ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಅವಧಿ ಪೂರ್ತಿಗೊಳಿಸಲ್ಲ ಎಂಬ ವದಂತಿಗಳನ್ನು ಅವರ ಪುತ್ರಿ ಅರುಣಾದೇವಿ ಅಲ್ಲಗಳೆದಿದ್ದಾರೆ. ಆದರೆ ಅದೃಷ್ಟ ಕೈಕೊಟ್ಟರೆ ಯಾರೇನೂ ಮಾಡಲಾಗದು ಅಂತಲೂ ಅವರು ಹೇಳಿರುವುದು ಕುತೂಹಲ ಮೂಡಿಸುತ್ತದೆ.
ಧಾರವಾಡದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅರುಣಾದೇವಿ, ತಮ್ಮ ತಂದೆ ಖಂಡಿತವಾಗಿಯೂ ರಾಜ್ಯದ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತಾರೆ, ಈ ವಿಷಯದಲ್ಲಿ ಯಾರಿಗೂ ಸಂಶಯವೇ ಬೇಡ ಎಂದರು.
‘‘ಅವರು ನನ್ನ ತಂದೆಯೆಂಬ ಅಭಿಮಾನಕ್ಕೆ ಇದನ್ನು ಹೇಳುತ್ತಿಲ್ಲ, ಒಬ್ಬ ಸಾಮಾನ್ಯ ಮಹಿಳೆಯಾಗಿ ಹೇಳುತ್ತಿದ್ದೇನೆ, ಅವರು ಮುಖ್ಯಮಂತ್ರಿಯಾಗಿರುವುದು ನಮ್ಮೆಲ್ಲರ ಅದೃಷ್ಟ. ಅವರು ಅವಧಿಗೆ ಮುಂಚೆಯೇ ಸ್ಥಾನ ತ್ಯಜಿಸಲಿದ್ದಾರೆ ಎನ್ನುವ ವದಂತಿಗಳು ಶುದ್ಧ ಸುಳ್ಳು. ಆದರೆ, ಅದೃಷ್ಟ ವಿಮುಖವಾದರೆ ಅವರೇನು ಮಾಡುವುದಕ್ಕಾಗುತ್ತೆ?,’ ಎಂದು ಅರುಣಾದೇವಿ ಹೇಳಿದರು.
ಯಡಿಯೂರಪ್ಪನವರು ಕೌನ್ಸಿಲರ್, ಶಾಸಕರಾಗಿದ್ದಾಗಿನಿಂದಲೂ ರಾಜಕೀಯದ ಎಲ್ಲ ಮಜಲುಗಳನ್ನು ನೋಡುತ್ತಾ ಬಂದಿದ್ದಾರೆ, ರಾಜ್ಯದಲ್ಲಿ ಕೊವಿಡ್-19 ಮತ್ತು ಪ್ರವಾಹದ ಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ, ಹಾಗಾಗೇ ಜನರಿಗೆ ಅವರ ಮೇಲೆ ಪ್ರೀತಿ ಜಾಸ್ತಿ, ಅವರು ಮೇರು ಪರ್ವತವಿದ್ದಂತೆ ಎಂದ ಅರುಣಾದೇವಿ ಪಕ್ಷದ ಆಂತರಿಕ ವಿಷಯಗಳಲ್ಲಿ ತಾನ್ಯಾವತ್ತೂ ತಲೆಹಾಕಿಲ್ಲ ಮತ್ತು ಅದರ ಜ್ಞಾನವೂ ತನಗಿಲ್ಲ ಅಂತ ಹೇಳಿದರು.