ನಾಳೆಯಿಂದ ಕೆಎಸ್​ಆರ್​ಟಿಸಿ-ಬಿಎಂಟಿಸಿ ಸಂಚಾರ ಸಂಪೂರ್ಣ ನಿಲ್ಲಬೇಕು: ಕೋಡಿಹಳ್ಳಿ ಚಂದ್ರಶೇಖರ್

ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ನಿಲ್ಲೋ ಸೆಕ್ಯುರಿಟಿ ಗಾರ್ಡ್‌ಗಳಿಗೆ ಸಂಬಳ ಎಷ್ಟು? ನಿಮ್ಮ ಐಶಾರಾಮಿ ಮನೆಯಲ್ಲಿ ಸಾಕುವ ನಾಯಿಗೆ ಎಷ್ಟು ಖರ್ಚು ಮಾಡುತ್ತೀರಿ? ಆದರೆ, ಹಗಲು ರಾತ್ರಿ ದುಡಿಯೋ ಸಾರಿಗೆ ನೌಕರರಿಗೆ ಮಾತ್ರ 7ರಿಂದ 14 ಸಾವಿರ ಸಂಬಳ ಕೊಡ್ತಿದ್ದೀರಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಾಳೆಯಿಂದ ಕೆಎಸ್​ಆರ್​ಟಿಸಿ-ಬಿಎಂಟಿಸಿ ಸಂಚಾರ ಸಂಪೂರ್ಣ ನಿಲ್ಲಬೇಕು: ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್​
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 5:45 PM

ಬೆಂಗಳೂರು: ನಾಳೆಯಿಂದ ಬಿಎಂಟಿಸಿ, ಕೆಎಸ್ಆರ್‌ಟಿಸಿ ಸಂಚಾರ ಸಂಪೂರ್ಣ ನಿಲ್ಲಬೇಕು. ಯಾವೊಬ್ಬ ನೌಕರನೂ ಕೆಲಸಕ್ಕೆ ಹಾಜರಾಗೋದಿಲ್ಲ. ಯಾವ ಸಿಬ್ಬಂದಿಗೆ ನೋಟೀಸ್ ಕೊಡ್ತೀರೋ ಕೊಡಿ. ನಾವು ನಿಮ್ಮ ಬಂಡವಾಳ ಆಚೆಗೆ ತೆಗೆಯುತ್ತೇವೆ. ಇಲಾಖೆಯಲ್ಲಿ ಕಳ್ಳತನ ಮಾಡುವವರಿದ್ದರೆ ಅವರ ಬಂಡವಾಳವೂ ಹೊರಗೆ ಬರಲಿ ಎಂದು ಫ್ರೀಡಂಪಾರ್ಕ್​ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪನವರ ಸರ್ಕಾರ ಪೊಲೀಸರನ್ನು ಇಟ್ಟುಕೊಂಡು ದರ್ಪ ತೋರಿಸುತ್ತಿದೆ. ನಮ್ಮ ಬೇಡಿಕೆಯನ್ನು ಆಲಿಸಲು ಒಬ್ಬ ಸಚಿವ ಕೂಡ ಬಂದಿಲ್ಲ. ಇದೆಂಥಾ ಸರ್ಕಾರ? ಇವರಿಂದ ಸಂಬಳ ಪಡೆಯೋದಕ್ಕಿಂತ ಜೈಲಿಗೆ ಹೋಗಿ ಬದುಕೋದೇ ವಾಸಿ ವಾಗ್ದಾಳಿ ನಡೆಸಿದರು.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಅವರು ನಮ್ಮ ಅಹವಾಲನ್ನು ಕೇಳಲು 30 ನಿಮಿಷದಲ್ಲಿ ಸಂಬಂಧಪಟ್ಟ ಸಚಿವರನ್ನು ಕರೆತರುತ್ತೇವೆ ಎಂದು ಪೊಲೀಸರು ಹೇಳಿದ್ದರು. ಆದರೆ, ಯಾರೊಬ್ಬರೂ ಬಂದಿಲ್ಲ. ಸಚಿವರು ಬಾರದಿದ್ದರೆ ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ್ದ ಮಾತಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ನಾಯಿ ಸಾಕೋಕೆ ದುಡ್ಡು ಚೆಲ್ತೀರಿ, ಸಂಬಳ ಜಾಸ್ತಿ ಮಾಡೋಕೆ ಆಗಲ್ವಾ?
ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ನಿಲ್ಲೋ ಸೆಕ್ಯುರಿಟಿ ಗಾರ್ಡ್‌ಗಳಿಗೆ ಸಂಬಳ ಎಷ್ಟು? ನಿಮ್ಮ ಐಷಾರಾಮಿ ಮನೆಯಲ್ಲಿ ಸಾಕುವ ನಾಯಿಗೆ ಎಷ್ಟು ಖರ್ಚು ಮಾಡುತ್ತೀರಿ? ಆದರೆ, ಹಗಲು ರಾತ್ರಿ ದುಡಿಯೋ ಸಾರಿಗೆ ನೌಕರರಿಗೆ ಮಾತ್ರ 7ರಿಂದ 14 ಸಾವಿರ ಸಂಬಳ ಕೊಡ್ತಿದ್ದೀರಿ. ಈ ರೀತಿ ಸಂಬಳ ಪಡೆಯೋ ಬದಲು, ಒಂದು ತಿಂಗಳು ಜೈಲಿನಲ್ಲಿದ್ದು ಬದುಕೋದು ಉತ್ತಮ ಎಂದು ಕಿಡಿಕಾರಿದ್ದಾರೆ.

ಮಂತ್ರಿ, ಶಾಸಕರಿಗೆ ಕೊರೊನಾ ಬಂದ್ರೆ ಐಶಾರಾಮಿ ಆಸ್ಪತ್ರೆಗೆ ಕಳಿಸ್ತೀರಿ. ನಮ್ಮ ಕಾರ್ಮಿಕರಿಗೆ ಮಾತ್ರ ಈವರೆಗೂ ಚಿಕಿತ್ಸೆಯೂ ಇಲ್ಲ, ಪರಿಹಾರವೂ ಇಲ್ಲ. ಇದೊಂದು ಸರ್ಕಾರವೇ, ಇದೊಂದು ರೀತಿ, ನೀತಿಯೇ? ಈ ರೀತಿಯ ವ್ಯವಸ್ಥೆ ಮುಂದುವರೆಸೋದು ಬೇಡ. ಜೈಲಿಗೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವುದಾದರೆ ಹಾಗೆಯೇ ಆಗಲಿ. ನಮಗೆ ನ್ಯಾಯ ಸಿಗುವ ತನಕ ಸುಮ್ಮನಾಗೋದಿಲ್ಲ ಎಂದು ಆಕ್ರೋಶ ಹೊರಹಾಕಿದರು.

Something Serious.. ನಾಳೆ ಸಾರಿಗೆ ನೌಕರರಿಂದ ವಿಧಾನಸೌಧ ಚಲೋ, ಜಾಥಾದಲ್ಲಿ ನೌಕರರ ಹೆಂಡತಿ-ಮಕ್ಕಳೂ ಭಾಗಿ!