ಧಾರವಾಡ: ಕರ್ತವ್ಯದ ಅವಧಿಯ ಕೊನೆಯ ಗಳಿಗೆಯವರೆಗೂ ಜವಾಬ್ದಾರಿ ನಿರ್ವಹಿಸಿ, ಸರ್ಕಾರದ ಋಣ ತೀರಿಸಬೇಕೆಂಬ ಆದರ್ಶಗಳೊಂದಿಗೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ ಕಲಹಾಳ ಅವರು ತಮ್ಮ ಸೇವಾನಿವೃತ್ತಿ ದಿನದ ಕೊನೆಯ ಗಳಿಗೆಯವರೆಗೂ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಮೇ 31ರ ಮಧ್ಯ ರಾತ್ರಿ 12 ಗಂಟೆಗೆ ಅಧಿಕಾರ ಹಸ್ತಾಂತರಿಸಿದರು.
ಸರ್ಕಾರದ ನಿಯಮದಂತೆ ಒಂದು ದಿನವೆಂದರೆ ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ ದಿನದ ಮಧ್ಯರಾತ್ರಿ 12ರವರೆಗೆ ಎಂದು ಸೂಚಿಸಲಾಗಿದೆ. ಒಂದು ದಿನದ ವೇತನವೆಂದರೆ 24 ತಾಸುಗಳಿಗೆ ನೀಡುವಂತಹದ್ದಾಗಿದೆ. ನೌಕರರು ಸಮರ್ಥವಾಗಿ ಕಾರ್ಯನಿರ್ವಹಿಸಲು ದೈಹಿಕ, ಮಾನಸಿಕ ಆರೋಗ್ಯದೃಷ್ಟಿಯಿಂದ ಕೆಲಸದ ವೇಳೆಯನ್ನು ನಿಗದಿಪಡಿಸಲಾಗಿರುತ್ತದೆ. ಹೀಗಿದ್ದರೂ ಅತ್ಯವಶ್ಯಕ ಮತ್ತು ತುರ್ತು ಸ್ಥಿತಿಯಲ್ಲಿ ದಿನದ ಯಾವುದೇ ಸಂದರ್ಭದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ.
ಸರ್ಕಾರದ ಉದಾತ್ತವಾದ ಧೋರಣೆಯಂತೆ ನೌಕರರ ನಿವೃತ್ತಿ ವರ್ಗಾವಣೆ ಸಂದರ್ಭದಲ್ಲಿ ಸರ್ಕಾರಿ ರಜೆ ಇದ್ದರೆ ಹಿಂದಿನ ಕೆಲಸದ ದಿನ ಕಾರ್ಯಭಾರ ವಹಿಸಿಕೊಡಬಹುದಾಗಿದೆ. ಸರ್ಕಾರದ ಉದ್ದೇಶದಂತೆ ಒಬ್ಬ ನೌಕರರ ಕೆಲಸದ ಅವಧಿ ಅಂತ್ಯಕ್ಕೆ ಕಾರ್ಯಭಾರ ವಹಿಸಿದ ನಂತರ ಅಂದಿನ ಮಧ್ಯರಾತ್ರಿ 12 ಗಂಟೆಯೊಳಗೆ ಆಕಸ್ಮಿಕ ನಿಧನರಾದರೆ ಅವರ ಅರ್ಹ ವಾರಸುದಾರರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲಾಗುತ್ತದೆ.
ಮೇ 31ರಂದು ಮಧ್ಯರಾತ್ರಿ 12 ಗಂಟೆಗೆ ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಯ ಕಾರ್ಯಭಾರವನ್ನು ಹಿರಿಯ ವ್ಯೆದ್ಯಾಧಿಕಾರಿ ಡಾ.ಮೀನಾಕ್ಷಿ ಅವಲೂರು ಶಾಂತಣ್ಣಗೆ ವಹಿಸಿದರು. ಕೊರೊನಾ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಕೆಲಸ ಮಾಡಿದ್ದ ಡಾ.ಕಲಹಾಳ ಅವರು ನಿವೃತ್ತಿ ದಿನ ರವಿವಾರವಿದ್ದರೂ ಅಂದು ಪೂರ್ತಿ ಕೆಲಸ ಮಾಡಿ ಮಧ್ಯರಾತ್ರಿ ಬೇರೆಯವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಇದು ಓರ್ವ ಸರ್ಕಾರಿ ವೈದ್ಯನ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.
Published On - 1:31 pm, Mon, 1 June 20