ಇಂಧನ ದರ ಏರಿಕೆ ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ದಿನೇದಿನೇ ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ. ಡೀಸೆಲ್ ದರವೂ ನಾನೇನು ಕಡಿಮೆ ಎಂದು ಪೈಪೋಟಿ ನೀಡುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಕೆಲವೆಡೆ ಇನ್ನೇನು ಶತಕ ದಾಟುವ ಅಂಚಿನಲ್ಲಿದೆ. ಕರ್ನಾಟಕದಲ್ಲಿ ಕೂಡ ಇಂಧನ ದರ ಕಡಿಮೆ ಏನಿಲ್ಲ. ಇದರಿಂದ ಜನರ ದಿನನಿತ್ಯದ ಬದುಕು ದುಸ್ತರವಾಗಿದೆ. ಲಾಕ್ಡೌನ್ ಬಳಿಕ ಚೇತರಿಕೆಯ ಹಂತದಲ್ಲಿದ್ದ ಸಾಮಾನ್ಯರ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ದಿನಬಳಕೆಯ ಸಾಮಾಗ್ರಿಗಳು ಕೂಡ ಬೆಲೆ ಏರಿಕೆಯ ಬರೆ ಎಳೆದಿವೆ. ಈ ನಡುವೆ ಭಾರತೀಯ ಬುದ್ಧಿವಂತರು ಹಲವು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಬೆಲೆ ಏರಿಕೆ ಏಟಿನಿಂದ ತಪ್ಪಿಸಿಕೊಳ್ಳಲು ಜನಸಾಮಾನ್ಯ ವಿವಿಧ ಉಪಾಯಗಳ ಮೊರೆ ಹೋಗಿದ್ದಾನೆ. ಬೈಕ್ನ ಪೆಟ್ರೋಲ್ ಇಂಜಿನ್ ಬದಲಾಗಿ ಬ್ಯಾಟರಿ ಅಳವಡಿಸಿಕೊಂಡಿರುವುದು ಹೊಸ ವಿಚಾರವಾಗಿ ಕಂಡುಬಂದಿದೆ.
ಹಲವರು ತಮ್ಮ ಪೆಟ್ರೋಲ್ ಇಂಜಿನ್ನ್ನು ತೆಗೆದಿಡುವ ತಂತ್ರಕ್ಕೆ ಮೊರೆ ಹೋಗುವ ಯೋಚನೆ ಮಾಡಿದ್ದಾರೆ. ಬದಲಾಗಿ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂದರೆ, ಈಗ ವಾಹನ ಹೊಂದಿರುವವರು ಪೆಟ್ರೋಲ್ ಹಾಕಿಸಿಕೊಳ್ಳುವ ಬದಲು ಬ್ಯಾಟರಿ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ಖರ್ಚಿನ ಪ್ರಮಾಣ ಕಡಿಮೆ ಮಾಡಲು ಜುಗಾಡ್ ಉಪಾಯ ಇದಾಗಿದೆ. ಇದರಿಂದ ಜನರಿಗೆ ಲಾಭವಾಗುತ್ತಿದೆಯೇ? ಇಂಜಿನ್ ಬದಲಾಯಿಸಲು ಎಷ್ಟು ಖರ್ಚಾಗುತ್ತದೆ? ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ.
ಹೀಗೆ ಮಾಡಲು ಎಷ್ಟು ಖರ್ಚಾಗುತ್ತದೆ?
ಪೆಟ್ರೋಲ್ ಇಂಜಿನ್ ಬದಲಿಸಿರುವ ಫೊಟೊಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ಪೆಟ್ರೋಲ್ ಇಂಜಿನ್ ಬೈಕ್ನ್ನು ಬ್ಯಾಟರಿ ಬೈಕ್ಗೆ ಬದಲಿಸಿಕೊಳ್ಳುತ್ತಿರುವುದನ್ನು ಹೇಳುತ್ತಿದ್ದಾರೆ. ಹೀಗೆ ಮಾಡಲು ಸುಮಾರು 10 ಸಾವಿರ ರೂಪಾಯಿಗಳಷ್ಟು ಖರ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬ್ಯಾಟರಿಗೆ ಅನುಗುಣವಾಗಿ ಖರ್ಚಿನ ಪ್ರಮಾಣ ಹೆಚ್ಚು ಕಡಿಮೆ ಆಗಬಹುದು ಎಂದೂ ಹೇಳುತ್ತಾರೆ. ಹಾಗಾದರೆ, ಬ್ಯಾಟರಿ ಹಾಕಿಸಿಕೊಂಡ ಬೈಕ್ಗಳು ಪೆಟ್ರೋಲ್ ಬೈಕ್ನಷ್ಟೇ ವೇಗವಾಗಿ ಓಡುತ್ತವಾ ಎಂಬ ಪ್ರಶ್ನೆಯೂ ಬೈಕ್ ಸವಾರರ ಮನದಲ್ಲಿದೆ. ಇದಕ್ಕೆ ಮೆಕ್ಯಾನಿಕ್ಗಳು ತಿಳಿಸಿದ ಉತ್ತರದಂತೆ, ಬ್ಯಾಟರಿ ಚಾಲಿತ ಬೈಕ್ಗಳು ಗಂಟೆಗೆ 65ರಿಂದ 70 ಕಿಮೀ ವೇಗದಲ್ಲಿ ಓಡುತ್ತವೆ.
ಇಂಜಿನ್ ಚಾಲಿತ ಬೈಕ್ಗೆ ಬ್ಯಾಟರಿ ಅಳವಡಿಸುವುದು ಹೇಗೆ?
ಪೆಟ್ರೋಲ್ ಇಂಜಿನ್ ಅನ್ನು ಬ್ಯಾಟರಿಗೆ ಬದಲಾಯಿಸುವಾಗ ಗೇರ್ ಬಾಕ್ಸ್ ತೆಗೆಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಬಳಿಕ, ಬೈಕ್ನ್ನು ನೇರವಾಗಿ ಎಕ್ಸಲೇಟರ್ ಮೂಲಕ ನಿಯಂತ್ರಿಸಲಾಗುತ್ತದೆ. ಇದರಿಂದ ಬೈಕ್ ಸ್ಕೂಟರ್ ರೀತಿ ಕಾರ್ಯನಿರ್ವಹಿಸುತ್ತದೆ. ಹಾಗಾದರೆ ಸ್ಕೂಟರ್ನ ಇಂಜಿನ್ ಕೂಡ ಬ್ಯಾಟರಿಗೆ ಬದಲಾಯಿಸಿಕೊಳ್ಳಬಹುದೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ಆದರೆ ಅದು ಸಾಧ್ಯವಿಲ್ಲ. ಸ್ಕೂಟರ್ ಇಂಜಿನ್ ಬದಲಿಸಲು ಬಹಳಷ್ಟು ಕೆಲಸ ಮತ್ತು ಖರ್ಚು ಇರುವುದರಿಂದ ಅದು ಅಸಾಧ್ಯ. ಬೈಕ್ ಪೆಟ್ರೋಲ್ ಇಂಜಿನ್ನ್ನು ಬ್ಯಾಟರಿಗೆ ಬದಲಿಸಿಕೊಳ್ಳಬಹುದು.
ಇದು ಹೇಗೆ ಉಪಕಾರಿ?
ಬೈಕ್ಗೆ ಅಳವಡಿಸಿದ ಬ್ಯಾಟರಿಯನ್ನು ಎರಡು ಗಂಟೆಗಳ ಕಾಲ ಚಾರ್ಜ್ ಮಾಡಿದರೆ 40 ಕಿ.ಮೀ. ಓಡಿಸಬಹುದಂತೆ. ಬ್ಯಾಟರಿ ಪೂರ್ಣ ಚಾರ್ಜ್ ಆಗಿದ್ದರೆ ಸುಮಾರು 300 ಕಿ.ಮೀ.ವರೆಗೂ ಬೈಕ್ ಚಲಿಸುತ್ತದೆ. ಬ್ಯಾಟರಿ ಗುಣಮಟ್ಟದ ಮೇಲೆ ಕೂಡ ಈ ವಿಚಾರ ಅವಲಂಬಿಸಿದೆ. ಆದರೆ, ಪೆಟ್ರೋಲ್ಗಿಂತ ಇದು ಲಾಭದಾಯಕ ಎನ್ನಲಾಗುತ್ತಿದೆ.
ಗಮನಿಸಿ. ಹೀಗೆ ಮಾಡುವುದು ಕಾನೂನು ಬಾಹಿರ!
ನೀವು ಹೀಗೆ ಮಾಡುವ ಮುನ್ನ ಗಮನಿಸಲೇ ಬೇಕಾದ ವಿಚಾರ ಒಂದಿದೆ. ಹೀಗೆ ಬೈಕ್ ಎಂಜಿನ್ ಬದಲಾಯಿಸಿಕೊಳ್ಳುವುದು ಕಾನೂನು ಬಾಹಿರ. ಸೆಕ್ಷನ್ 52, ಮೋಟಾರ್ ವಾಹನ ಆ್ಯಕ್ಟ್ 1988ರ ಅನ್ವಯ ಮೋಟಾರ್ ವಾಹನವನ್ನು ಹೀಗೆ ಮಾಡುವುದು ಅಪರಾಧ. ಕಂಪೆನಿ ತಯಾರಿಸಿರುವ ವಾಹನವನ್ನು ಜನರು ಬೇಕು ಬೇಕಾದಂತೆ ಬದಲಾಯಿಸಿಕೊಳ್ಳುವಂತಿಲ್ಲ. ಹೀಗೆ ಮಾಡಿ ರಸ್ತೆಗೆ ಗಾಡಿ ಓಡಿಸಿಬಿಟ್ಟೀರಾ! ಫೈನ್ ಬೀಳುವುದರ ಜತೆಗೆ ನಿಮ್ಮ ಲೈಸೆನ್ಸ್ ಕೂಡ ರದ್ದಾಗಬಹುದು.
ಇದನ್ನೂ ಓದಿ: Petrol Diesel Price | ಸತತ ಮೂರನೇ ದಿನವೂ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಳವಾಗಿಲ್ಲ! ಸದ್ಯ ಇನ್ನೂ ಶತಕ ಬಾರಿಸಿಲ್ಲ
TV9 Digital Live | ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಸ್ತರವಾಗ್ತಿದೆ ಜನಜೀವನ
Published On - 2:38 pm, Tue, 2 March 21