ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆಯಲ್ಲಿ EVM ದುರ್ಬಳಕೆ ಆಗಿದೆ. ಅಷ್ಟೊಂದು ಮತಗಳ ಅಂತರದಿಂದ ಬಿಜೆಪಿ ಗೆದ್ದಿದ್ದು ಅನುಮಾನ ಮೂಡಿಸಿದೆ ಎಂದು ಹೇಳಿದ್ದ ಸಂಸದ ಡಿ.ಕೆ.ಸುರೇಶ್ಗೆ ಬಿಜೆಪಿ ಶಾಸಕ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ 2.5 ಲಕ್ಷ ಮತಗಳ ಅಂತರದಿಂದ ಗೆದ್ದಾಗ EVM ಸಮಸ್ಯೆ ಆಗಿರಲಿಲ್ಲ. ಆದರೆ ಈಗ ನಾನು ಗೆದ್ದಾಗ EVM ಬಗ್ಗೆ ಸಂದೇಹ ಪಡುತ್ತಿದ್ದಾರೆ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.
‘ಸಚಿವ ಸ್ಥಾನ ಕೊಡೋದು ಸಿಎಂಗೆ ಬಿಟ್ಟ ವಿಚಾರ’
ನಾನು ನಮ್ಮ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಮುಖ್ಯಮಂತ್ರಿಯವರು ಕೊಡುವ ಖಾತೆಯನ್ನು ನಿಭಾಯಿಸುತ್ತೇನೆ. ಸಚಿವ ಸ್ಥಾನ ನೀಡುವುದು ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ ಎಂದು ಆರ್.ಆರ್.ನಗರ ಶಾಸಕ ಮುನಿರತ್ನ ಸ್ಪಷ್ಟಪಡಿಸಿದರು. ಇನ್ನು, ತಮ್ಮ ಹಾಗೂ ಸೋಮಶೇಖರ್, ಭೈರತಿ ಬಸವರಾಜು ನಡುವಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ SBM ಟೀಂ (ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ)ನಲ್ಲಿ ಯಾವುದೇ ಬಿರುಕು ಇಲ್ಲ. ಮೂವರೂ ಒಟ್ಟಿಗೇ ರಾಜೀನಾಮೆ ನೀಡಿದ್ದೇವೆ. ಈಗಲೂ ಒಟ್ಟಿಗೇ ಇದ್ದೇವೆ. ನಮ್ಮ SBM ಟೀಂನ ಲೋಗೋ ಎಂದರೆ ಅದು ಬಿಜೆಪಿ ಎಂದು ತಿಳಿಸಿದರು.
ಮುನಿರತ್ನ ಪ್ರಮಾಣ ವಚನ ಸ್ವೀಕಾರ
ಆರ್.ಆರ್. ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಗೆದ್ದ ಮುನಿರತ್ನ ಮತ್ತು ರಾಜೇಶ್ ಗೌಡ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುನಿರತ್ನ ಅವರು ದೇವಿ ರಾಜರಾಜೇಶ್ವರಿ ಹೆಸರಲ್ಲಿ ಹಾಗೂ ರಾಜೇಶ್ ಗೌಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರಿಬ್ಬರಿಗೂ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಿದರು.
Published On - 3:00 pm, Mon, 23 November 20