ಮಂಡ್ಯ: ರೆಬೆಲ್ ಸ್ಟಾರ್ ಡಾ. ಅಂಬರೀಷ್ರ 2ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನಟನ ನೆನಪಿನಲ್ಲಿ ಅವರ ಅಭಿಮಾನಿಗಳು ನಿರ್ಮಿಸಿದ್ದ ದೇಗುಲವನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಿರ್ಮಾಣಗೊಂಡಿರೋ ಅಂಬರೀಷ್ ಗುಡಿಗೆ ಇಂದು ನಟನ ಪತ್ನಿ ಹಾಗೂ ಸಂಸದೆ ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್ ಹಾಗೂ ನಟ ದರ್ಶನ್ ಭೇಟಿಕೊಟ್ಟು ಲೋಕಾರ್ಪಣೆ ಮಾಡಿದರು.
ಗುಡಿಯೊಳಗೆ ಅಂಬಿ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿದೆ. ಗುಡಿ ಉದ್ಘಾಟನೆ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿತ್ತು. ರಸ್ತೆಗಳಲ್ಲಿ ಹಸಿರು ತೋರಣ ಮತ್ತು ಗುಡಿಗೆ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಇನ್ನು, ಗುಡಿ ಉದ್ಘಾಟನೆಗೆ ಆಗಮಿಸಿದ ನಟ ದರ್ಶನ್, ಸಂಸದೆ ಸುಮಲತಾ, ಅಭಿಷೇಕ್ ಅಂಬರೀಷ್, ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣರನ್ನು ಗ್ರಾಮದ ಬಾಗಿಲಿನಿಂದ ದೇಗುಲದವರೆಗೂ ತೆರೆದ ಜೀಪ್ನಲ್ಲಿ ಮೆರವಣಿಗೆ ಕರೆದೊಯ್ಯಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದಿದ್ದ ಅಭಿಮಾನಿಗಳು ಹಾಗೂ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮೆರವಣಿಗೆ ವೇಳೆ JCB ಮೇಲೆ ನಿಂತ ಕೆಲ ಅಭಿಮಾನಿಗಳು ಗಣ್ಯರ ಮೇಲೆ ಪುಷ್ಪವೃಷ್ಟಿ ಸಹ ಮಾಡಿದರು.
ತದ ನಂತರ, ಅಂಬಿ ದೇಗುಲದತ್ತ ಆಗಮಿಸಿದ ಗಣ್ಯರು ಗುಡಿ ಹಾಗೂ ಅಂಬರೀಷ್ರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದರು. ಬಳಿಕೆ ಪುಷ್ಪಾರ್ಚನೆ ಸಹ ಮಾಡಿದರು. ಅಂಬಿ ಗುಡಿ ಉದ್ಘಾಟನೆ ಬಳಿಕ ಬೃಹತ್ ರಕ್ತದಾನ ಶಿಬಿರಕ್ಕೂ ಚಾಲನೆ ನೀಡಿದರು.
ಇದೇ ವೇಳೆ, ಅಂಬರೀಷ್ ಸಾವನ್ನಪ್ಪಿದ್ರು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದ ಗ್ರಾಮದ ತಿಮ್ಮಯ್ಯನನ್ನು ಸಹ ನೆನೆಸಿಕೊಂಡರು. ತಿಮ್ಮಯ್ಯ ಅಂಬರೀಷ್ ಸಾವನ್ನಪ್ಪಿದ ದಿನವೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ರು. ಹಾಗಾಗಿ, ಗಣ್ಯರು ತಿಮ್ಮಯ್ಯನ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಹ ಮಾಡಿದರು.
ಕನ್ನಡ ಚಿತ್ರರಂಗ ಅಂದ್ರೆ ಆ ನಾಲ್ವರು -ಚಂದನವನದ ಆಧಾರ ಸ್ತಂಭಗಳನ್ನು ನೆನೆದ ದರ್ಶನ್
Published On - 2:26 pm, Tue, 24 November 20