ಕೋಲಾರ: ಚಿಕಿತ್ಸೆ ಫಲಿಸದೆ ಸೋಂಕಿತರು ಮೃತಪಟ್ಟಿರುವುದನ್ನು ಕಂಡಿದ್ದೇವೆ. ಚಿಕಿತ್ಸೆಯೇ ಸಿಗದೆ ಸಾವು ಕಂಡ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಇಲ್ಲೊಬ್ಬ ಕೊರೊನಾ ಸೋಂಕಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮ್ಮನಿಗೆ ವಕ್ಕರಿಸಿದ್ದ ಮಹಾಮಾರಿ, ತನಗೂ ವಕ್ಕರಿಸಬಹುದು ಅಂತಾ ಹೆದರಿ ಸಾವಿನ ಮನೆ ಸೇರಿದ್ದಾನೆ.
ಕೊರೊನಾ ಕಂಟಕ ಎದುರಿಸಲಾಗದೆ ಕರುನಾಡು ಕಂಗಾಲಾಗಿ ಹೋಗಿದೆ. ಒಂದ್ಕಡೆ ದಿನನಿತ್ಯ ಸಾವಿರ, ಸಾವಿರ ಕೇಸ್ಗಳು ಕನ್ಫರ್ಮ್ ಆಗುತ್ತಿವೆ. ಇನ್ನೊಂದ್ಕಡೆ ಸೋಂಕು ಎಲ್ಲಿ ತಮಗು ಹಬ್ಬಿಬಿಡುತ್ತೋ ಅನ್ನೋ ಭಯ ಎಲ್ಲರನ್ನೂ ಕಾಡುತ್ತಿದೆ. ಈ ಭಯದಲ್ಲೇ ಚಿನ್ನದ ನಾಡು ಕೋಲಾರದಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ.
ತಮ್ಮನಿಗೆ ಕೊರೊನಾ ವಕ್ಕರಿಸಿದ್ದಕ್ಕೆ ಅಣ್ಣ ಆತ್ಮಹತ್ಯೆಗೆ ಶರಣು?
ಹೌದು ಇಂತಹದ್ದೊಂದು ಧಾರುಣ ಘಟನೆ ನಡೆದಿರೋದು ಕೋಲಾರದ ಗಾಂಧಿನಗರದಲ್ಲಿ. ಈಗ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯ ತಮ್ಮನಿಗೆ ಕೊರೊನಾ ಸೋಂಕು ವಕ್ಕರಿಸಿತ್ತು. 30 ವರ್ಷದ ತಮ್ಮನಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಮ್ಮನನ್ನು ಆಸ್ಪತ್ರೆಗೆ ದಾಖಲಿಸಿದ ವಿಷಯ ತಿಳಿಯುತ್ತಿದ್ದಂತೆ, ಅಣ್ಣ ಬೆಚ್ಚಿಬಿದ್ದಿದ್ದಾನೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದವನೇ ವಿಷಯ ತಿಳಿದು ಸೀದಾ ಮನೆಯ ಒಳಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈಗಾಗಲೇ ತಮ್ಮನಿಗೆ ಕೊರೊನಾ ಸೋಂಕು ತಗುಲಿರುವುದರಿಂದ, ಈತನೇ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಮೃತ ವ್ಯಕ್ತಿ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗುತ್ತಿದೆ.
ಕುಟುಂಬಸ್ಥರಿಗೆ ಧೈರ್ಯ ಹೇಳಿದ ಅಧಿಕಾರಿಗಳು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಲ್ ಪೇಟೆ ಪೊಲೀಸರು ಆಗಮಿಸಿದ್ರು. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಭೇಟಿ ನೀಡಿದ್ರು. ಈ ವೇಳೆ ಮೃತನ ಕುಟುಂಬಸ್ಥರ ಜತೆ ಮಾತನಾಡಿದ ಅಧಿಕಾರಿಗಳು ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಕೊರೊನಾ ಗುಣಪಡಿಸಬಹುದಾದ ಸೋಂಕಾಗಿದ್ದು, ಯಾರೂ ಭಯಪಡಬೇಕಾಗಿಲ್ಲ ಅಂತಾ ಧೈರ್ಯ ತುಂಬಿದ್ದಾರೆ.
ಗಲ್ ಪೇಟೆ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದ್ದು, ಸಾವಿಗೆ ನಿಖರವಾದ ಕಾರಣ ಏನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಸೋಂಕಿಗೆ ಹೆದರಿ ಯಾರೂ ಕೂಡ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಅಂತಾ ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.