ಮೈಸೂರು: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಬೈಕ್ ಸವಾರ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಸಮೀಪ ಸಂಭವಿಸಿದೆ. ಹುಲ್ಲಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹೆಚ್.ಎಂ.ಬಸವರಾಜು(47) ಗಾಯಗೊಂಡವರು.
ಕುರಿಹುಂಡಿ ಗ್ರಾಮದ ರಸ್ತೆಯಿಂದ ಹುಲ್ಲಹಳ್ಳಿ ಗ್ರಾಮದ ಕಡೆಗೆ ಬೈಕ್ನಲ್ಲಿ ಬಸವರಾಜು ತೆರಳುತ್ತಿದ್ದರು. ಈ ವೇಳೆ ಮೊಬೈಲ್ ರಿಂಗ್ ಆಗುತ್ತಿದ್ದಂತೆ ಏಕಾಏಕಿ ಸ್ಫೋಟಗೊಂಡಿದೆ. ಮೊಬೈಲ್ ಸ್ಫೋಟದಿಂದ ನಿಯಂತ್ರಣ ಕಳೆದುಕೊಂಡ ಸವಾರ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ.
ಮೊಬೈಲ್ ಸ್ಫೋಟದಿಂದ ಬಸವರಾಜು ಎದೆ ಹಾಗೂ ಕುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಬಸವರಾಜುರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮರೆತ ವಾಹನ ಸವಾರರು:
ಮೊಬೈಲ್ ಸ್ಫೋಟಗೊಂಡು ನೆಲಕ್ಕುರುಳಿ ಬಿದ್ದು ರಸ್ತೆ ಮಧ್ಯೆ ನರಳಾಡುತ್ತಿದ್ದರೂ ತಕ್ಷಣ ಜನರು ಬೈಕ್ ಸವಾರನನ್ನು ರಕ್ಷಿಸಲು ಮುಂದಾಗಲಿಲ್ಲ. ಬೈಕ್ ಸವಾರನ ರಕ್ಷಣೆಗೆ ಧಾವಿಸದೆ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಾ ವಾಹನ ಸವಾರರು ಅಮಾನವೀಯತೆ ಮೆರೆದಿದ್ದಾರೆ. ಸಾಕಷ್ಟು ಜಾಗೃತಿ ಮೂಡಿಸಿದರು ನೊಂದವರ ನೆರವಿಗೆ ಧಾವಿಸದೆ ಕೇವಲ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿರುವುದು ಕಂಡುಬಂದಿದೆ.
Published On - 11:30 am, Mon, 17 February 20