India vs England Test Series: ಪಂತ್ ಎರಡು ತಿಂಗಳ ಅವಧಿಯಲ್ಲಿ ಎರಡು ಶ್ರೇಷ್ಠ ಇನ್ನಿಂಗ್ಸ್​ಗಳನ್ನಾಡಿದ್ದಾರೆ: ಸಂಜಯ ಮಂಜ್ರೇಕರ್

|

Updated on: Mar 08, 2021 | 10:40 PM

ಭಾರತದ ಮಾಜಿ ಆಟಗಾರ ಮತ್ತು ಈಗ ಕಾಮೆಂಟೇಟರ್ ಆಗಿರುವ ಸಂಜಯ ಮಂಜ್ರೇಕರ್ ಕ್ರಿಕೆಟ್ ಬಗ್ಗೆ ನಿಖರ ಹಾಗು ಅತ್ಯುತ್ತಮವಾಗಿ ವಿಶ್ಲೇಷಣೆ ಮಾಡುವವರಲ್ಲಿ ಒಬ್ಬರು. ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊನ್ನೆಯಷ್ಟೇ ಕೊನೆಗೊಂಡ ಸರಣಿಯಲ್ಲಿ ಕೆಲವು ಅಮೋಘ ವೈಯಕ್ತಿಕ ಪ್ರದರ್ಶನಗಳನ್ನು ಪಟ್ಟಿ ಮಾಡಿರುವ ಅವರು ನಾಲ್ಕನೇ ಟೆಸ್ಟ್​ನಲ್ಲಿ ಶತಕ ಬಾರಿಸಿದ ರಿಷಭ್ ಪಂತ್ ಅವರ ಬ್ಯಾಟಿಂಗನ್ನು ಮನಸಾರೆ ಕೊಂಡಾಡಿದ್ದಾರೆ. ಸಂಜಯ ಅವರ ಪಟ್ಟಿಯಲ್ಲಿ ಜೋ ರೂಟ್ ಚೆನೈಯಲ್ಲಿ ಬಾರಿಸಿದ ಡಬಲ್ ಸೆಂಚುರಿ, ಅದೇ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ […]

India vs England Test Series: ಪಂತ್ ಎರಡು ತಿಂಗಳ ಅವಧಿಯಲ್ಲಿ ಎರಡು ಶ್ರೇಷ್ಠ ಇನ್ನಿಂಗ್ಸ್​ಗಳನ್ನಾಡಿದ್ದಾರೆ: ಸಂಜಯ ಮಂಜ್ರೇಕರ್
ರಿಷಭ್ ಪಂತ್
Follow us on

ಭಾರತದ ಮಾಜಿ ಆಟಗಾರ ಮತ್ತು ಈಗ ಕಾಮೆಂಟೇಟರ್ ಆಗಿರುವ ಸಂಜಯ ಮಂಜ್ರೇಕರ್ ಕ್ರಿಕೆಟ್ ಬಗ್ಗೆ ನಿಖರ ಹಾಗು ಅತ್ಯುತ್ತಮವಾಗಿ ವಿಶ್ಲೇಷಣೆ ಮಾಡುವವರಲ್ಲಿ ಒಬ್ಬರು. ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊನ್ನೆಯಷ್ಟೇ ಕೊನೆಗೊಂಡ ಸರಣಿಯಲ್ಲಿ ಕೆಲವು ಅಮೋಘ ವೈಯಕ್ತಿಕ ಪ್ರದರ್ಶನಗಳನ್ನು ಪಟ್ಟಿ ಮಾಡಿರುವ ಅವರು ನಾಲ್ಕನೇ ಟೆಸ್ಟ್​ನಲ್ಲಿ ಶತಕ ಬಾರಿಸಿದ ರಿಷಭ್ ಪಂತ್ ಅವರ ಬ್ಯಾಟಿಂಗನ್ನು ಮನಸಾರೆ ಕೊಂಡಾಡಿದ್ದಾರೆ. ಸಂಜಯ ಅವರ ಪಟ್ಟಿಯಲ್ಲಿ ಜೋ ರೂಟ್ ಚೆನೈಯಲ್ಲಿ ಬಾರಿಸಿದ ಡಬಲ್ ಸೆಂಚುರಿ, ಅದೇ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ರವಿಚಂದ್ರನ್ ಅಶ್ವಿನ್ ಬಾರಿಸಿದ ಶತಕ, ಅಹಮದಾನಬಾದಿನ ಸ್ಪಿನ್ನರ್-ಸ್ನೇಹಿ ಪಿಚ್ ಮೇಲೆ ರೋಹಿತ್ ಶರ್ಮ ಬಾರಿಸಿದ 161 ರನ್, ಮತ್ತು ಅಕ್ಷರ್ ಪಟೇಲ್ ಅವರ 5-ವಿಕೆಟ್​ ಪಡೆದ ಸಾಧನೆಗಳು ಸೇರಿವೆ. ಆದರೆ ಇವಲ್ಲೆವುಗಳಿಗಿಂತ ಮಿಗಿಲಾದ ಪ್ರದರ್ಶನ ನೀಡಿದ್ದು ಕೊನೆಯ ಟೆಸ್ಟ್​ನಲ್ಲಿ ಶತಕ ಬಾರಿಸಿದ ಪಂತ್ ಎಂದು ಸಂಜಯ ಹೇಳುತ್ತಾರೆ.

ಪಂತ್ ಅವರ ಇನ್ನಿಂಗ್ಸ್ ನಿಸ್ಸಂದೇಹವಾಗಿ ಪಂದ್ಯದ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಿತು. ಭಾರತದ ಬೌಲರ್​ಗಳು ಪ್ರವಾಸಿ ತಂಡವನ್ನು 205ರನ್​ಗಳಿಗೆ ಸೀಮಿತಗೊಳಿಸಿದ್ದು ನಿಜವಾದರೂ ಭಾರತ ಒಂದು ಹಂತದಲ್ಲಿ 146 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಗಂಭೀರ ಸ್ಥಿತಿಯಲ್ಲಿತ್ತು. ಆದರೆ, ಪಂತ್ ಬ್ಯಾಟಿಂಗ್​ನಲ್ಲಿ ಅಭೂತಪೂರ್ವ ಪ್ರೌಢಿಮೆ ಮೆರೆದು ಶತಕ ಬಾರಿಸದ್ದೂ ಅಲ್ಲದೆ, ಅವರಷ್ಟೇ ಜವಾಬ್ದಾರಿಯುತವಾಗಿ ಅಡಿದ ವಾಷಿಂಗ್ಟನ್ ಸುಂದರ್ ಅವರೊಂದಿಗೆ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು ಭಾರತವನ್ನು ಗೆಲುವಿನ ಸ್ಥಿತಿಗೆ ತೆಗೆದುಕೊಂಡು ಹೋದರು. ಭಾರತದ ಗೆಲುವಿಗೆ ಸುಂದರ್ ಮತ್ತು ಅಕ್ಷರ್ ಪಟೇಲ್ ನಡುವಿನ ಶತಕದ ಜೊತೆಯಾಟವೂ ಮಹತ್ವಪೂರ್ಣವೆನಿಸಿತು.

‘ಭಾರತದ ಗೆಲುವಿನ ಶ್ರೇಯಸ್ಸು ಖಂಡಿತವಾಗಿಯೂ ರಿಷಭ್​ ಪಂತ್​ಗೆ ಸಲ್ಲುತ್ತದೆ. ಮೊಟೆರಾದಲ್ಲಿ ಆವರು ಆಡುತ್ತಿದ್ದಾಗಲೂ ನಾನು ಇದೇ ಮಾತನ್ನು ಹೇಳಿದ್ದೆ ಮತ್ತು ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಪಂತ್ ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಶ್ರೇಷ್ಠ ಇನ್ನಿಂಗ್ಸ್​ಗಳನ್ನು ಆಡಿದ್ದಾರೆ. ಹಾಗಾಗಿಯೇ, ನಾನು ಅವರು ಬಾರಿಸಿದ ಶತಕವನ್ನು ಸರಣಿಯ ಶ್ರೇಷ್ಠ ಪ್ರದರ್ಶನ ಎಂದು ಹೇಳುತ್ತೇನೆ,’ ಅಂತ ಕ್ರೀಡಾ ವೆಬ್​ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಜಯ ಹೇಳಿದ್ದಾರೆ.

ಸಂಜಯ ಮಂಜ್ರೇಕರ್

ಸರಣಿಯಲ್ಲಿ 32 ವಿಕೆಟ್​ಗಳನ್ನು ಪಡೆದ ಅಶ್ವಿನ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದು ಅತ್ಯಂತ ಸೂಕ್ತವಾಗಿತ್ತು ಎಂದು ಸಂಜಯ ಹೇಳುತ್ತಾರೆ. ಭಾರತ ಸೋಲುಂಡ ಮೊದಲ ಟೆಸ್ಟ್​ನಲ್ಲೂ ಅವರು 9 ವಿಕೆಟ್ (3/146 ಮತ್ತು 6/61) ಪಡೆದರು. ಎರಡನೇ ಟೆಸ್ಟ್​ನಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡುವುದರೊಂದಿಗೆ ಮ್ಯಾಚ್​ ವಿನ್ನಿಂಗ್ ಶತಕವನ್ನು ಬಾರಿಸಿದರು. ಆಮೇಲೆ ಅಹಮದಾಬಾದಿನಲ್ಲಿ ನಡೆದ ಮೂರನೇ ಟೆಸ್ಟ್​ನಲ್ಲಿ 7 ವಿಕೆಟ್​ ಪಡೆದು 400-ವಿಕೆಟ್ ಕ್ಲಬ್​ಗೆ ಸೇರಿದರು. ಅಶ್ವಿನ್ ಸರಣಿಯನ್ನು ಮತ್ತೊಂದು 5-ವಿಕೆಟ್ ಸಾಧನೆಯೊಂದಿಗೆ ಮುಗಿಸಿದ್ದು ಉಲ್ಲೇಖನೀಯ. ತಮ್ಮ ವೃತ್ತಿ ಬದುಕಿನಲ್ಲಿ ಅವರು 30 ಬಾರಿ ಇನ್ನಿಂಗ್ಸೊಂದರಲ್ಲಿ 5-ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ.

‘ಬೌಲರ್​ಗಳ ಪ್ರದರ್ಶನಗಳನ್ನು ನೋಡಿದ್ದೇಯಾದರೆ ಸರಣಿಯಲ್ಲಿ ಅಶ್ವಿನ್ ಎಲ್ಲರಿಗಿಂತ ಜಾಸ್ತಿ ವಿಕೆಟ್​ಗಳನ್ನು ಪಡೆದರು. ಅವರನ್ನು ಎದುರಿಸಿ ಆಡುವುದು ಇಂಗ್ಲಿಷ್ ಬ್ಯಾಟ್ಸ್​ಮನ್​ಗಳಿಗೆ ಸುಲಭವಾಗಿರಲಿಲ್ಲ. ಅವರ ಬ್ಯಾಟಿಂಗ್ ಭಾರತಕ್ಕೆ ಬೋನಸ್ ಆಗಿ ಲಭ್ಯವಾಯಿತು. ಅತ್ಯಂತ ನಿರ್ಣಾಯಕ ಹಂತದಲ್ಲಿ ಅವರು ಶತಕ ಬಾರಿಸಿದರು. ಸರಣಿ ಶ್ರೇಷ್ಠ ಪ್ರಶಸ್ತಿಗೆ ಬೇರೆ ಉಮೇದುವಾರರೂ ಇದ್ದರು. ಅದರೆ, ಇದು ಬೌಲರ್-ಸ್ನೇಹಿ ಸರಣಿಯಾಗಿದ್ದರಿಂದ, ಅಶ್ವಿನ್ ಅವರನ್ನು ಆರಿಸಿದ್ದು ಸರಿಯಾಗಿತ್ತು,’ ಎಂದು ಸಂಜಯ ಹೇಳಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್​ಮನ್​ಗಳು ರನ್​ಗಳಿಗಾಗಿ ಬೌಲರ್​ಗಳನ್ನು ನೆಚ್ಚಿಕೊಳ್ಳುತ್ತಿರುವುದು ಸರಿಯಲ್ಲ!

Published On - 9:36 pm, Mon, 8 March 21