ಮೈಸೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಮಸೂದೆ ಜಾರಿ ಮಾಡಿ, ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ. ಫಾರ್ಮರ್ ಬದಲು ರೈತ, ಫಾರ್ಮ್ ಲೇಬರ್ ಆಗಲಿದ್ದಾನೆ; ರೈತ ಕೂಲಿಗಾರ ಆಗಿರುತ್ತಾನೆ. ಜನರಿಗೆ ಬಿಜೆಪಿಯ ಮೂರು ಕಾಯ್ದೆ ಬಗ್ಗೆ ಸ್ಪಷ್ಟತೆ ಇಲ್ಲ. ರೈತರು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬುದಿದೆ. ಪ್ರಾರಂಭದಲ್ಲಿ ಉತ್ತಮ ಬೆಲೆ ಸಿಕ್ಕರೂ ನಂತರ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣಕ್ಕೆ ಒಳಪಡಲಿದೆ. ಬೆಲೆ ಖಾತರಿ ಮತ್ತು ಒಪ್ಪಂದ ಕಾಯ್ದೆ ಮೂಲಕ ಒಪ್ಪಂದ ಮಾಡಿಕೊಂಡು ಕಂಪನಿ ಹೇಳಿದ ಬೆಳೆಗಳನ್ನೆ ರೈತ ಬೆಳೆಯಬೇಕಾಗುತ್ತದೆ. ರೈತರು ತಮ್ಮ ಜಮೀನಲ್ಲಿ ತಾನೇ ಕೂಲಿಗಳಾಗಿ ಕೆಲಸ ಮಾಡುವಂತೆ ಮಾಡುವ ಹುನ್ನಾರ ಬಿಜೆಪಿಯದ್ದು ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ (Mysore congress spokesperson M Lakshman) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಯಾಕೆ ಹಠಕ್ಕೆ ಬಿದ್ದಿದೆ?
ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ ಕೂಡ ಮಾರಕವಾಗಲಿದೆ. ಕಾರ್ಪೊರೇಟ್ ಕಂಪನಿಗಳು ಅಗ್ಗದ ಬೆಲೆಗೆ ಖರೀದಿ ಮಾಡಿ ಎಷ್ಟು ಬೇಕಾದರೂ ಶೇಖರಣೆ ಮಾಡಿಕೊಂಡು ಮಾರುಕಟ್ಟೆ ಅಭಾವ ಸೃಷ್ಟಿಸುತ್ತವೆ. ಬಿಜೆಪಿ ಇಂತಹುದಕ್ಕೆ ಯಾಕೆ ಹಠಕ್ಕೆ ಬಿದ್ದಿದೆ? ಈ ಕಾಯ್ದೆಗಳನ್ನು ರೈತರು ಅರ್ಥ ಮಾಡಿಕೊಂಡೇ ಹೋರಾಟ ಮಾಡುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ರದ್ದಾಗುವುದಿಲ್ಲ ಎಂದು ಮೋದಿ ಹೇಳುತ್ತಾರೆ. ಎಪಿಎಂಸಿ ಇಲ್ಲದೆ ಇದ್ರೆ ಎಂಎಸ್ಪಿ ಎಲ್ಲಿ ಇರುತ್ತದೆ? ಸರ್ಕಾರ ಎಪಿಎಂಸಿ ರದ್ದಾಗುವುದಿಲ್ಲ ಎಂದು ಸುಳ್ಳು ಹೇಳುತ್ತಿದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ ಹೇಳಿದ್ದಾರೆ.
ಮೈಸೂರು ಭಾಗದ ಬಿಜೆಪಿ (Mysore BJP) ಯಲ್ಲಿ 5 ಬಣಗಳಿವೆ. ಬಿಜೆಪಿ ಶಾಸಕರು, ಸಂಸದರ ನಡುವೆ ಹೊಂದಾಣಿಕೆಯಿಲ್ಲ. ಇದರಿಂದಾಗಿ ಮೈಸೂರು (Mysuru) ಪ್ರಾಂತ್ಯದ ಅಭಿವೃದ್ಧಿಯಾಗುತ್ತಿಲ್ಲ. ರೈಲ್ವೆ ವಿಸ್ತರಣೆಗಂತೂ ಬಜೆಟ್ನಲ್ಲಿ ಒಂದೂ ನಯಾಪೈಸೆ ಸಿಕ್ಕಿಲ್ಲ. ಬಿಜೆಪಿ ಶಾಸಕರು ಮತ್ತು ಸಂಸದರು ಒಟ್ಟಾಗಿ ಅನುದಾನ ಕೊಡಿಸಿ ಎಂದು ಸ್ಥಳೀಯ ಬಿಜೆಪಿ ನಾಯಕರಿಗೆ ವಕ್ತಾರ ಲಕ್ಷ್ಮಣ ಕಿವಿಮಾತು ಹೇಳಿದ್ದಾರೆ.