ಮಕ್ಕಳು ಚನ್ನಾಗಿ ಓದಿ ಒಳ್ಳೆ ನೌಕರಿ ಪಡೆಯಲಿ ಅಂತಾ ಹೆತ್ತ ಜೀವಗಳು ಏನೇನೆಲ್ಲಾ ಸಾಹಸ ಮಾಡುತ್ತಾರೆ ಅಲ್ವಾ? ಹಾಗಿರುವಾಗ ತಮ್ಮ ಸಂಧ್ಯಾಕಾಲದಲ್ಲಿ ಆಸರೆಯಾಗ್ತಾರೆ ಅಂತ ತಂದೆ ತಾಯಿ ಆಸೆ ಪಡುವುದು ಸಹಜವೇ ಅಲ್ವಾ? ಆದ್ರೆ ಇಲ್ಲೊಂದು ಕಡೆ ಓದಿ ವಿದ್ಯಾವಂತನಾಗಿ ಸರ್ಕಾರಿ ನೌಕರಿಯನ್ನು ಪಡೆದು, ಜನರಿಗೆ ರಕ್ಷಣೆ ನೀಡೋ ಆರಕ್ಷಕ ಹುದ್ದೆಯಲ್ಲಿರೋನೆ ಸ್ವಂತ ತನ್ನ ಹೆತ್ತಮ್ಮನಿಗೆ ರಾಕ್ಷಸನಾಗಿ (Torture) ಪರಿಣಮಿಸಿದ್ದಾನೆ. ತಾಯಿ ಮತ್ತು ಕುಟುಂಬಕ್ಕೆ ಮಗನೇ ಮುಳ್ಳಾಗಿರುವ ಸ್ಟೋರಿಯೊಂದು ಇಲ್ಲಿದೆ ನೋಡಿ. ಕಣ್ಣೀರು ಹಾಕುತ್ತ ದಿಕ್ಕೇ ತೋಚದೆ ಪೊಲೀಸ್ ಠಾಣೆಗೆ ಅಲೆದಾಡುತ್ತಿರುವ ವೃದ್ದೆ. ಇನ್ನು, ತಾಯಿಗೆ (Mother) ಜೊತೆಯಾಗಿ ಪತ್ನಿಯನ್ನ ಕರೆದುಕೊಂಡು ಬಂದಿರೋ ಸಹೋದರ. ಇವರ ಅಲೆದಾಟ ನೋಡಿದ್ರೆ ಎಂತಹವರಿಗೂ ಕರುಳು ಚುರಕ್ ಅನ್ನುತ್ತದೆ. ಹೀಗೆ ಅಲೆದಾಡುತ್ತಿರುವ ಇವರೇನು ನಿರ್ಗತಿಕರು, ಯಾರೂ ದಿಕ್ಕೆ ಇಲ್ಲದವರು ಅಂದುಕೊಳ್ಳಬೇಡಿ. ಈ ತಾಯಿಯ ಹೆಸರು ನಿಂಗಮ್ಮ ಗೊರವರ್, ಕೊಪ್ಪಳ (Koppal Police) ತಾಲೂಕಿನ ಬೆಟಗೇರಿ ನಿವಾಸಿ. ಈಕೆಯ ಜೊತೆ ಇರೋದು ನಿಂಗಮ್ಮ ಮತ್ತು ಕಿರಿಯ ಮಗ ಮಂಜುನಾಥ ಕೊರವರ್.
ಇವರೆಲ್ಲಾ ಅದ್ಯಾಕೆ ಕಣ್ಣೀರು ಹಾಕ್ತಿದ್ದಾರೆ ಅಂದುಕೊಂಡಿರಾ? ಇಲ್ಲೇ ಇರೋದು ವಿಷಯ. ನಿಂಗಮ್ಮ ಅವರ ಹಿರಿಯ ಮಗ ಮಲ್ಲೇಶಪ್ಪ ಇವರಿಗೆ ಕಿರುಕುಳ ನೀಡ್ತಿದ್ದಾನಂತೆ. ಈ ಮಲ್ಲೇಶಪ್ಪ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದು, ಕೊಪ್ಪಳ ಜಿಲ್ಲೆ ಕುಕುನೂರು ಪೊಲೀಸ್ ಠಾಣೆಯಲ್ಲಿ (Kukunoor police station) ಕರ್ತವ್ಯ ಮಾಡ್ತಾನೆ. ಸದ್ಯ ಈ ಪೊಲೀಸಪ್ಪನ ಕಾಟಕ್ಕೆ ಈ ತಾಯಿ ಮಗ ಇಬ್ಬರು ಹೈರಾಣಾಗಿದ್ದಾರೆ. ಪಿರ್ತಾರ್ಜಿತ ಆಸ್ತಿಯಲ್ಲಿ ತಾಯಿಗೆ ಹಾಗೂ ಕಿರಿಯ ಮಗನಿಗೆ ಪಾಲು ಕೊಡದೆ ಇಬ್ಬರ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಸಹೋದರ ಹಾಗೂ ಹೆತ್ತ ತಾಯಿಯ ಮೇಲೆಯೇ ಹಲ್ಲೆ ಮಾಡಿ, ವಿಕೃತಿ ಮೆರೆದಿದ್ದಾನಂತೆ. ಹೀಗಾಗೇ ಮಗನ ಕಿರುಕುಳ ತಾಳಲಾರದೇ ಖುದ್ದು ಹೆತ್ತಕರುಳೇ ಕೊಪ್ಪಳ ಎಸ್ಪಿ ಅವರಿಗೆ ದೂರು ನೀಡಿದ್ದಾರೆ. ತನ್ನ ಮಗನಿಂದ ತಮಗೆ ನೆಮ್ಮದಿಯಾಗಿ ಬದಕುಲು ಬಿಡಿ ಎನ್ನುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಹಿರಿಯ ಮಗ ಮಲ್ಲೇಶಪ್ಪ ನಿರಂತರವಾಗಿ ತಾಯಿ ಹಾಗೂ ಸಹೋದರನಿಗೆ ತೊಂದರೆ ನೀಡುತ್ತ ಬಂದಿದ್ದಾನೆ. ತಾಯಿಯ ಹೆಸರಲ್ಲಿದ್ದ ಕೊಪ್ಪಳದ ಮನೆ ಕೂಡಾ ಮಾರಾಟ ಮಾಡಿದ್ದಲ್ಲದೇ, ಒಂದು ಬಿಡಿಗಾಸು ಹಣ ಕೊಡದೆ ಯಾಮಾರಿಸಿದ್ದಾನಂತೆ. ಬೇರೆ ಕಡೆ ಮನೆ ಖರೀದಿ ಮಾಡಿ ತನ್ನ ಹೆಂಡತಿಯ ಸಹೋದರನ ಹೆಸರಿಗೆ ಮಾಡಿಸಿದ್ದಾನೆ.
ಇತ್ತ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿಯೂ ತಾಯಿ ಮಗ ಉಳುಮೆ ಮಾಡಿ ಜೀವನ ನಡೆಸಲು ಅವಕಾಶ ಕೊಡುತ್ತಿಲ್ಲ. ಇಲ್ಲ ಸಲ್ಲದ ಆರೋಪ ಮಾಡಿ ದಬ್ಬಾಳಿಕೆ ಮಾಡ್ತಾನೆ. ಈತನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲು ಹೋದ್ರೆ ಪೊಲೀಸರು ದೂರು ಪಡೆದುಕೊಳ್ಳುತ್ತಿಲ್ಲ. ಮಗ ಪೊಲೀಸ್ ಆಗಿರೋ ಕಾರಣ ಪೊಲೀಸರು ಕೂಡಾ ನಮ್ಮ ಸಹಾಯಕ್ಕೆ ಬರ್ತಾಯಿಲ್ಲ. ಹೀಗೆ ಆದ್ರೆ ನಾವು ಬದುಕೋದು ಹೇಗೆ ಅಂತ ಮಲ್ಲೇಶನ ಸಹೋದರ ಕಣ್ಣಿರು ಹಾಕುತ್ತಿದ್ದಾರೆ..
ಸದ್ಯ ಮಗನೇ ಪೊಲೀಸ್ ಇಲಾಖೆಯಲ್ಲಿ ಇದ್ರೂ ಆತನಿಂದ ನ್ಯಾಯಕ್ಕಾಗಿ ಈ ತಾಯಿ ಅಲೆದಾಡುತ್ತಿದ್ದಾಳೆ .ಆರಕ್ಷನಾಗಿರೋ ಮಗ ಮಲ್ಲೇಶಪ್ಪ ಹೆತ್ತ ತಾಯಿಯ ಪಾಲಿಗೆ ರಾಕ್ಷಸನಾಗಿದ್ದಾನೆ. ಸದ್ಯ ಮಗನಿಂದ ನ್ಯಾಯ ಕೊಡಿಸಿ, ಬದುಕೋಕೆ ಅವಕಾಶ ಕೊಡಿ ಅಂತಾ ಕೇಳ್ತಿದ್ದಾಳೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ದೂರು ಪಡೆದು ಈ ತಾಯಿಗೆ ನ್ಯಾಯ ಕೊಡಿಸ್ತಾರಾ ಕಾದು ನೋಡಬೇಕಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ