AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭತ್ತ ಖರೀದಿ ಕೇಂದ್ರಗಳಲ್ಲಿ ಶುರುವಾಗಿಲ್ಲ ವಹಿವಾಟು: ಇದೆಂಥ ವಿಪರ್ಯಾಸ?

ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಭತ್ತ ಬೆಳೆದಿದ್ದರೂ ಖರೀದಿ ಕೇಂದ್ರದಲ್ಲಿ ಪ್ರಕ್ರಿಯೆ ಆರಂಭಿಸದೇ ಇರುವುದರಿಂದ ಖರೀದಿ ನಂತರ ಸಮಯಕ್ಕೆ ಸರಿಯಾಗಿ ಹಣ ಸಿಗುವ ಅನುಮಾನ ಬಹುತೇಕರಲ್ಲಿ ಹುಟ್ಟಿಕೊಂಡಿದೆ. ಹೀಗಾಗಿ ಹೆಚ್ಚಿನ ಬೆಳೆಗಾರರು ಮುಕ್ತ ಮಾರುಕಟ್ಟೆಯ ಮೊರೆ ಹೋಗಿದ್ದಾರೆ.

ಭತ್ತ ಖರೀದಿ ಕೇಂದ್ರಗಳಲ್ಲಿ ಶುರುವಾಗಿಲ್ಲ ವಹಿವಾಟು: ಇದೆಂಥ ವಿಪರ್ಯಾಸ?
ಭತ್ತದ ರಾಶಿ (ಪ್ರಾತಿನಿಧಿಕ ಚಿತ್ರ)
Skanda
| Updated By: ಆಯೇಷಾ ಬಾನು|

Updated on: Dec 19, 2020 | 7:30 AM

Share

ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಯಾದ್ಯಂತ ಸರ್ಕಾರ ಭತ್ತ ಖರೀದಿ ಕೇಂದ್ರವನ್ನೇನೋ ಶುರುಮಾಡಿದೆ. ಆದರೆ ಖರೀದಿ ಪ್ರಕ್ರಿಯೆ ಆರಂಭವಾಗುವುದಕ್ಕೆ ಮಾತ್ರ ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಇದರಿಂದಾಗಿ ಭತ್ತದ ಬೆಳೆಗಾರರು ಕಂಗಾಲಾಗಿದ್ಧಾರೆ.

ಜಿಲ್ಲೆಯ ಸಿಂಧನೂರು, ಮಾನವಿ, ದೇವದುರ್ಗ ತಾಲ್ಲೂಕಿನಾದ್ಯಂತ ಭತ್ತ ಕಟಾವು ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ ರೈತರಿಗೆ ಅನುಕೂಲವಾಗಲು ಜಿಲ್ಲಾಡಳಿತ ಸಹ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ ಇದುವರೆಗೂ ರೈತರಿಂದ ಭತ್ತ ಮಾರಾಟಕ್ಕೆ ನೋಂದಣಿ ಮಾಡಿಸಿಕೊಳ್ಳಲಾಗುತ್ತಿದೆಯೇ ವಿನಃ ಖರೀದಿ ಪ್ರಕ್ರಿಯೆ ಶುರುವಾಗಿಲ್ಲ.

ಜಿಲ್ಲೆಯಾದ್ಯಂತ ಭತ್ತ ಖರೀದಿ ಕೇಂದ್ರ ಆರಂಭಿಸಿ ಒಂದು ತಿಂಗಳು ಕಳೆದಿದೆ. ರೈತರು ಗೋದಾಮುಗಳಲ್ಲಿ ಭತ್ತ ದಾಸ್ತಾನು ಮಾಡಿದರೆ ಬಾಡಿಗೆ ಪಾವತಿಸಬೇಕಾಗುತ್ತದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ಹೊರೆ ಬೀಳಲಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಒಂದು ವಾರದಲ್ಲಿ ಭತ್ತ ಖರೀದಿಸುವ ಭರವಸೆ ನೀಡಿತ್ತು. ಆದರೆ ಇಂದಿಗೂ ಭತ್ತ ಖರೀದಿ ಪ್ರಕ್ರಿಯೆ ಆರಂಭವಾಗುವ ಸುಳಿವಿಲ್ಲದೇ ರೈತರು ಕಂಗಾಲಾಗಿದ್ದಾರೆ.

ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಭತ್ತವನ್ನ ಸಂಸ್ಕರಿಸಿ ಅಕ್ಕಿ ಮಾಡುವುದಕ್ಕೆ ಗಿರಣಿ ಮಾಲೀಕರೊಂದಿಗೆ ಜಿಲ್ಲಾಡಳಿತ ಒಡಂಬಡಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಗಿರಣಿಗಳ ಕಾರಣಕ್ಕಾಗಿಯೇ ಭತ್ತ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆಯೇ ಎಂಬ ಅನುಮಾನ ಕೆಲವರಲ್ಲಿ ಮೂಡಿದೆ.

ಭತ್ತ ಖರೀದಿ ಕೇಂದ್ರಗಳಲ್ಲಿ ಶುರುವಾಗಿಲ್ಲ ವಹಿವಾಟು: ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಭತ್ತ ಬೆಳೆದಿದ್ದರೂ ಖರೀದಿ ಕೇಂದ್ರದಲ್ಲಿ ಪ್ರಕ್ರಿಯೆ ಆರಂಭಿಸದೇ ಇರುವುದರಿಂದ ಖರೀದಿ ನಂತರ ಸಮಯಕ್ಕೆ ಸರಿಯಾಗಿ ಹಣ ಸಿಗುವ ಅನುಮಾನ ಬಹುತೇಕರಲ್ಲಿ ಹುಟ್ಟಿಕೊಂಡಿದೆ. ಹೀಗಾಗಿ ಹೆಚ್ಚಿನ ಬೆಳೆಗಾರರು ಮುಕ್ತ ಮಾರುಕಟ್ಟೆಯ ಮೊರೆ ಹೋಗಿದ್ದಾರೆ. ಭತ್ತ ನಾಟಿ ಮಾಡುವ ವೇಳೆಯಲ್ಲಿ ಕ್ರಿಮಿನಾಶಕ, ರಸಗೊಬ್ಬರಕ್ಕೆ ವ್ಯಯಿಸಿದ ಹಣಕ್ಕೆ ಬಡ್ಡಿ ಬೆಳೆಯುತ್ತದೆ ಎಂಬ ಆತಂಕಕ್ಕೆ ಒಳಗಾಗಿ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶಕುಮಾರ್, ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ನೊಂದಣಿ ಪ್ರಕ್ರಿಯೆ ನಡೆಯುತ್ತಿದೆ. ಅಕ್ಕಿ ಗಿರಣಿಗಳೊಂದಿಗೆ ಸಂಸ್ಕರಣೆಗೆ ಒಪ್ಪಂದ ಪ್ರಕ್ರಿಯೆ ನಡೆದಿದ್ದು, ಖರೀದಿಗೆ ವಿಳಂಬವಾಗಿರುವುದು ನಿಜ. ಅತಿ ಶೀಘ್ರದಲ್ಲಿಯೇ ಖರೀದಿ ಕೇಂದ್ರಗಳಲ್ಲಿ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಭತ್ತ ಖರೀದಿ ಕೇಂದ್ರಗಳಲ್ಲಿ 2,161 ಜನ ರೈತರು ಭತ್ತ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಸಿಂಧನೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,633 ರೈತರು ಭತ್ತ ಮಾರಾಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ದೇವದುರ್ಗ ತಾಲ್ಲೂಕಿನಲ್ಲಿ 117 ರೈತರು, ಲಿಂಗಸಗೂರು ತಾಲ್ಲೂಕಿನಲ್ಲಿ 56 ರೈತರು, ಮಾನ್ವಿ ತಾಲ್ಲೂಕಿನಲ್ಲಿ 198 ರೈತರು, ರಾಯಚೂರು ತಾಲ್ಲೂಕಿನಲ್ಲಿ 157 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಈ ಮೂಲಕ 1.21 ಲಕ್ಷ ಕ್ವಿಂಟಲ್ ಭತ್ತ ಖರೀದಿಸಲು ಸಿದ್ದತೆಯೇನೋ ಆಗಿದೆ. ಈಗ ಭತ್ತ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸುವುದಷ್ಟೇ ಬಾಕಿ. ರೈತರು ಅನಿವಾರ್ಯ ಪರಿಸ್ಥಿತಿಗೆ ಸಿಕ್ಕು ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡುತ್ತಿರುವುದನ್ನು ಗಮನಿಸಿಯಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.