ಮಂಡ್ಯ: ಕೋವಿಡ್‌ಗೆ ಚಿಕಿತ್ಸೆ ನೀಡುವ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಚಿವ ಕೆ ಸಿ ನಾರಾಯಣ ಗೌಡ ಗರಂ ಆಗಿದ್ದಾರೆ. ಅನುಭವಿ ನಾಯಕರಾಗಿರೋ ಸಿದ್ದರಾಮಯ್ಯ ಅವರು ಕೊರೊನಾದಂಥ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಸಾಥ್ ನೀಡೋದು ಬಿಟ್ಟು ಈ ರೀತಿ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಸಚಿವ ನಾರಾಯಣ ಗೌಡ, ಆರಂಭದಲ್ಲಿ ಚಿಕ್ಕಪುಟ್ಟ ವ್ಯತ್ಯಾಸ ಆಗಿರಬಹುದು. ಟೆಂಡರ್ ಕರೆಯದೆ, ರೇಟ್ ಚೆಕ್ ಮಾಡದೇ ಖರೀದಿ ಮಾಡಿರೋದು ನಿಜ. ಆಗ ನಮಗೇನು ಕನಸು ಬಿದ್ದಿತ್ತಾ ಎಂದು ಟೆಂಡರ್ ಕರೆಯದೇ ಉಪಕರಣಗಳನ್ನು ಖರೀದಿ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಜೊತೆಗೆನೇ ಈಗ ಬರುತ್ತಿರುವ ಸಾಮಗ್ರಿಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇದುವರೆಗೆ ಕೋವಿಡ್ ಚಿಕಿತ್ಸೆ ಉಪಕರಣ ಖರೀದಿಗೆ 550 ರಿಂದ 600 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. 2,000 ಕೋಟಿ ಅಕ್ರಮ ಎಂದು ಆರೋಪ ಮಾಡ್ತಿರೋದು ಸುಳ್ಳು. ನಮ್ಮ ಮುಖ್ಯಮಂತ್ರಿಗಳು ಲೂಟಿ ಮಾಡುತ್ತಿಲ್ಲ, ಹಾಗೇನೇ ಯಾರಿಗೂ ಲೂಟಿ ಮಾಡಲೂ ಬಿಡುತ್ತಿಲ್ಲ. ವಿರೋಧ ಪಕ್ಷದ ನಾಯಕರಿಗೆ ಬೇರೆ ಕೆಲಸ ಇಲ್ಲ ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ನಾರಾಯಣ ಗೌಡ ಕಿಡಿಕಾರಿದರು.