ಬೆಂಗಳೂರು ಸೆ.28: ಕಂದಾಯ ಇಲಾಖೆಯಿಂದ (Revenue Department) ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಬಂದಿದೆ. ಹೌದು ಮುಂದ್ರಾಂಕ ಮತ್ತು ನೋಂದಣಿ ಇಲಾಖೆ (Department of Stamps and Registration) ಸೆ.27 ರಂದು ಒಂದೇ ದಿನ ಆಸ್ತಿ ನೋಂದಣಿ ಸೇರಿದಂತೆ 24,500 ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, ಬರೊಬ್ಬರಿ 244 ಕೋಟಿ ರೂ. ಸಂಗ್ರಹವಾಗಿದೆ. ಅಕ್ಟೋಬರ್ 1 ರಿಂದ ರಾಜ್ಯ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ಮೌಲ್ಯವನ್ನು ಶೇಕಡಾ 10 ರಿಂದ 30 ರವರೆಗೆ ಹೆಚ್ಚಿಸಲು ನಿರ್ಧರಿಸಿದೆ.
ಸೆಪ್ಟೆಂಬರ್ 22 ರಂದು 12,955 ಆಸ್ತಿ ನೋಂದಣಿ, ದಾಸ್ತಾವೇಜು ಪ್ರಕ್ರಿಯೆ ಮೂಲಕ 130.87 ಕೋಟಿ ರೂ. ಹಾಗೂ ಸೆ. 25 ರಂದು 15,936 ನೋಂದಣಿ ದಾಸ್ತುವೇಜು ಪ್ರಕ್ರಿಯೆ ನಡೆದಿದ್ದು 158.28 ಕೋಟಿ ರೂ. ಆದಾಯ ಸಂಗ್ರಹವಾಗುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಮುದ್ರಾಂಕ ಶುಲ್ಕ ಬಾಕಿ ಉಳಿಸಿಕೊಂಡ ರಾಜ್ಯದ ಟೋಲ್ ಗೇಟ್ ಏಜೆನ್ಸಿಗಳು; ಸರ್ಕಾರದ ಬೊಕ್ಕಸಕ್ಕೆ ಬರಬೇಕಿದೆ 500 ಕೋಟಿ ರೂ. !
ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ.25ರಿಂದ ಪೂರ್ಣ ಪ್ರಮಾಣದಲ್ಲಿ ಸುಧಾರಿತ ಕಾವೇರಿ-2 ತಂತ್ರಾಂಶದ ಮೂಲಕ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಆಸ್ತಿದಾರರೇ ಬಯಸಿದ ದಿನ ಮತ್ತು ಸಮಯಕ್ಕೆ ಆಸ್ತಿ ನೋಂದಣಿ ಮಾಡಕೊಳ್ಳಬಹುದಾಗಿದೆ.
ಕಾವೇರಿ-2 ತಂತ್ರಾಂಶಕ್ಕೆ ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರಲ್ಲಿರುವ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಇಲಾಖೆಗೆ ಬಂದಿದ್ದವು. ಇದೀಗ ಎಲ್ಲ ಸಮಸ್ಯೆಗಳನ್ನೂ ನಿವಾರಣೆಯಾಗಿದ್ದು, ಕಾವೇರಿ-2 ತಂತ್ರಾಂಶ ಜನ ಮನ್ನಣೆ ಗಳಿಸಿದೆ.