ವರ್ಷ ಕಳೆದರೂ ತೀರದ ಸಂತ್ರಸ್ತರ ಗೋಳು, ಪರಿಹಾರ ಕೈ ಸೇರದೆ ಕಷ್ಟವಾಗಿದೆ ಜೀವನ

|

Updated on: Jun 08, 2020 | 2:13 PM

ಹಾವೇರಿ: ಈ ಜಿಲ್ಲೆಯ ಜನರು ಕಳೆದ ವರ್ಷ ಸುರಿದ ನಿರಂತರ ಮಳೆಯಿಂದ ಎದುರಾದ ನೆರೆಗೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಜಿಲ್ಲೆಯ ವರದಾ, ತುಂಗಭದ್ರಾ, ಧರ್ಮಾ ಮತ್ತು ಕುಮುದ್ವತಿ ನದಿ ಪಾತ್ರದ ಜನರ ಬದುಕು ಬೀದಿಗೆ ಬಿದ್ದಿತ್ತು. ಒಂದೆಡೆ ನಿರಂತರ ಸುರಿದ ಮಳೆಯಿಂದ ಮನೆಗಳು ನೆಲಕ್ಕೆ ಉರುಳಿದ್ದವು. ಮತ್ತೊಂದೆಡೆ ನೆರೆಯಿಂದ ಜನರ ಜಮೀನುಗಳು ಜಲಾವೃತ ಆಗಿದ್ದವು. ಈ ದಿನಗಳು ಕಳೆದು ಬರೋಬ್ಬರಿ ಒಂದು ವರ್ಷ ಆಗುತ್ತಾ ಬಂದರೂ ನದಿ ಪಾತ್ರದ ಜನರ ಗೋಳು ಮಾತ್ರ ಇನ್ನೂ ತೀರದಾಗಿದೆ. ಅತಿವೃಷ್ಟಿ […]

ವರ್ಷ ಕಳೆದರೂ ತೀರದ ಸಂತ್ರಸ್ತರ ಗೋಳು, ಪರಿಹಾರ ಕೈ ಸೇರದೆ ಕಷ್ಟವಾಗಿದೆ ಜೀವನ
Follow us on

ಹಾವೇರಿ: ಈ ಜಿಲ್ಲೆಯ ಜನರು ಕಳೆದ ವರ್ಷ ಸುರಿದ ನಿರಂತರ ಮಳೆಯಿಂದ ಎದುರಾದ ನೆರೆಗೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಜಿಲ್ಲೆಯ ವರದಾ, ತುಂಗಭದ್ರಾ, ಧರ್ಮಾ ಮತ್ತು ಕುಮುದ್ವತಿ ನದಿ ಪಾತ್ರದ ಜನರ ಬದುಕು ಬೀದಿಗೆ ಬಿದ್ದಿತ್ತು. ಒಂದೆಡೆ ನಿರಂತರ ಸುರಿದ ಮಳೆಯಿಂದ ಮನೆಗಳು ನೆಲಕ್ಕೆ ಉರುಳಿದ್ದವು. ಮತ್ತೊಂದೆಡೆ ನೆರೆಯಿಂದ ಜನರ ಜಮೀನುಗಳು ಜಲಾವೃತ ಆಗಿದ್ದವು. ಈ ದಿನಗಳು ಕಳೆದು ಬರೋಬ್ಬರಿ ಒಂದು ವರ್ಷ ಆಗುತ್ತಾ ಬಂದರೂ ನದಿ ಪಾತ್ರದ ಜನರ ಗೋಳು ಮಾತ್ರ ಇನ್ನೂ ತೀರದಾಗಿದೆ.

ಅತಿವೃಷ್ಟಿ ಮತ್ತು ನೆರೆ ಬಂದಾಗ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ಸರಕಾರದ ಅನೇಕ ಮಂತ್ರಿಗಳು ಹಾಗೂ ಶಾಸಕರು ಜನರ ಸಮಸ್ಯೆ ಆಲಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪರಂತೂ ನದಿ ಪಾತ್ರದ ಗ್ರಾಮಗಳನ್ನು ಸ್ಥಳಾಂತರ‌ ಮಾಡುತ್ತೇವೆ. ಮನೆ ಹಾನಿಗೆ ಒಳಗಾವದರಿಗೆ ಐದು ಲಕ್ಷ ರುಪಾಯಿವರೆಗೆ ಮನೆ ಕಟ್ಟಿಕೊಳ್ಳಲು ಪರಿಹಾರ ನೀಡುತ್ತೇವೆ ಅಂದಿದ್ದರು. ನೆರೆ ಮತ್ತು ಅತಿವೃಷ್ಟಿ ಸಮಯದಲ್ಲಿ ಜನರು ಮನೆಗಳನ್ನು ಕಳೆದುಕೊಂಡು ಸರಕಾರ ತೆರೆದಿದ್ದ ಪರಿಹಾರ ಕೇಂದ್ರಗಳಲ್ಲಿ ಕೆಲವು‌ ದಿನಗಳ ಕಾಲ ವಾಸವಾಗಿ ನೆರೆ‌ ನಿಂತ ಮೇಲೆ‌ ಬಿದ್ದ ಮನೆಗಳಲ್ಲಿಯೇ ವಾಸಿಸಲು ಶುರು ಮಾಡಿದರು. ಆಗ ಸರಕಾರ ಮನೆ ಹಾನಿಗೆ ಒಳಗಾದವರಿಗೆ ಪರಿಹಾರದ ಹಣ ಅವರವರ ಖಾತೆಗೆ ಜಮಾ‌‌‌ ಮಾಡಿತ್ತು.

ಸರಕಾರದ ಪರಿಹಾರದ ಹಣ ಮನೆ ಕಳೆದುಕೊಂಡವರ ಕೈ ಸೇರುತ್ತಿದ್ದಂತೆ ಮನೆ‌ ಕಳೆದುಕೊಂಡವರು ಹೊಸ‌‌‌ ಮನೆ ನಿರ್ಮಾಣ ಕಾರ್ಯ ಶುರು ಮಾಡಿದರು. ಆದರೆ ಸರಕಾರ ಐದು ಲಕ್ಷ ಪರಿಹಾರದ ಹಣದಲ್ಲಿ ಮೊದಲ‌‌ ಕಂತಾಗಿ‌ ಸ್ವಲ್ಪ ಹಣವನ್ನು ನೀಡಿ‌ ಉಳಿದ‌ಹಣ ಎರಡನೆ ಕಂತಿನಲ್ಲಿ‌ ಕೊಡುವುದಾಗಿ ಹೇಳಿತ್ತು. ಅದರೆ ಎರಡನೆ ಕಂತಿನ ಹಣ ಸಿಗದೆ ಜಿಲ್ಲೆಯ ಅದೆಷ್ಟೋ ಗ್ರಾಮಗಳಲ್ಲಿ ಮನೆ ನಿರ್ಮಾಣದ‌ ಕಾರ್ಯ ಅರ್ಧಕ್ಕೆ ನಿಂತಿವೆ. ಈಗ ಮತ್ತೆ ಮುಂಗಾರು ಮಳೆ ಆರಂಭವಾಗಿದೆ. ಬಿದ್ದ ಮತ್ತು ಅರ್ಧಂಬರ್ಧ ಕಟ್ಟಿಕೊಂಡ ಮನೆಗಳಲ್ಲೇ ಮನೆ ಕಳೆದುಕೊಂಡವರು ಅನಿವಾರ್ಯ ಎಂಬಂತೆ ವಾಸ ಮಾಡುತ್ತಿದ್ದಾರೆ.

ಅರ್ಧಂಬರ್ಧ ಕಟ್ಟಿಕೊಂಡ ಮನೆಗಳಲ್ಲೇ ಬದುಕು
ಮನೆ ಕಳೆದುಕೊಂಡು ಈಗ ಸರಕಾರದ ಪೂರ್ಣ ಪರಿಹಾರದ ಹಣ ಬಾರದೆ ಮನೆ ನಿರ್ಮಾಣ ಅರ್ಧಕ್ಕೆ ನಿಂತಿವೆ. ಹೀಗಾಗಿ ಆಯಾ ತಾಲೂಕಿನ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಹಾನಿಗೆ ಒಳಗಾದವರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಅರ್ಧಂಬರ್ಧ ಕಟ್ಟಿಕೊಂಡವರ ಮನೆಗಳನ್ನು ನೋಡಿ‌ ಸರಕಾರದಿಂದ ಎರಡನೆ ಕಂತಿನ ಹಣ ಬಿಡುಗಡೆ ಮಾಡಿಸುವ ಭರವಸೆ ನೀಡುತ್ತಿದ್ದಾರೆ.

ಒಂದೆಡೆ ಮಳೆರಾಯನ ಆಗಮನ, ಮತ್ತೊಂದೆಡೆ ಅರ್ಧಂಬರ್ಧ ನಿರ್ಮಾಣವಾಗಿರುವ ಮನೆಗಳಲ್ಲಿ ವಾಸಿಸುತ್ತಿರುವ ಜನರ ಗೋಳು ತೀರದಾಗಿದೆ. ಅತಿವೃಷ್ಟಿ ಮತ್ತು ನೆರೆ ಬಂದಾಗ ಸಿಎಂ, ಸಚಿವರು ಮತ್ತು ಜನಪ್ರತಿನಿಧಿಗಳು ಭರವಸೆ ನೀಡಿದಂತೆ ಪರಿಹಾರದ ಹಣ ಈವರೆಗೂ ಮನೆ ಹಾನಿಗೆ ಒಳಗಾದವರ ಕೈ ಸೇರಿಲ್ಲ. ಹೀಗಾಗಿ ಮನೆ ಹಾನಿಗೆ ಒಳಗಾದವರು ಈಗಲೂ ಅರ್ಧಂಬರ್ಧ ನಿರ್ಮಾಣವಾಗಿರುವ ಮತ್ತು ಬಿದ್ದು ಹೋಗಿರುವ ಮನೆಗಳಲ್ಲೆ‌ ವಾಸಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆದಷ್ಟು ಬೇಗ ಸರಕಾರ ನುಡಿದಂತೆ ನಡೆದು ನಮಗೆ ಪರಿಹಾರದ ಪೂರ್ಣ ಹಣವನ್ನು ಬಿಡುಗಡೆ ಮಾಡಲಿ ಎಂಬುದು ಮನೆ ಕಳೆದುಕೊಂಡು ತೊಂದರೆ ಅನುಭವಿಸುತ್ತಿರುವ ಜನರ ಒತ್ತಾಯವಾಗಿದೆ.

Published On - 8:08 am, Mon, 8 June 20