ ಸದಸ್ಯರ ಜೊತೆ ಚರ್ಚೆ ಮಾಡಿದ್ದೇನೆ. ಇಲಾಖೆಯಲ್ಲಿ ಎಷ್ಟು ಅನುದಾನ ಲಭ್ಯತೆ ಬಗ್ಗೆ ಚರ್ಚೆ ಆಗಿದೆ. ನಾಳೆಯೊಳಗೆ ವರದಿ ಕೊಡುವಂತೆ ಸೂಚಿಸಿದ್ದು, ಅವರು ಕೊಟ್ಟ ವರದಿಯನ್ನ ಸರ್ಕಾರಕ್ಕೆ ನೀಡುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ಇಂದು ಪರಿಷತ್ ಸದಸ್ಯರ ಜತೆ ಯಾವುದೇ ಚರ್ಚೆ ನಡೆಸಿಲ್ಲ. ಮಕ್ಕಳಿಗೆ ಲಸಿಕೆ ನೀಡಿ ಪರೀಕ್ಷೆ ನಡೆಸುವಂತೆ ಹಿರಿಯ ವೈದ್ಯ ಗಿರಿಧರ್ ಬಾಬು ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್: ಈ ಮುನ್ನವೇ ಸಿಎಂ ಭೇಟಿ ಮಾಡಿದ್ದ ಸಚಿವ
ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ನೀಡುವ ವಿಚಾರಕ್ಕೆ ಸಂಬಂಧಿಸಿ ಶಿಕ್ಷಕರ ಪದವೀಧರ ಕ್ಷೇತ್ರದ ಶಾಸಕರೊಂದಿಗೆ ಸಚಿವ ಸುರೇಶ್ ಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಈ ಮುನ್ನವೇ ಭೇಟಿ ಮಾಡಿದ್ದರು.
ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಸಮುದಾಯಕ್ಕೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ರಾಜ್ಯದ ಮುಖ್ಯಮಂತ್ರಿಗೆ ಕ್ಷೇತ್ರದ ಶಾಸಕರು ಮನವಿ ಮಾಡಿದರು. ಶಿಕ್ಷಕರ ಪದವೀಧರ ಕ್ಷೇತ್ರಗಳ ಶಾಸಕರ ನಿಯೋಗದೊಂದಿಗೆ ಸುರೇಶ್ ಕುಮಾರ್ ತೆರಳಿದ್ದರು. ಸಚಿವ ಸುರೇಶ್ ಕುಮಾರ್ ಜೊತೆ ವಿಧಾನ ಪರಿಷತ್ತಿನ ಸದಸ್ಯ ಡಾ.ವೈ.ಎ.ನಾರಾಯಣ ಸ್ವಾಮಿ, ಪುಟ್ಟಣ್ಣ, ಅರುಣ ಶಹಾಪುರ, ಶಶೀಲ್ ನಮೋಷಿ, ಸಂಕನೂರ, ಚಿದಾನಂದ ಗೌಡ ಭಾಗಿಯಾಗಿದ್ದರು.
ಶಿಕ್ಷಕ ಸಮುದಾಯದ ಸ್ಥಿತಿ ಶೋಚನೀಯವಾಗಿದೆ. ದೈನಂದಿನ ಜೀವನ ನಿರ್ವಹಣೆಯೂ ದುಸ್ತರವಾಗಿದೆ. ಜೀವನ ನಡೆಸಲು ಶಿಕ್ಷಕ ಸಮುದಾಯದ ಹಲವರು ಹಣ್ಣು, ತರಕಾರಿ ಮಾರುತ್ತಿದ್ದು, ಕೂಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಮಕ್ಕಳ ಹಿತ ಕಾಯುವ ಸಮುದಾಯವನ್ನು ನಾವು ಘನತೆಯಿಂದ ನಡೆಸಿಕೊಳ್ಳುವುದು ಕರ್ತವ್ಯವಾಗಿದೆ. ಸರ್ಕಾರದ ಆರ್ಥಿಕ ಪ್ಯಾಕೇಜ್ ಈ ಸಮುದಾಯಕ್ಕೆ ಆತ್ಮ ವಿಶ್ವಾಸ ತುಂಬಲು ಸಹಕಾರಿಯಾಗಲಿದೆ. ಹೀಗಾಗಿ ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಕೊವಿಡ್ ಮತ್ತೆ ಆವರಿಸಿದೆ ಚೀನಾದಲ್ಲಿ; ಲಸಿಕೆ ಪಡೆಯಲು ಜನ ಪರದಾಟ; ಹೊಸ ಕೇಸ್ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟ ರದ್ದು
( Karnataka Education minister Suresh Kumar discussed about provide lockdown package to unaided school teachers)