ಏನ್ ಸರ್ ನಮಗಿಂತ ಮೊದ್ಲೇ ಬರುತ್ತೀರಿ -ಸದನದಲ್ಲಿ ಸಿದ್ದು-BSY ಗುದ್ದಾಟ, ಹೊರಗೆ ಮುದ್ದಾಟ!
ಇದೇ ವೇಳೆ, ಏನ್ ಸರ್ ನಮಗಿಂತ ಮೊದ್ಲೇ ಬರುತ್ತೀರಿ ನೀವು ಎಂದು ಸಿಎಂ BSY ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ, ವಿಪಕ್ಷದವರು ಯಾವಾಗಲು ಮುಂದಿರಬೇಕೆಂದು ಜೋಕ್ ಹೊಡೆದರು.
ಬೆಂಗಳೂರು: ವಿಧಾನಸೌಧದಲ್ಲಿ ಇಂದು ಬೆಳಗ್ಗೆ ರಾಜ್ಯ ಬಜೆಟ್ ಸಂಬಂಧ ಬದ್ಧ ವೈರಿಗಳಂತೆ ವಾಕ್ ಪ್ರಹಾರ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂಜೆ ವೇಳೆಗೆ ಫುಲ್ ಕೂಲ್ ಆಗಿ ಹಳೇ ದೋಸ್ತಿಗಳಂತೆ ಒಬ್ಬರನ್ನೊಬ್ಬರು ಕಿಚಾಯಿಸಿದ್ದು ಸಹ ಕಂಡುಬಂತು.
ಹೌದು, ಶಾಸಕ ಹರತಾಳು ಹಾಲಪ್ಪ ಪುತ್ರಿಯ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸಿಎಂ BSY ಮತ್ತು ಸಿದ್ದರಾಮಯ್ಯ ಮುಖಾಮುಖಿಯಾದರು. ನವಜೋಡಿಗೆ ಶುಭಹಾರೈಸಿ ಸಮಾರಂಭದಿಂದ ಸಿದ್ದರಾಮಯ್ಯ ತೆರಳುತ್ತಿದ್ದಾಗ ಸಿಎಂ ಯಡಿಯೂರಪ್ಪ ಮುಖಾಮುಖಿಯಾದರು.
ಇದೇ ವೇಳೆ, ಏನ್ ಸರ್ ನಮಗಿಂತ ಮೊದ್ಲೇ ಬರುತ್ತೀರಿ ನೀವು ಎಂದು ಸಿಎಂ BSY ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ, ವಿಪಕ್ಷದವರು ಯಾವಾಗಲು ಮುಂದಿರಬೇಕೆಂದು ಜೋಕ್ ಹೊಡೆದರು. ವಿಪಕ್ಷ ನಾಯಕರ ನಗೆಚಟಾಕಿಗೆ ಜೋರಾಗಿ ನಕ್ಕ ಯಡಿಯೂರಪ್ಪ ಸಿದ್ದರಾಮಯ್ಯರ ಬೆನ್ನುತಟ್ಟಿ, ಕೈಕುಲುಕಿ ಮುಂದೆ ಸಾಗಿದರು.
ಈ ಹಿಂದೆ, ಬಜೆಟ್ ಮಂಡನೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಮುಂದಿನ ಬಾರಿಯೂ ಸಿದ್ದರಾಮಯ್ಯ ವಿಪಕ್ಷದಲ್ಲಿ ಇರುತ್ತಾರೆ. ವಿಪಕ್ಷದಲ್ಲಿ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಸವಾಲ್ ಹಾಕಿದ್ದರು. ಮುಂದಿನ ಚುನಾವಣೆಯಲ್ಲಿ 130ರಿಂದ 135 ಸ್ಥಾನ ಗೆಲ್ತೇವೆ. ಸಿದ್ದರಾಮಯ್ಯರನ್ನು ಮತ್ತೆ ಪ್ರತಿಪಕ್ಷದಲ್ಲೇ ಕೂರಿಸುತ್ತೇವೆ ಎಂದು ಹೇಳಿದರು.
‘ಕಾಂಗ್ರೆಸ್ನವರ ನೈತಿಕತೆ ಅವರ ತಲೆ’ ಬಜೆಟ್ ವೇಳೆ ಕಾಂಗ್ರೆಸ್ ಸದಸ್ಯರಿಂದ ಸಭಾತ್ಯಾಗ ವಿಚಾರವಾಗಿ ಕಾಂಗ್ರೆಸ್ನವರ ನೈತಿಕತೆ ಅವರ ತಲೆ ಎಂದ ಸಿಎಂ ಬಿಎಸ್ವೈ ವಿಧಾನಸಭೆಯಲ್ಲಿ ನಾಳೆ ಅವರ ನೈತಿಕತೆ ಬಗ್ಗೆ ಹೇಳುತ್ತೇನೆ. ಸಿದ್ದರಾಮಯ್ಯ ಏನು ಮಾತನಾಡ್ತಿದ್ದೇವೆ ಅನ್ನೋದೇ ಗೊತ್ತಿಲ್ಲ. ಅಧಿವೇಶನದಲ್ಲಿ ನಾಳೆಯಿಂದ ಚರ್ಚೆ ಮಾಡುತ್ತೇವೆ. ಯಾರು ರಾಜೀನಾಮೆ ಕೊಡಬೇಕೆಂದು ಸದನದಲ್ಲಿ ಹೇಳ್ತೇನೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
‘ಬಿಎಸ್ವೈ ನನ್ನನ್ನು ವಿಪಕ್ಷದಲ್ಲಿ ಕೂರಿಸ್ತೀನಿ ಅನ್ನೋದು ಭ್ರಮೆ’ ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೈಲದ ಮೇಲೆ ಕೇಂದ್ರ ಸರ್ಕಾರ ಶೇ.30ರಷ್ಟು ಸುಂಕ ವಿಧಿಸುತ್ತೆ. ಸುಂಕ ಇಳಿಸಿ ಎಂದು ಬಜೆಟ್ನಲ್ಲಿ ಯೋಜನೆ ತರಬೇಕಾಗಿತ್ತು. ರಾಜ್ಯಕ್ಕೆ ಅನ್ಯಾಯವಾದ್ರೆ ಅದನ್ನ ಪ್ರತಿಭಟಿಸುವ ತಾಕತ್ತಿರಬೇಕು. ಆದರೆ, ರಾಜ್ಯ ಬಿಜೆಪಿಯವರಿಗೆ ಪ್ರತಿಭಟಿಸುವ ತಾಕತ್ತೇ ಇಲ್ಲ. ಬಿಜೆಪಿಯವರು ಮುಂದೆ ಚುನಾವಣೆಗೆ ಹೋದಾಗ ಗೊತ್ತಾಗುತ್ತೆ. ಇದು ಅನೈತಿಕ ಸರ್ಕಾರವಾಗಿದ್ದರಿಂದ ಬಜೆಟ್ ವೇಳೆ ವಿರೋಧ ಮಾಡಿದ್ದು.
ಬಿಎಸ್ವೈ ನನ್ನನ್ನು ವಿಪಕ್ಷದಲ್ಲಿ ಕೂರಿಸ್ತೀನಿ ಅನ್ನೋದು ಭ್ರಮೆ. ನನ್ನ ತಲೆ ಚೆನ್ನಾಗಿರುವುದರಿಂದಲೇ ಇದನ್ನೆಲ್ಲ ಹೇಳ್ತಿರುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.
ಇದನ್ನೂ ಓದಿ: ‘ಎಲ್ಲರೂ ಸಮಾನತೆ ಬಗ್ಗೆ ಮಾತನಾಡ್ತಾರೆ; ಆದ್ರೆ ಸಮಾಜ ಯಾವಾಗಲೂ ಹೆಣ್ಣನ್ನೇ ಟಾರ್ಗೆಟ್ ಮಾಡುತ್ತೆ ಯಾಕೆ?’
Published On - 8:47 pm, Mon, 8 March 21