ಕೋವಿಡ್-19 ನಿರ್ವಹಣೆಯಲ್ಲಿ ವಿಫಲರಾದಾಗಲೇ ರಾಜೀನಾಮೆ ನೀಡಿದ್ದರೆ ಜನ ರೂಪಾನಿ ಬಗ್ಗೆ ಉತ್ತಮ ಅಭಿಪ್ರಾಯ ತಳೆದಿರುತ್ತಿದ್ದರು: ಮೆವಾನಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 11, 2021 | 10:38 PM

ಗುಜರಾತ ವಿಧಾನ ಸಭೆಯಲ್ಲಿ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೆವಾನಿ ಅವರು, ರೂಪಾನಿ ಅವರ ಆಡಳಿತಾವಧಿ ವಿರುದ್ಧ ಟೀಕೆ ಮಾಡುತ್ತಾ, ಕೊವಿಡ್-19 ಪಿಡುಗನ್ನು ನಿಯಂತ್ರಿಸಲು ಅವರು ವಿಫಲರಾದರು ಎಂದಿದ್ದಾರೆ.

ಕೋವಿಡ್-19 ನಿರ್ವಹಣೆಯಲ್ಲಿ ವಿಫಲರಾದಾಗಲೇ ರಾಜೀನಾಮೆ ನೀಡಿದ್ದರೆ ಜನ ರೂಪಾನಿ ಬಗ್ಗೆ ಉತ್ತಮ ಅಭಿಪ್ರಾಯ ತಳೆದಿರುತ್ತಿದ್ದರು: ಮೆವಾನಿ
ಜಿಗ್ನೇಶ್​ ಮೆವಾನಿ
Follow us on

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯದ ರಾಜಕೀಯ ವಲಯದಲ್ಲಿ ಶನಿವಾರ ಆಗಿರುವ ಅನಿರೀಕ್ಷಿತ ಬೆಳವಣಿಗೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಸಲುವಾಗಿ ನವ ಚೈತನ್ಯ ಮತ್ತು ಹೊಸ ಶಕ್ತಿ ತುಂಬಲು ರಾಜೀನಾಮೆ ನೀಡುತ್ತಿರುವುದಾಗಿ ಗುಜರಾತ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಜಯ ರೂಪಾನಿ ಹೇಳಿರುವರಾದರೂ ಅದೇ ಅಪ್ಪಟ ಸತ್ಯವೆಂದು ಅನೇಕರು ನಂಬುತ್ತಿಲ್ಲ.

ಗುಜರಾತ ವಿಧಾನ ಸಭೆಯಲ್ಲಿ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೆವಾನಿ ಅವರು, ರೂಪಾನಿ ಅವರ ಆಡಳಿತಾವಧಿ ವಿರುದ್ಧ ಟೀಕೆ ಮಾಡುತ್ತಾ, ಕೊವಿಡ್-19 ಪಿಡುಗನ್ನು ನಿಯಂತ್ರಿಸಲು ಅವರು ವಿಫಲರಾದರು ಎಂದಿದ್ದಾರೆ.

‘ಕೊವಿಡ್-19 ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾದಾಗಲೇ ರೂಪಾನಿಯವರು ರಾಜೀನಾಮೆ ಸಲ್ಲಿಸಿದ್ದರೆ, ಜನ ಅವರನ್ನು ಮೆಚ್ಚುತ್ತಿದ್ದರು,’ ಎಂದು ತಮ್ಮ ಟ್ವೀಟ್ನಲ್ಲಿ ಮೆವಾನಿ ಹೇಳಿದ್ದಾರೆ.

ಮೇ ತಿಂಗಳಲ್ಲಿ ಗುಜರಾತ ಸರ್ಕಾರದ ವಿರುದ್ಧ ಕೋವಿಡ್-19 ಸಂಬಂಧಿಸಿದ ಸಾವುಗಳ ನಿಖರ ವರದಿ ನೀಡದೆ ಕಡಿಮೆ ಸಂಖ್ಯೆಯ ಸಾವುಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಅರೋಪಿಸಲಾಗಿತ್ತು. ನಂತರ ಜುಲೈನಲ್ಲಿ ಗುಜರಾತ ಸರ್ಕಾರ ಅಧೀನದ ಒಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ ಪಾರ್ಶ್ವವಾಯುಕ್ಕೊಳಗಾಗಿದ್ದ ವ್ಯಕ್ತಿಯ ಮುಖದ ಮೇಲೆ ಇರುವೆಗಳು ಸರಿದಾಡುತ್ತಿದ್ದ ವಿಡಿಯೋ ಬಹಿರಂಗಗೊಂಡು ರೂಪಾನಿ ಸರ್ಕಾರ ಖಂಡನೆಗೊಳಗಾಗಿತ್ತು ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಗೂ ಅದೇಶಿಸಲಾಗಿತ್ತು.

ಅದೇ ತಿಂಗಳು ಕೊವಿಡ್ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತಗಳ ವಿರುದ್ಧ ಸುರಕ್ಷತೆಯನ್ನು ಪರಿಷ್ಕರಿಸುವ ಸುಪ್ರೀಮ್ ಕೋರ್ಟ್ ನ ಅಧಿಸೂಚನೆಯೊಂದನ್ನು ಕಡೆಗಣಿಸಿದ್ದಾಕ್ಕಾಗಿ ಸರ್ವೋಚ್ಛ ನ್ಯಾಯಾಲಯವು ಗುಜರಾತ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.

‘ಗುಜರಾತನಲ್ಲಿ ಮುಂದಿನ ವರ್ಷ ನಡೆಯಬೇಕಿರುವ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ರೂಪಾನಿ ಅವರನ್ನು ಕೆಳಗಿಳಿಸಲಾಗಿದೆ,’ ಎಂದು ಮೆವಾನಿ ಹೇಳಿದ್ದಾರೆ.

ಮೂಲಗಳ ಪ್ರಕಾರ ಕೇಂದ್ರ ನಾಯಕತ್ವ ತಮ್ಮ ಕಾರ್ಯವೈಖರಿ ಕುರಿತು ಅತೃಪ್ತಿ ವ್ಯಕ್ತಪಡಿಸಿದ ನಂತರ ರೂಪಾನಿ ಅವರು ರಾಜೀನಾಮೆ ಸಲ್ಲಿಸಿದರು. ರಾಜ್ಯದಲ್ಲಿ ನಾಯಕತ್ವದ ಬಗ್ಗೆ ದೃಢತೆ ಇಲ್ಲದ ಬಿಜೆಪಿ ಅದನ್ನು ಸರಿಪಡಿಸಲು ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲೂ ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಾಯಿಸಿರುವುದು ಇಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ.

65 ವರ್ಷ ವಯಸ್ಸಿನ ರೂಪಾನಿ ಅವರು 2017 ಡಿಸೆಂಬರ್ ನಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಆಡಳಿತ ನಡೆಸುತ್ತಿದ್ದ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Gujarat Politics: ಕರ್ನಾಟಕ ಮಾದರಿಯಲ್ಲಿ ಗುಜರಾತ್​ನಲ್ಲೂ ಜಾತಿ ಲೆಕ್ಕಾಚಾರದ ಮೊರೆ ಹೋದ ಬಿಜೆಪಿ?