ಬೆಂಗಳೂರು: ಕೇಂದ್ರೀಯ ಶಿಸ್ತು ಸಮಿತಿಯಿಂದ ನನಗೆ ನೋಟಿಸ್ ಬಂದಿಲ್ಲ. ಯಾವುದೇ ನೋಟಿಸ್ ನನ್ನ ಕೈ ಸೇರಿಲ್ಲ ಎಂದು BJP ಶಾಸಕ ಬಸನಗೌಡ ಯತ್ನಾಳ್ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ, ನಾನು ಪಕ್ಷದ ವಿರುದ್ಧ ಯಾವುದೇ ಕೆಲಸವನ್ನೂ ಮಾಡಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ನಾನು ಯಾವುದಕ್ಕೂ ಅಂಜಲ್ಲ. ಶಾಕ್ ಅನ್ನೋ ಪದ ನನ್ನ ಶಬ್ದಕೋಶದಲ್ಲಿ ಇಲ್ಲ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.
‘ನಾನು ಯಾವುದೇ ಕ್ಷಮೆ ಕೇಳುವಂಥ ವ್ಯಕ್ತಿ ಅಲ್ಲ’
ನಾನು ಸತ್ಯದ ಪರವಾಗಿ ಹೋರಾಟವನ್ನ ಮಾಡುತ್ತಿದ್ದೇನೆ. ನಾನು ಯಾವುದೇ ಕ್ಷಮೆ ಕೇಳುವಂಥ ವ್ಯಕ್ತಿ ಅಲ್ಲ. ವಿಷಾದ ವ್ಯಕ್ತಪಡಿಸುವ ವ್ಯಕ್ತಿಯೂ ಅಲ್ಲ. ನಾ ದೈವಂ ನಾ ಪಲಾಯನಂ ಅನ್ನೋದನ್ನ ನಾನು ನಂಬಿದ್ದೇನೆ ಎಂದು BJP ಶಾಸಕ ಬಸನಗೌಡ ಯತ್ನಾಳ್ ಹೇಳಿದರು. ಇನ್ನು, ಈ ಕುರಿತು ಶಾಸಕ ಯತ್ನಾಳ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಹ ಬರೆದುಕೊಂಡಿದ್ದಾರೆ.
ನಾನು ಬಹಳ ನೋಟಿಸ್ ನೋಡಿದ್ದೇನೆ. ನನನ್ನು 3 ಬಾರಿ ಉಚ್ಚಾಟನೆ ಸಹ ಮಾಡಿದ್ದಾರೆ. ನನಗೆ ಇದು ಹೊಸದೇನು ಅಲ್ಲ. ಅದಕ್ಕೆ ಬೇಕಾದ ಉತ್ತರವನ್ನೂ ನಾನು ಕೊಡ್ತೇನೆ. ಈ ಹಿಂದೆ, ನನಗೆ ನೋಟಿಸ್ ಕೊಡೋಕೆ ಡಿಮ್ಯಾಂಡ್ ಇತ್ತು. ನಾನು ಎಲ್ಲವನ್ನೂ ಎದುರಿಸುತ್ತೇನೆ. ನಾನು ಯಾವತ್ತೂ ಹೆದರಿದವನಲ್ಲ. ಪಕ್ಷೇತರನಾಗಿ ನಾನು ಪರಿಷತ್ಗೆ ಬಂದಿದ್ದೆ. ನನ್ನನ್ನ ಅಮಿತ್ ಶಾ ಅವರೇ ಕರೆದು ಅವಕಾಶ ಕೊಟ್ರು. ಅವರ ಸೂಚನೆ ಮೇರೆಗೆ ನಾನು ಬಿಜೆಪಿಗೆ ಸೇರಿದ್ದು. ಯತ್ನಾಳ್ ಪಕ್ಷಕ್ಕೆ ಲಾಭ ಅಂತಾನೇ ನನ್ನನ್ನು ತೆಗೆದುಕೊಂಡಿದ್ದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಈ ಹಿಂದೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ BJP ಕೇಂದ್ರೀಯ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆಡಳಿತ ಪಕ್ಷದ ಶಾಸಕರಾಗಿ BJPಯ ಶಿಸ್ತು ಉಲ್ಲಂಘನೆ ಮತ್ತು ಸರ್ಕಾರಕ್ಕೆ ಮುಜುಗರ ತಂದ ಆರೋಪದಡಿ ಶಾಸಕರಿಗೆ ನೋಟಿಸ್ ಜಾರಿಯಾಗಿತ್ತು. ಜೊತೆಗೆ, ಕೂಡಲೇ ಸೂಕ್ತ ಉತ್ತರ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿತ್ತು.
‘41 ಶಾಸಕರು ಸಿಎಂ ಕರೆದಿದ್ದ ಔತಣಕೂಟಕ್ಕೆ ಹೋಗಿಲ್ಲ’
ಸಿಎಂ ಬಿ.ಎಸ್.ಯಡಿಯೂರಪ್ಪರ ಔತಣಕೂಟಕ್ಕೆ ಶಾಸಕರು ಗೈರಾದ ವಿಚಾರವಾಗಿ 41 MLAಗಳು ಸಿಎಂ ಕರೆದಿದ್ದ ಔತಣಕೂಟಕ್ಕೆ ಹೋಗಿಲ್ಲ. ಹೋಗಿದ್ದವರೂ ನಾಮ್ ಕಾ ವಾಸ್ತೆಗೆ ಹೋಗಿದ್ದಷ್ಟೇ. ಕ್ರಾಂತಿಯನ್ನ ಯಾರೂ ತಡೆಯುವುದಕ್ಕೆ ಆಗಲ್ಲ. ಒಂದೇ ಬಾರಿಗೆ ಸ್ಫೋಟಿಸಲ್ಲ, ನಿಧಾನವಾಗಿ ಸ್ಫೋಟವಾಗುತ್ತೆ. ನಾನೇ ಮುಖ್ಯಮಂತ್ರಿ ಆಗುತ್ತೇನೆ ಅಂತಾ ಹೇಳಿಲ್ಲ. ಉತ್ತರ ಕರ್ನಾಟಕ ಭಾಗದವರು ಆಗ್ತಾರೆ ಎಂದು ಹೇಳಿದ್ದೇನೆ. ಕ್ರಾಂತಿ ಆದಮೇಲೆ ಶಾಂತಿಯಾಗಲಿದೆ ಎಂದು ಯತ್ನಾಳ್ ಹೇಳಿದರು. ನೀವು ಪಾರದರ್ಶಕವಾಗಿ ರಾಜ್ಯದ ವಿಚಾರವನ್ನ ತೆರೆದಿಡಿ. ಆಗಲೇ ಕ್ರಾಂತಿ ಆಗುತ್ತದೆ ಎಂದು ಯತ್ನಾಳ್ ಹೇಳಿದರು.
‘ಶಾಸಕಾಂಗ ಪಕ್ಷದ ಸಭೆಯನ್ನ ಯಾಕೆ ಕರೆಯುತ್ತಿಲ್ಲ’
ಶಾಸಕಾಂಗ ಪಕ್ಷದ ಸಭೆಯನ್ನ ಯಾಕೆ ಕರೆಯುತ್ತಿಲ್ಲ. ವಿಭಾಗವಾರು ಶಾಸಕರ ಸಭೆ ಕರೆದಿದ್ದೇಕೆ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಹಾಕಿದರು. ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಹೋರಾಟದ ಬಗ್ಗೆ ಸಿಎಂ ಯಡಿಯೂರಪ್ಪ ಕೇವಲ ಪತ್ರವನ್ನಷ್ಟೇ ಬರೆದಿದ್ದಾರೆ. ಪತ್ರ ಎಷ್ಟು ಬೇಕಾದ್ರೂ ಬರೀಬಹುದು, ಪತ್ರಕ್ಕೆ ಜೀವ ಇಲ್ಲ. ಹಿಂದುಳಿದ ಆಯೋಗ ವರದಿ ಕೊಡಬೇಕಲ್ವಾ ಎಂದು ಹೇಳಿದರು.
ಶಾಸಕರಿಗೆ ಸಿಎಂ BSY ಎಷ್ಟು ಅನುದಾನದ ಪತ್ರ ಬರೆದಿಲ್ಲ. ಜಮೀರ್ ಅಹ್ಮದ್, ಡಿ.ಕೆ.ಶಿವಕುಮಾರ್ಗೆ ಪತ್ರ ಕೊಟ್ಟಿಲ್ವೆ? ನಮಗೇಕೆ ಸಿಎಂ ಬಿಎಸ್ವೈ ಅನುದಾನವನ್ನ ಕೊಡಲಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದರು.
‘ಹಿಂದೆ ಸಿದ್ದರಾಮಯ್ಯನವರನ್ನು ಹೊಗಳಿದ್ದೇನೆ’
ನಾನು ಯಡಿಯೂರಪ್ಪನವರ ಪರ ಎಲ್ಲೂ ಹೇಳಿಲ್ಲ. ನಾನು ಯಾವಾಗಲೂ ಜನಪರವೇ. ಸಮುದಾಯ ವಿಚಾರ ಬಂದಾಗಲೂ ಹೇಳಿದ್ದೇನೆ. ಎಲ್ಲಾ ಸಮುದಾಯಗಳಿಗೂ ಅವಕಾಶ ಕೊಡಿ ಅಂದಿದ್ದೇನೆ. ಕುರುಬ, ದಲಿತ, ಮರಾಠ ಮೀಸಲಾತಿ ಬಂದಾಗಲೂ ಅದನ್ನೇ ಹೇಳ್ತೇನೆ. ಮೀಸಲಾತಿ ಎಲ್ಲರಿಗೂ ಕೊಡಲಿ ಎಂದು ಹೇಳಿದರು.
ಸಂದರ್ಭ ಬಂದಾಗ ಒಳ್ಳೆಯದರ ಬಗ್ಗೆ ಹೊಗಳ್ತೇನೆ. ಹಿಂದೆ ಸಿದ್ದರಾಮಯ್ಯನವರನ್ನು ಹೊಗಳಿದ್ದೇನೆ. ಜೆ.ಹೆಚ್.ಪಟೇಲರನ್ನೂ ನಾನು ಹೊಗಳಿದ್ದೇನೆ. ನಾನು ಒಳ್ಳೆಯದನ್ನ ಮಾಡಿದರೆ ಹೊಗಳುತ್ತೇನೆ. ಸರಿಯಾಗಿ ನಡೆಯದಿದ್ದರೆ ತೆಗಳುತ್ತೇನೆ. ಸರ್ಕಾರದಲ್ಲಿ ತಪ್ಪಾಗಿದ್ದರೂ ನಾನು ಛೇಡಿಸುತ್ತೇನೆ. ನಾನು ಯಾರ ಮುಲಾಜಿನಲ್ಲಿದ್ದು ರಾಜಕಾರಣ ಮಾಡಲ್ಲ. ನಾನು ನೇರ ರಾಜಕಾರಣ ಮಾಡುವವನು. ಸತ್ಯದ ಪರವಾಗಿ ರಾಜಕಾರಣ ಮಾಡುವವನು ಎಂದು ಯತ್ನಾಳ್ ಹೇಳಿದರು.
ಪ್ರವಾಹ ಬಂದಾಗ ಅದರ ಬಗ್ಗೆ ಮಾತನಾಡಿದ್ದೇನೆ. ನೋಟಿಸ್ ಕೊಟ್ಟರೆ ಪತ್ರದ ಮೂಲಕವೇ ಉತ್ತರ ಹೇಳ್ತೇನೆ.ನೇರ ಭೇಟಿಗೆ ಬಯಸಿದರೆ ನೇರವಾಗಿಯೇ ಹೇಳ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
‘ಇಂದೇ ನನ್ನ ರಾಜಕೀಯ ಅಂತ್ಯವಾದರೂ ಪರವಾಗಿಲ್ಲ’
ಇಂದೇ ನನ್ನ ರಾಜಕೀಯ ಅಂತ್ಯವಾದರೂ ಪರವಾಗಿಲ್ಲ. ನಾನು ಸತ್ಯ ಹೇಳುವುದನ್ನು ಮಾತ್ರ ಬಿಡುವುದಿಲ್ಲ. ನಾನು ಯಾರೊಬ್ಬರ ಬಳಿಯೂ ಕ್ಷಮೆಯಾಚಿಸುವುದಿಲ್ಲ. ನನ್ನ ಡಿಕ್ಷನರಿಯಲ್ಲಿ ಭಯ ಅನ್ನೋ ಪದಕ್ಕೆ ಜಾಗವಿಲ್ಲ. ಎಲ್ಲವೂ ನನ್ನ ಪರ ಇದೆ, ಸದ್ಯದಲ್ಲೇ ಎಲ್ಲಾ ಗೊತ್ತಾಗುತ್ತೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದನ್ನೂ ಓದಿ: ಕೇಂದ್ರ ಸಚಿವ ಸದಾನಂದ ಗೌಡ ಶಿಫಾರಸಿನಂತೆ BWSSB ಸದಸ್ಯನ ನೇಮಕ ಆರೋಪ; ಹೈಕೋರ್ಟ್ ಗರಂ
Published On - 5:36 pm, Fri, 12 February 21