ಮಂಡ್ಯ: ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮತ್ತೆ ಸಿಎಂ ಆದ ಮೇಲೆ ದಕ್ಷಿಣ ಭಾರತದ ಧಾರ್ಮಿಕ ಟೂರ್ ಪ್ರೋಗ್ರಾಂ ಹಮ್ಮಿಕೊಂಡಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿದ್ದ ಅವರು ಈಗ ಸಕ್ಕರೆ ನಾಡು ಮಂಡ್ಯದಲ್ಲಿರುವ ಪ್ರಖ್ಯಾತ ಚೆಲುವನಾರಾಣನ ದರ್ಶನ ಪಡೆದಿದ್ದಾರೆ.
ಹೌದು ಮಧ್ಯಪ್ರದೇಸದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಜೀಯರ್ ಮಠಕ್ಕೆ ಆಗಮಿಸಿದ್ದಾರೆ. ಕುಟುಂಬ ಸಮೇತರಾಗಿ ಬಂದಿರುವ ಅವರು, ಮಠದಲ್ಲಿ ನಡೆದ ಪೂರ್ಣ ಕುಂಭ ಸ್ವಾಗತದ ನಂತರ ಚೆಲುವನಾರಾಣನಿಗೆ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಇದಾದ ನಂತರ ಪ್ರಸಾದ ಸೇವಿಸಿದ ಸಿಎಂ ನಂತರ ಬೆಟ್ಟದ ಮೇಲಿನ ಉಗ್ರನರಸಿಂಹ ಸ್ವಾಮಿಗೂ ವಿಶೇಷ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದರು.
ಸಚಿವ ನಾರಾಯಣಗೌಡ ಸ್ವಾಗತ
ಇದಕ್ಕೂ ಮೊದಲು ಮಂಡ್ಯಕ್ಕೆ ಆಗಮಿಸಿದ ಮಧ್ಯಪ್ರದೇಶದ ಸಿಎಂಗೆ ಮಂಡ್ಯ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಇದಾದ ನಂತರ ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ ಹೂವಿನ ಹಾರ ಹಾಕಿ ವಿಶೇಷ ಅತಿಥಿಯನ್ನ ಬರಮಾಡಿಕೊಂಡರು. ನಂತರ ಮಧ್ಯಪ್ರದೇಶದ ಸಿಎಂ ಜತೆಗೆ ಧಾರ್ಮಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.
ಹೈದರಾಬಾದ್‌ನಲ್ಲೂ ವಿಶೇಷ ಪೂಜೆ
ಕರ್ನಾಟಕಕ್ಕೂ ಬರುವ ಮೊದಲು ಶಿವರಾಜ್ ಸಿಂಗ್ ಚೌಹ್ವಾಣ್ ತೆಲಂಗಾಣದ ಹೈದರಾಬಾದ್ ಹೊರವಲಯದಲ್ಲಿರುವ ಚಿನ್ನ ಜಿಯರ್ ಸ್ವಾಮಿ ಮಠದಲ್ಲಿ ಕೂಡಾ ವಿಶೇಷ ಪೂಜೆ ಸಲ್ಲಿಸಿದ್ದರು. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಅವರು ಇಂದು ಮಂಡ್ಯಕ್ಕೆ ಆಗಮಿಸಿದ್ದಾರೆ.
Published On - 5:28 pm, Fri, 26 June 20