
ಬೆಳಗಾವಿ: ಕನ್ನಡ ರಾಜ್ಯೋತ್ಸವದಂದು MES ನಡೆಸಲಿದ್ದ ಕರಾಳ ದಿನಾಚರಣೆಗೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿದರು.
‘ನಮ್ಮ ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ನೀಡಿಲ್ಲ’
ಇತ್ತ, MES ಪುಂಡರ ಕರಾಳ ದಿನ ಸಭೆ ತಡೆಯಲು ಕರವೇ ಕಾರ್ಯಕರ್ತರು ಯತ್ನಿಸಿದರು. ಕರವೇ ಸಂಚಾಲಕ ಮಹಾದೇವ ತಳವಾರ ನೇತೃತ್ವದಲ್ಲಿ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಕರವೇ ಕಾರ್ಯಕರ್ತರನ್ನು ರೈಲು ಓವರ್ ಬ್ರಿಡ್ಜ್ ಮೇಲೆ ಪೊಲೀಸರು ತಡೆದರು. ಹೀಗಾಗಿ, ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ಸಹ ನಡೆಯಿತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು.
MESಗೆ ಪ್ರತಿಭಟನಾ ಸಭೆ ನಡೆಸಲು ಅನುಮತಿ ನೀಡಿದ್ದಕ್ಕೆ ಕರವೇ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು. ಸಭೆ, ಱಲಿಗೆ ಅವಕಾಶ ನೀಡಲ್ಲ ಎಂದು ಜಿಲ್ಲಾಡಳಿತ ಹೇಳಿತ್ತು. ನಮ್ಮ ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ನೀಡಿಲ್ಲ. ಕೊವಿಡ್ ನೆಪವೊಡ್ಡಿ ನಮ್ಮ ರಾಜ್ಯೋತ್ಸವ ಮೆರವಣಿಗೆಗೆ ತಡೆ ನೀಡಿದರು. ಆದರೆ, ಏಕಾಏಕಿ MES ನವರಿಗೆ ಸಭೆ ನಡೆಸಲು ಅನುಮತಿ ನೀಡಿದ್ದೇಕೆ? ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಪ್ರಶ್ನಿಸಿದರು.
MES ಸಭೆಗೆ ಅವಕಾಶ ಕೊಡುವವರು ನಮಗ್ಯಾಕೆ ರಾಜ್ಯೋತ್ಸವ ಮಾಡಲು ಅವಕಾಶ ಕೊಡ್ತಿಲ್ಲ? ಬೆಳಗಾವಿಯಲ್ಲೇ ಇದ್ದುಕೊಂಡು ಕರಾಳ ದಿನ ಆಚರಣೆ ಮಾಡ್ತಿದ್ದಾರೆ. ಇಂತಹ ದ್ವಿಮುಖ ನೀತಿ ಏಕೆ ಎಂದು ಮಹಾದೇವ ತಳವಾರ ಆಕ್ರೋಶ ವ್ಯಕ್ತಪಡಿಸಿದರು.