ಚಿಕ್ಕಮಗಳೂರು: ಚಾಲಕನೆ ಇಲ್ಲದೆ ಚಲಿಸುತ್ತಿದ್ದ ಕಾರನ್ನ ಹಿಂದೆ ಬರುತಿದ್ದ ಬೈಕ್ ಸವಾರನ್ನೊಬ್ಬ ಕಂಟ್ರೋಲ್ ಗೆ ತೆಗೆದುಕೊಂಡು ನಡೆಯ ಬೇಕಿದ್ದ ಅನಾಹುತವೊಂದನ್ನ ಕೂದಲೆಳೆ ಅಂತರದಲ್ಲಿ ತಪ್ಪಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಹೌದು, ಮಾರುತಿ 800 ಕಾರಿನಲ್ಲಿ ಬಂದ ವ್ಯಕ್ತಿ, ರಸ್ತೆ ಪಕ್ಕ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದಾನೆ. ಅದೇ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಯುವತಿ ಕೂಡ ಅದೇನು ನೆನಪಾಯಿತೋ ಗೊತ್ತಿಲ್ಲ. ಡೋರ್ ತೆಗೆದು ಕಾರಿನಿಂದ ಕೆಳಗಿಳಿದಿದ್ದಾಳೆ ಅಷ್ಟೇ. ನಿಂತಿದ್ದ ಕಾರು ಚಾಲಕನಿಲ್ಲದೇ ಚಲಿಸಲು ಆರಂಭಿಸಿದೆ.
ಅಕ್ಕಪಕ್ಕದಲ್ಲಿದ್ದ ಎಲ್ಲರಿಗೂ ಶಾಕ್..!
ಅಷ್ಟೊತ್ತಿಗಾಗಲೇ ಸ್ಕೂಟಿಯಲ್ಲಿ ಬಂದು ಕಾರಿನ ಹಿಂಭಾಗದಲ್ಲಿ ಪಾರ್ಕ್ ಮಾಡಿಕೊಂಡು ನಿಂತಿದ್ದ ಸವಾರ ಓಡಿಬಂದು ಕಾರ್ ಡೋರ್ ತೆಗೆದು ಡ್ರೈವರ್ ಸೀಟಿನಲ್ಲಿ ಕುಳಿತು, ಕೂಡಲೇ ಕಾರಿನ ಬ್ರೇಕ್ ಹಾಕಿ, ಕಾರನ್ನು ಕಂಟ್ರೋಲ್ ಗೆ ತೆಗೆದುಕೊಂಡು ನಿಲ್ಲಿಸಿದ್ದಾನೆ!
ಅದೇ ರಸ್ತೆಯಲ್ಲಿ ಸಣ್ಣ ಮಕ್ಕಳ ಓಡಾಟ ಸೇರಿದಂತೆ ಜನಜಂಗುಳಿ ಹೆಚ್ಚಿತ್ತು. ಆದ್ರೆ ಥೇಟ್ ಸಿನಿಮಾ ಹೀರೋನಂತೆ ಬಂದ ವ್ಯಕ್ತಿ ಸಂಭವಿಸಬಹುದಾದ ಅನಾಹುತವನ್ನು ಕ್ಷಣ ಮಾತ್ರದಲ್ಲಿ ತಡೆದು ಸಾಹಸ ಮೆರೆದಿದ್ದಾರೆ. ಕಾರು ಚಾಲಕನ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದ್ದು, ಬೈಕ್ ಸವಾರ ಕಾರನ್ನ ಕಂಟ್ರೋಲ್ ಗೆ ತೆಗೆದುಕೊಂಡು ಸಮಯ ಪ್ರಜ್ಞೆ ಮೆರೆದಿರುವುದು ನಿಜಕ್ಕೂ ಶ್ಲಾಘನೀಯ.
Published On - 12:35 pm, Sat, 11 July 20