AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಅಪಸ್ವರ: ಆನ್​ಲೈನ್​ನಲ್ಲಿ ಸಂಗೀತ ಅಭ್ಯಾಸ ಆಗ್ತಿದ್ಯಾ ಕ್ಲಿಷ್ಟಕರ?

ಸಂಗೀತ, ನೃತ್ಯ ಮೊದಲಾದವುಗಳು ಮಾನವನ ಮನಸ್ಸಿಗೆ ಚೈತನ್ಯವನ್ನು ನೀಡುತ್ತದೆ. ಅದೆಷ್ಟೋ ರೋಗಗಳಿಂದ ಚೇತರಿಸಿಕೊಳ್ಳಲು ಸಂಗೀತ ನೆರವಾಗಿದೆ.

ಕೊರೊನಾ ಅಪಸ್ವರ: ಆನ್​ಲೈನ್​ನಲ್ಲಿ ಸಂಗೀತ ಅಭ್ಯಾಸ ಆಗ್ತಿದ್ಯಾ ಕ್ಲಿಷ್ಟಕರ?
ಆನ್​ಲೈನ್​ ಸಂಗೀತದ ಕ್ಲಾಸ್​
shruti hegde
| Updated By: KUSHAL V|

Updated on:Nov 24, 2020 | 5:12 PM

Share

ಕಲೆ ಮತ್ತು ಸಂಸ್ಕೃತಿಗೆ ಹೆಸರಾಗಿರುವ ದೇಶ ಅಂದರೆ ನಮ್ಮ ಭಾರತ. ಸಂಗೀತ, ನೃತ್ಯ ಮೊದಲಾದವುಗಳು ಮಾನವನ ಮನಸ್ಸಿಗೆ ಚೈತನ್ಯವನ್ನು ನೀಡುತ್ತದೆ. ಅದೆಷ್ಟೋ ರೋಗಗಳಿಂದ ಚೇತರಿಸಿಕೊಳ್ಳಲು ಸಂಗೀತ ನೆರವಾಗಿದೆ. ಕೊರೊನಾ ಹಾವಳಿ ಜಾಸ್ತಿಯಾಗುತ್ತಿದ್ದಂತೆ ಲಾಕ್​ಡೌನ್ ಜಾರಿಗೊಳಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾಯಿತು. ಇದರಿಂದ ಸಂಗೀತದ ವಿದ್ಯಾರ್ಥಿಗಳ ಕಲಿಕೆ ಅರ್ಧದಲ್ಲೇ ನಿಂತು ಹೋಯ್ತು. ಗುರು ಶಿಷ್ಯರು ಏಕಾಗ್ರತೆಯಿಂದ ಕೂತು ತಾಳ, ಲಯ, ಶೃತಿಯೊಡನೆ ಧ್ವನಿ ಹೊರಡಿಸುವ ಬದಲು ಮೊಬೈಲ್ ಎದುರು ಕೂರಬೇಕಾಗಿರುವುದು ವಿಷಾದನೀಯ.

ಆನ್​ಲೈನ್ ಸಂಗೀತ ಶಿಕ್ಷಣ ಪದ್ಧತಿ : 1. ಗುರು ಶಿಷ್ಯ ಪರಂಪರೆ: ಸಂಗೀತದಲ್ಲಿ ಶಿಷ್ಯರು ಗುರುವಿನ ಎದುರು  ಕೂತು ಅವರು ಹೇಳಿಕೊಟ್ಟಂತೆ  ಅಭ್ಯಾಸಮಾಡುವ ಪದ್ಧತಿ ಇದೆ. ಗುರು ಹೇಳಿಕೊಟ್ಟಂತೆ ತಾಳ, ಲಯ, ಶೃತಿಬದ್ಧವಾಗಿ ಶಿಷ್ಯರು ಸಂಗೀತ ಅಭ್ಯಾಸ ಮಾಡಬೇಕು. ಆದರೆ, ಕೊರೊನಾದಿಂದಾಗಿ ಈ ರೀತಿಯ ಮಾರ್ಗದರ್ಶನಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.

2. ಆನ್​ಲೈನ್ ಸಂಗೀತ ಶಾಲೆ: ಆನ್​ಲೈನ್​ ಮೂಲಕ ಸಂಗೀತ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಸಂಗೀತವು ಪದೇ ಪದೇ ಹಾಡುತ್ತಾ, ಅಭ್ಯಾಸ ಮಾಡುತ್ತಾ ಗ್ರಹಿಸುವಂಥ ವಿದ್ಯೆ. ಹಾಗೂ ಪದಗಳ ಉಚ್ಛಾರಣೆಯ ಜೊತೆಗೆ, ಧ್ವನಿಯ ಧಾಟಿಯ ಏರಿಳಿತ ಸರಿಯಾಗಿರಬೇಕು. ಹಾಗಾಗಿ, ಆನ್​ಲೈನ್ ಸಂಗೀತ ಶಿಕ್ಷಣದಿಂದ ಸಂಗೀತಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ.

3. ಮಕ್ಕಳಲ್ಲಿ ಏಕಾಗ್ರತೆ ಕೊರತೆ: ನಿಷ್ಠೆಯಿಂದ ಗುರು ಹೇಳಿಕೊಡುವ ಶಿಕ್ಷಣವನ್ನು ಶಿಷ್ಯ ಪಾಲಿಸಬೇಕು. ಧ್ವನಿಗೆ ದನಿಗೂಡಿಸಿ ಹಾಡುತ್ತಾ ಸಂಗೀತಾಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಮೂಡುತ್ತದೆ. ಆನ್ ಲೈನ್​ ವ್ಯವಸ್ಥೆಯಲ್ಲಿ ಮಕ್ಕಳು ಏಕಾಗ್ರತೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ.

4. ತಪ್ಪುಗಳನ್ನು ತಿದ್ದಿ ಹೇಳಿಕೊಡುವುದು ಕಷ್ಟ: ಪ್ರಾರಂಭಿಕ ಹಂತದ ಮಕ್ಕಳಲ್ಲಿ ಸರಿ ತಪ್ಪುಗಳನ್ನು ಆನ್​ಲೈನ್​ ಮೂಲಕ ಅರ್ಥ ಮಾಡಿಸುವುದು ಕಷ್ಟ. ಚಿಕ್ಕ ಮಕ್ಕಳು, ಶಿಕ್ಷಕರು ಹೇಳಿಕೊಡುವ ಸಂಗೀತ ಸ್ವರಗಳ ಧಾಟಿಗೆ ತಮ್ಮ ಧ್ವನಿಯನ್ನು ಶೃತಿಗೆ ಸರಿಯಾಗಿ ಹಾಡುವುದು ಆನ್​ಲೈನ್​ ಶಿಕ್ಷಣ ಪದ್ಧತಿಯಿಂದ ಕಷ್ಟವಾಗುತ್ತಿದೆ.

5. ಆನ್​ಲೈನ್​ ಶಿಕ್ಷಣ ಅನಿವಾರ್ಯ: ಮೊದಲಿಂದಲೂ ಗುರು ಶಿಷ್ಯ ಪರಂಪರೆಯ ಮೂಲಕ ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆನ್​ಲೈನ್​ ಶಿಕ್ಷಣ ಅನಿವಾರ್ಯವಾಗಿದೆ. ಜೊತೆಗೆ, ಸಂಗೀತದ ಹಿಡಿತವಿದ್ದ ಮಕ್ಕಳಿಗೆ ಆನ್​ಲೈನ್​ ವ್ಯವಸ್ಥೆಯಲ್ಲಿ ಅಭ್ಯಾಸಮಾಡುವುದು ನಿರಂತರತೆಯನ್ನು ಕೊಡುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಈ ಪರಿಸ್ಥಿತಿಗೆ ಅನಿವಾರ್ಯ ಹೊಂದಿಕೊಳ್ಳಲೇ ಬೇಕಾಗಿದೆ.

ಕೊರೊನಾ ಕಾರಣದಿಂದಾಗಿ ಗುರು ಶಿಷ್ಯ ಪರಂಪರೆಯ ಕೊರತೆ ಉಂಟಾಗಿದೆ. ಆನ್​ಲೈನ್​ ಶಿಕ್ಷಣ ಪದ್ಧತಿಯಿಂದ ಸಂಗೀತಾಭ್ಯಾಸ ಕಷ್ಟಕರ. ಏಕೆಂದರೆ, ತಪ್ಪು-ಸರಿಗಳನ್ನು ಮಕ್ಕಳಿಗೆ ತಿದ್ದಿ ಹೇಳಿಕೊಡಲು ತೊಂದರೆಯಾಗುತ್ತಿದೆ. ಮೊದಲಿನಿಂದ ಸಂಗೀತಾಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಗಳಲ್ಲಿ ಆನ್​ಲೈನ್​ ಶಿಕ್ಷಣ ಪದ್ಧತಿ ಕಲಿಕೆಯಲ್ಲಿ ನಿರಂತರತೆಯನ್ನು ತಂದುಕೊಟ್ಟರೂ, ಪ್ರಾರಂಭಿಕ ಹಂತದ ವಿದ್ಯಾರ್ಥಿಗಳಿಗೆ ಆನ್​ಲೈನ್​ ವ್ಯವಸ್ಥೆ ಕಷ್ಟ. ಕೊರೊನಾ ಮಹಾಮಾರಿ ಬೇಗ ದೇಶದಿಂದ, ಇಡೀ ಪ್ರಪಂಚದಿಂದ ಹೊರಟು ಹೋಗಲಿ. ಮೊದಲಿನಂತೆಯೇ ಸಂಗೀತಾಭ್ಯಾಸವು ಪ್ರಾರಂಭವಾಗಲೀ ಎಂದು ಸಂಗೀತಗಾರ್ತಿ ಪ್ರತಿಮಾ ಸತೀಶ್ ಭಟ್ ಮಾಳ್​ಕೊಪ್ಪ ಅಭಿಪ್ರಾಯಪಟ್ಟಿದ್ದಾರೆ. ಶ್ರುತಿ ಹೆಗಡೆ. ಶಿರಸಿ

Published On - 5:11 pm, Tue, 24 November 20