ದೆಹಲಿ: ವಸೂಲಾಗದ ಸಾಲದ ಪ್ರಮಾಣ ಹೆಚ್ಚಾದ ಕಾರಣ ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿದ್ದ ಲಕ್ಷ್ಮೀ ವಿಲಾಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಮೊರಟೋರಿಯಂ ಹೇರಿದ ನಂತರ ಷೇರುಪೇಟೆಯಲ್ಲಿ ಕಂಪನಿಯ ಷೇರು ಮೌಲ್ಯ ನಿರಂತರ ಕುಸಿತ ಕಂಡಿದೆ. ಗ್ರಾಹಕರಿಗೆ ತಿಂಗಳಿಗೆ ₹ 25,000ದವರೆಗೆ ಮಾತ್ರ ಹಣ ಹಿಂಪಡೆಯಲು ಆರ್ಬಿಐ ಅವಕಾಶ ನೀಡಿದ್ದು ಠೇವಣಿ ಇಟ್ಟಿರುವ ಹಣ ಏನಾಗಬಹುದು ಎಂಬ ಆತಂಕವನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ನಿರಂತರವಾಗಿ ಕುಸಿಯುತ್ತಿರುವ ಷೇರುಮೌಲ್ಯವು ಹೂಡಿಕೆದಾರರ ಹಣವನ್ನು ಡೋಲಾಯಮಾನ ಪರಿಸ್ಥಿತಿಗೆ ತಳ್ಳಿದೆ.
ಬ್ಯಾಂಕ್ನ ಷೇರುಮೌಲ್ಯವು ಸತತ ಆರನೇ ದಿನ ಕುಸಿತ ಕಂಡಿದೆ. ನಕಾರಾತ್ಮಕ ಸುದ್ದಿಗಳ ಪರಿಣಾಮ ಈವರೆಗೆ ಷೇರುಮೌಲ್ಯ ಶೇ.53ರಷ್ಟು ಕುಸಿದಿದೆ. ಮಂಗಳವಾರ ಒಂದೇ ದಿನದ ವಹಿವಾಟಿನಲ್ಲಿ ಷೇರುಮೌಲ್ಯ ಶೇ.9.88 ಕಡಿಮೆಯಾಗಿದೆ. ಇದೀಗ ಪ್ರತಿ ಷೇರಿನ ಮೌಲ್ಯ ₹ 7.30ರ ಆಸುಪಾಸಿನಲ್ಲಿ ವಹಿವಾಟಾಗುತ್ತಿದೆ. ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕ್ ಜತೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನ ಮಾಡಲು ಆರ್ಬಿಐ ನಿರ್ಧರಿಸಿದೆ. ಡಿಬಿಎಸ್ ಬ್ಯಾಂಕ್ ಲಕ್ಷ್ಮೀ ವಿಲಾಸ್ ಬ್ಯಾಂಕ್ನಲ್ಲಿ ಸುಮಾರು ₹2000 ಕೋಟಿಯಷ್ಟು ಬಂಡವಾಳ ಹೂಡುವ ನಿರೀಕ್ಷೆಯಿದ್ದು, ನಂತರವಷ್ಟೇ ಆರ್ಬಿಐ ಮೊರಟೋರಿಯಂ ತೆರವುಗೊಳಿಸಿ, ಗ್ರಾಹಕರಿಗೆ ಹಣಹಿಂಪಡೆಯಲು ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬಹುದು.
ಕಳೆದ ವರ್ಷದ ಸೆಪ್ಟೆಂಬರ್ನಿಂದ ಈಚೆಗೆ ಮೊರಟೋರಿಯಂ ನಿರ್ಬಂಧಕ್ಕೆ ಒಳಪಟ್ಟ ಮೂರನೇ ಬ್ಯಾಂಕ್ ಇದಾಗಿದ್ದು ಈ ಹಿಂದೆ ಯೆಸ್ ಬ್ಯಾಂಕ್ ಮತ್ತು ಪಿಎಂಸಿ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ವಿಧಿಸಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಇತರ ಬ್ಯಾಂಕ್ಗಳು ಬಂಡವಾಳ ಒದಗಿಸಿ ಯೆಸ್ ಬ್ಯಾಂಕ್ ಅನ್ನು ಮೇಲೆತ್ತಿದವು. ಆದರೆ ಪಿಎಂಸಿ ಇನ್ನೂ ಸಂಕಷ್ಟದಲ್ಲಿಯೇ ಇದೆ. ಆಡಳಿತ ಮಂಡಳಿಗಳ ಬೇಜವಾಬ್ದಾರಿಯಿಂದಾಗಿ ಬ್ಯಾಂಕ್ಗಳು ಸಂಕಷ್ಟಕ್ಕೀಡಾದರೆ ನಮ್ಮ ಹಣದ ಗತಿಯೇನು ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
Published On - 2:31 pm, Tue, 24 November 20