
ಮಂಡ್ಯ: ಎಲ್ಲೆಡೆ ಕೊರೊನಾ ಹೆಚ್ಚಾಗುತ್ತಿದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಹೇಳುತ್ತಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ವರದಿಯಾಗಿದೆ.
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಮೊಸಳೆ ಕೊಪ್ಪಲು ಗ್ರಾಮದ ಆಶಾ ಕಾರ್ಯಕರ್ತೆ, ಗ್ರಾಮಸ್ಥರಿಗೆ ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿನಿಂದ ಬರುವವರ ಜತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ತಿಳಿ ಹೇಳುತ್ತಿದ್ದರು. ಇದು ಬೆಂಗಳೂರಿನಿಂದ ಆಗಾಗ ಗ್ರಾಮಕ್ಕೆ ಬರುತ್ತಿದ್ದ ಮಂಜೇಗೌಡ ಎಂಬ ವ್ಯಕ್ತಿಗೆ ಸಿಟ್ಟು ತರಿಸಿದೆ. ಹೀಗಾಗಿ ಆತ ಮತ್ತು ಆತನ ಸಹಚರರಾದ ಚಂದನ್, ದರ್ಶನ್, ದೇವರಾಜು, ರಘು, ಪ್ರಸನ್ನ ಹಾಗೂ ಅಭಿ ಎಂಬುವವರು ಸೇರಿ ಆಶಾ ಕಾರ್ಯಕರ್ತೆ ಮತ್ತು ಆಕೆಯ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ಹಲ್ಲೆಗೊಳಗಾಗಿರುವ ಆಶಾ ಕಾರ್ಯಕರ್ತೆ ಮತ್ತು ಆಕೆಯ ಗಂಡನಿಗೆ ಗಂಭೀರ ಗಾಯಗಳಾಗಿದ್ದು, ಕೆಆರ್ ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೆಆರ್ ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಆಶಾ ಕಾರ್ಯಕರ್ತೆಯ ಮೇಲೆ ಈ ರೀತಿ ಹಲ್ಲೆ ಮಾಡಿದ್ದು ಇನ್ನುಳಿದ ಆಶಾ ಕಾರ್ಯಕರ್ತೆಯಲ್ಲಿ ಭಯ ಮೂಡಿಸಿದೆ. ತಮಗೆ ಸೂಕ್ತ ರಕ್ಷಣೆ ನೀಡಿ, ಇಲ್ಲವಾದ್ರೆ ನಮ್ಮ ಪಾಡಿಗೆ ನಮ್ಮನ್ನ ಬಿಟ್ಟುಬಿಡಿ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.