ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಸಂಬಂಧ ಬೆನ್ನತ್ತಿದ್ದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಉಡುಪಿ ಮೂಲದ ಇಂಜಿನಿಯರಿಂಗ್ ಪದವೀಧರನ ಮೇಲೆ ಪೊಲೀಸರು ಡೌಟ್ ಪಟ್ಟಿದ್ದಾರೆ. ಮೇಲ್ನೋಟಕ್ಕೆ ಏರ್‌ಪೋರ್ಟ್ ಅಧಿಕಾರಿಗಳ ಮೇಲಿನ ಸಿಟ್ಟಿಗೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಏರ್‌ಪೋರ್ಟ್ ಅಧಿಕಾರಿಗಳ ಮೇಲಿನ ಸಿಟ್ಟಿಗೆ ಕೃತ್ಯ?
ಇಂಜಿನಿಯರಿಂಗ್ ಪದವೀಧರ ಆದಿತ್ಯ ಬಾಂಬ್ ಇಟ್ಟಿದ್ದೇನೆ ಎಂದು ಫೋನ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಉಡುಪಿ ಮೂಲದ ಆದಿತ್ಯ ಅರ್ಜಿ ಸಲ್ಲಿಸಿದ್ದ. ಆದ್ರೆ ಸೂಕ್ತ ದಾಖಲೆ ಕೊಡದ ಹಿನ್ನೆಲೆಯಲ್ಲಿ ಆತನಿಗೆ ಕೆಲಸ ಸಿಕ್ಕಿರಲಿಲ್ಲ. ಇದರಿಂದ ಸಿಟ್ಟಿಗೆದ್ದು ವಿಮಾನ ಮತ್ತು ಪಾರ್ಕಿಂಗ್ ಲಾಟ್‌ನಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಎರಡು ಬಾರಿ ಹುಸಿ ಬಾಂಬ್ ಕರೆ ಮಾಡಿದ್ದ. ಈ ಸಂಬಂಧ 2018ರ ಆಗಸ್ಟ್ನಲ್ಲಿ ಆರೋಪಿ ಆದಿತ್ಯನನ್ನು ಬೆಂಗಳೂರು ಏರ್‌ಪೋರ್ಟ್ ಪೊಲೀಸರು ಬಂಧಿಸಿದ್ದರು.
2018ರಲ್ಲಿ ಎರೆಡೆರಡು ಬಾರಿ ಹುಸಿ ಬಾಂಬ್ ಕರೆಮಾಡಿ ತಗಲಾಕ್ಕೊಂಡಿದ್ದ ಆರೋಪಿ ಬಗ್ಗೆ ಮಂಗಳೂರು ಪೊಲೀಸರಿಗೆ ಕೆಐಎಎಲ್ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೆಸ್ಟ್ ಆದ ಸಂದರ್ಭದಲ್ಲಿ ಕಚ್ಚಾ ಬಾಂಬ್ ತಯಾರಿಕೆ ಬಗ್ಗೆ ಗೊತ್ತಿರುವುದಾಗಿ ಆರೋಪಿ ಹೇಳಿಕೊಂಡಿದ್ದ. ಆರೋಪಿಯ ಸಂಪೂರ್ಣ ಮಾಹಿತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಮಂಗಳೂರು ಪೊಲೀಸರಿಗೆ ನೀಡಿದ್ದಾರೆ.
ಬಾಂಬ್ ಇಟ್ಟಿದ್ದ ಬ್ಯಾಗ್‌ನಲ್ಲಿ ಮ್ಯಾಪ್ ಪತ್ತೆ:
ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವಂತ ಬಾಂಬ್ ಇಟ್ಟಿದ್ದ ಬ್ಯಾಗ್‌ನಲ್ಲಿ ಒಂದು ಮ್ಯಾಪ್ ಪತ್ತೆಯಾಗಿದೆ. ಆರೋಪಿಗಳೇ ಬಿಡಿಸಿರುವ ಮ್ಯಾಪ್ ಪತ್ತೆಯಾಗಿದ್ದು, ಮ್ಯಾಪ್ ಡಿಕೋಡ್ ಮಾಡುವುದಕ್ಕೆ ಪೊಲೀಸರು ತಜ್ಞರ ಸಹಕಾರ ಕೋರಿದ್ದಾರೆ. ಮ್ಯಾಪ್‌ನಲ್ಲಿ ಹಲವಾರು ವಿಚಾರಗಳು ಬಹಿರಂಗವಾಗುವ ಸಾಧ್ಯತೆ ಇದೆ.
Published On - 2:20 pm, Tue, 21 January 20