ತುಮಕೂರು ಸೆ.16: ಲೋಕಸಭಾ ಚುನಾವಣೆಗೆ (Loksabha Election) ಈಗಿರುವ ಸಮುದಾಯಕ್ಕಿಂತ ಇನ್ನೂ ಹೆಚ್ಚಿನ ಸಮುದಾಯಗಳ ಬೆಂಬಲ ಪಡೆಯಲು ಮೂರು ಉಪಮುಖ್ಯಮಂತ್ರಿ (DCM) ಹುದ್ದೆ ಸೃಷ್ಟಿ ಮಾಡಬೇಕು ಎನ್ನುವುದು ನನ್ನ ಮನವಿ. ಈ ಒಂದು ವಿಶ್ವಾಸಕ್ಕೆ ಪೂರಕವಾಗಿ ಇನ್ನೂ ಹೆಚ್ಚು ಸಮುದಾಯಗಳ ಬೆಂಬಲ ನೀಡಲು ಅನುಕೂಲ ಆಗುತ್ತೆ ಎನ್ನುವ ದೃಷ್ಟಿಯಲ್ಲಿ ಮನವಿ ಮಾಡಿದ್ದೇನೆ. ಪರಿಶಿಷ್ಟ ಜಾತಿ ಪಂಗಡ ಸಮುದಾಯದ, ಅಲ್ಪಸಂಖ್ಯಾತದಿಂದ ಮತ್ತು ವೀರಶೈವ ಸಮುದಾಯದ ಓರ್ವ ಮುಖಂಡನನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿದರು.
ನಿಮ್ಮ ಈ ಮನವಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನಗೊಳ್ಳಲ್ಲವಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಡಿಕೆ ಬ್ರದರ್ಸ್ ಹೇಗೆ ಅಸಮಾಧಾನ ಆಗುತ್ತಾರೆ. ಈಗಾಗಲೇ ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ಪಕ್ಷ ಸಂಘಟನೆ ಮಾಡುವ ಚಾಣಾಕ್ಷತನ ಇದೆ. ಅವರು ಅಸಮಾಧಾನಗೊಳ್ಳುವ ಸಂದರ್ಭ ಉದ್ಭವವಾಗುವುದಿಲ್ಲ, ಅನ್ನೋದು ನನ್ನ ಭಾವನೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಕೈಹಿಡಿದೆ. ಈ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಿದರೇ ಪಕ್ಷಕ್ಕೆ ಲಾಭ ಆಗುತ್ತದೆ ಎನ್ನುವುದು ವೈಯಕ್ತಿಕ ಅಭಿಪ್ರಾಯ. ಪಕ್ಷದ ಹೈಕಮಾಂಡ್ಗೆ ಮುಟ್ಟಿಸುವ ಕೆಲಸ ನಾವು ಮಾಡೊದು ಸೂಕ್ತ. ಹೈಕಮಾಂಡ್ಗೆ ಪತ್ರ ಬರೆಯಬೇಕೆಂದು ಎಂದುಕೊಂಡಿದ್ದೇನೆ. ಹೈದರಾಬಾದ್ನಲ್ಲಿ ವರ್ಕಿಂಗ್ ಕಮಿಟಿ ಮಿಟಿಂಗ್ ಇರುವ ಕಾರಣ ನಾಯಕರು ಬ್ಯುಸಿ ಆಗಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಕೇಂದ್ರ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ವಾಲ್ಮೀಕಿ ಸಮುದಾಯದವರು ಸಿಎಂ ಆಗಬೇಕು ಎಂದ ಸ್ವಾಮೀಜಿ, ಸತೀಶ್ ಜಾರಕಿಹೊಳಿಗೆ ಅರ್ಹತೆ ಇದೆ ಎಂದ ಸಚಿವ ಕೆಎನ್ ರಾಜಣ್ಣ
ಹೈಕಮಾಂಡ್ ಯಾರಿಗೆ ಬೇಕಾದರೂ ಡಿಸಿಎಂ ನೀಡಲಿ. ಕಾಂಗ್ರೆಸ್ ಪಕ್ಷದಲ್ಲಿ ಏನೆ ತಿರ್ಮಾನ ಇದ್ದರು ಅದು ಹೈಕಮಾಂಡ್ ಮಾಡುತ್ತೆ. ಪಕ್ಷದ ಹಿತದೃಷ್ಟಿಯಿಂದ ಇದು ಸೂಕ್ತ. ಯಾರು ಅಭಿಪ್ರಾಯ ವ್ಯಕ್ತಪಡಿಸಿತ್ತಾರೆ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ.
ರಾಜ್ಯದಲ್ಲಿ ಸರ್ಕಾರ ತಂದ ಐದು ಯೋಜನೆಗಳು ಯಶಸ್ಸಿ ಆಗುತ್ತಿದೆ. ನಮ್ಮ ಸರ್ಕಾರಕ್ಕೆ ನುಡಿದಂತೆ ನಡೆದಿರುವ ಆತ್ಮ ವಿಶ್ವಾಸ ಇದೆ. ಲೋಕಸಭಾ ಚುನಾವಣೆ ಮನೆ ಹೊಸ್ತಿಲಲ್ಲಿ ಬಂದು ನಿಂತಿದೆ. ಆ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಅತಿಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಭವಿಷ್ಯ ನುಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ