IMA ಹಗರಣ: ಸಕ್ಷಮ ಪ್ರಾಧಿಕಾರದಿಂದ ರೋಷನ್​ ಬೇಗ್ ಆಸ್ತಿ ಜಪ್ತಿಗೆ ಚಿಂತನೆ- ಕೋರ್ಟ್​ಗೆ ಮಾಹಿತಿ

|

Updated on: Dec 09, 2020 | 5:00 PM

ಐಎಂಎ ಸಂಸ್ಥೆಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಶಾಸಕ ರೋಷನ್​ಬೇಗ್ ಆಸ್ತಿ ಜಪ್ತಿ ಸಾಧ್ಯತೆಯ ಬಗ್ಗೆ ಸಕ್ಷಮ ಪ್ರಾಧಿಕಾರ ಚಿಂತನೆ ನಡೆಸಿದೆ. ಈ ಕುರಿತು ಹೈಕೋರ್ಟ್​ಗೆ ಬುಧವಾರ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತ ಮಾಹಿತಿ ನೀಡಿದರು.

IMA ಹಗರಣ: ಸಕ್ಷಮ ಪ್ರಾಧಿಕಾರದಿಂದ ರೋಷನ್​ ಬೇಗ್ ಆಸ್ತಿ ಜಪ್ತಿಗೆ ಚಿಂತನೆ- ಕೋರ್ಟ್​ಗೆ ಮಾಹಿತಿ
ರೋಶನ್​ಬೇಗ್
Follow us on

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಶಾಸಕ ಆರ್.ರೋಷನ್​ಬೇಗ್ ಆಸ್ತಿ ಜಪ್ತಿ ಸಾಧ್ಯತೆಯ ಬಗ್ಗೆ ಸಕ್ಷಮ ಪ್ರಾಧಿಕಾರ ಚಿಂತನೆ ನಡೆಸಿದೆ. ಈ ಕುರಿತು ಹೈಕೋರ್ಟ್​ಗೆ ಬುಧವಾರ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತ ಮಾಹಿತಿ ನೀಡಿದರು.

ಹಗರಣದಲ್ಲಿ ರೋಷನ್​ಬೇಗ್​ ಪಾತ್ರದ ಬಗ್ಗೆ ಸರ್ಕಾರ ಮತ್ತು ಸಿಬಿಐನಿಂದ ಸಾಕ್ಷ್ಯಾಧಾರ ಕೇಳಲಾಗಿದೆ. ಮಾಹಿತಿ ಬಂದ ತಕ್ಷಣವೇ ರೋಷನ್​ಬೇಗ್ ಆಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಅಲ್ಲದೇ ಈವರೆಗೂ ಜಪ್ತಿಯಾದ ಆಸ್ತಿಗಳ ವಿವರವನ್ನು ಹರ್ಷ ಗುಪ್ತ ಹೈಕೋರ್ಟ್​ಗೆ ಸಲ್ಲಿಸಿದರು.

ಸಕ್ಷಮ ಪ್ರಾಧಿಕಾರಕ್ಕೆ ಕೆಲ ಕಳಂಕಿತ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹರ್ಷಗುಪ್ತ ಆಕ್ಷೆಪಿಸಿದರು. ಸಕ್ಷಮ ಪ್ರಾಧಿಕಾರಕ್ಕೆ ಲೋಕಾಯುಕ್ತ, ಎಸಿಬಿ ಪ್ರಕರಣ ಎದುರಿಸುತ್ತಿದ್ದ ಕೆಲ ಕಳಂಕಿತ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರ ಸೇವೆ ಹಿಂಪಡೆಯಲು ಮನವಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಹರ್ಷಗುಪ್ತ ಹೈಕೋರ್ಟ್​ಗೆ ನೀಡಿದರು.

ಪ್ರಾಧಿಕಾರಕ್ಕೆ ನೇಮಕವಾದವರ ಹಿನ್ನೆಲೆ ಪರಿಶೀಲಿಸಿರುವ ಬಗ್ಗೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಪಿಎಆರ್) ಕಾರ್ಯದರ್ಶಿ ಪ್ರಮಾಣಪತ್ರ ನೀಡಬೇಕು ಎಂದು ನಿರ್ದೇಶನ ನೀಡಿದ ಹೈಕೋರ್ಟ್​ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಿತು.

ಈ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿದ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷಗುಪ್ತ, ‘ಸಿಬಿಐ ಸಲ್ಲಿಸಿರುವ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ನಮೂದಾಗಿರುವವರು ಐಎಂಎ ಹಗರಣದ ಫಲಾನುಭವಿಗಳೇ (beneficiaries) ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಹಗರಣದ ಫಲಾನುಭವಿಗಳು ಎಂಬುದು ದೃಢಪಟ್ಟರೆ, ಸಂಬಂಧಿಸಿದ ಎಲ್ಲರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಜಾಮೀನಿನ ಮೇಲೆ ಬಿಡುಗಡೆಯಾದ ರೋಷನ್ ಬೇಗ್​ಗೆ ರೌಡಿಶೀಟರ್​ನಿಂದ ವೆಲ್‌ಕಮ್

 

Published On - 4:17 pm, Wed, 9 December 20