ಹೊಸ ಐಟಿ ನಿಯಮಗಳ ಉಲ್ಲಂಘನೆ: ಟ್ವಿಟರ್ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ದಾಖಲು

|

Updated on: May 28, 2021 | 1:19 PM

ದೇಶದ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್​ ಹೊಸ ಐಟಿ ನಿಯಮಗಳಿಗೆ ಬದ್ಧವಾಗಿಲ್ಲ ಎಂದು ದೂರಿ ದೆಹಲಿ ಹೈಕೋರ್ಟ್​ನಲ್ಲಿ ಶುಕ್ರವಾರ ಅರ್ಜಿಯೊಂದು ದಾಖಲಾಗಿದೆ.

ಹೊಸ ಐಟಿ ನಿಯಮಗಳ ಉಲ್ಲಂಘನೆ: ಟ್ವಿಟರ್ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ದಾಖಲು
ಟ್ವಿಟರ್ (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ದೇಶದ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್​ ಹೊಸ ಐಟಿ ನಿಯಮಗಳಿಗೆ ಬದ್ಧವಾಗಿಲ್ಲ ಎಂದು ದೂರಿ ದೆಹಲಿ ಹೈಕೋರ್ಟ್​ನಲ್ಲಿ ಶುಕ್ರವಾರ ಅರ್ಜಿಯೊಂದು ದಾಖಲಾಗಿದೆ. ದೆಹಲಿ ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​​ನಲ್ಲಿ ವಕೀಲರಾಗಿರುವ ಅಮಿತ್ ಆಚಾರ್ಯ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಅತಿಮುಖ್ಯ ಸಾಮಾಜಿಕ ಮಾಧ್ಯವಾಗಿರುವ ಟ್ವಿಟರ್ ಶಾಸನಬದ್ಧ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ಫೆಬ್ರುವರಿ 25ರಂದು ಘೋಷಣೆಯಾಗಿದ್ದ ಹೊಸ ಐಟಿ ನಿಯಮಗಳು ಮೇ 26ರಿಂದ, ಅಂದರೆ ಮೂರು ತಿಂಗಳ ಅಂತರದಲ್ಲಿ ಜಾರಿಗೆ ಬಂದಿವೆ. ಈ ನಿಯಮಗಳ ಪ್ರಕಾರ, ಅಧಿಕಾರಿಗಳು ತಿಳಿಯಬಯಸಿದಾಗ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಯಾವುದೇ ಸಂದೇಶದ ಮೂಲ ಕರ್ತೃಗಳು ಯಾರು ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಜಾಲತಾಣ ವೇದಿಕೆಗಳು ಬದ್ಧವಾಗಿರಬೇಕೆಂದು ಕೇಂದ್ರ ಸರ್ಕಾರ ರೂಪಿಸಿರುವ ಹಲವು ನಿಯಮಗಳ ಪೈಕಿ ಇದು ಮುಖ್ಯವಾದುದು.

ಈ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ಗೆ ಪ್ರತಿಕ್ರಿಯಿಸಿರುವ ಟ್ವಿಟರ್​ ಸಂಸ್ಥೆಯು, ಸರ್ಕಾರಕ್ಕೆ ಸಹಕರಿಸಲು ತಾನು ಬದ್ಧವಾಗಿರುವುದಾಗಿ ಹೇಳಿದೆ. ಆದರೆ ಈಚಿನ ದಿನಗಳಲ್ಲಿ ನಡೆದ ಕೆಲ ಬೆಳವಣಿಗೆಗಳು ಭಾರತದಲ್ಲಿರುವ ತನ್ನ ಉದ್ಯೋಗಿಗಳ ಸುರಕ್ಷೆ ಬಗ್ಗೆ ಭೀತಿಯುಂಟು ಮಾಡಿದೆ ಎಂದು ಹೇಳಿದೆ. ಈಚೆಗಷ್ಟೇ ಟ್ವಿಟರ್​ನ ದೆಹಲಿ ಕಚೇರಿಗೆ ದೆಹಲಿ ಪೊಲೀಸರು ತಂಡವೊಂದು ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬಿಜೆಪಿ ವಕ್ತಾರರ ಟ್ವೀಟ್ ಒಂದಕ್ಕೆ ‘ತಿರುಚಿದ ಮಾಹಿತಿ’ ಟ್ಯಾಗ್ ಅಂಟಿಸಿದ್ದಕ್ಕಾಗಿ ವಿಚಾರಣೆ ನಡೆಸಲು ದೆಹಲಿ ಪೊಲೀಸರು ಟ್ವಿಟರ್ ಕಚೇರಿಗೆ ಭೇಟಿ ನೀಡಿದ್ದರು.

ಐಟಿ ನಿಯಮಗಳಲ್ಲಿರುವ ಕೆಲ ಷರತ್ತುಗಳು ವಾಕ್​ ಸ್ವಾತಂತ್ರ್ಯದ ಆಶಯಗಳನ್ನೇ ಉಲ್ಲಂಘಿಸುತ್ತದೆ ಎಂದು ಗುರುವಾರ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಟ್ವಿಟರ್ ತಿಳಿಸಿತ್ತು. ಟ್ವಿಟರ್​ನ ಹೇಳಿಕೆಯನ್ನು ಖಂಡಿಸಿದ್ದ ಕೇಂದ್ರ ಸರ್ಕಾರವು, ಸಾಕಷ್ಟು ಚರ್ಚೆಗಳ ನಂತರವೇ ಹೊಸ ಐಟಿ ನಿಯಮಗಳನ್ನು ಅಂತಿಮಗೊಳಿಸಲಾಯಿತು. ಟ್ವಿಟರ್ ಸುಮ್ಮನೆ ಟೀಕಿಸುವುದು ಬಿಟ್ಟು, ನೆಲದ ಕಾನೂನಿಗೆ ಬದ್ಧವಾಗಿರಬೇಕು. ದೇಶದ ಕಾನೂನು ಹೇಗಿರಬೇಕು ಎಂಬುದನ್ನು ಸಾರ್ವಭೌಮ ಸರ್ಕಾರ ನಿರ್ಧರಿಸುತ್ತದೆ. ಒಂದು ಸಾಮಾಜಿಕ ಜಾಲತಾಣವಾಗಿರುವ ಟ್ವಿಟರ್ ಅದಕ್ಕೆ ಬದ್ಧವಾಗಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು.

ನಿಯಮ ಉಲ್ಲಂಘನೆಯ ಹಲವು ಉದಾಹರಣೆಗಳನ್ನು ಪ್ರಸ್ತಾಪಿಸಿದ್ದ ಕೇಂದ್ರ ಸರ್ಕಾರವು ಟ್ವಿಟರ್​ ತನ್ನನ್ನು ತಾನು ನಿಯಮಗಳಿಗೆ ಬಾಹಿರವಾಗಿ ಇರಲು ಅರ್ಹತೆ ಹೊಂದಿರುವುದಾಗಿ ಭಾವಿಸಿದೆ. ಇನ್ನಾದರೂ ಅದು ಭಾರತದ ಕಾನೂನುಗಳಿಗೆ ಬದ್ಧವಾಗಿರುವುದನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಹಿಂಡಿತ್ತು.

(Plea in Delhi high court filed against twitter over non compliance of new rules)

ಇದನ್ನೂ ಓದಿ: ಕೇಂದ್ರ ಸಚಿವರ ಕಾಂಗ್ರೆಸ್ ಟೂಲ್​ಕಿಟ್ ಟ್ವೀಟ್​ಗಳನ್ನು ಮ್ಯಾನಿಪುಲೇಟೆಡ್ ಮೀಡಿಯಾ ಎಂದು ಗುರುತಿಸುವಂತೆ ಟ್ವಿಟರ್​ಗೆ ಪತ್ರ

ಇದನ್ನೂ ಓದಿ: 15 ದಿನಗಳ ಒಳಗೆ ನಿಯಮಪಾಲನೆ ವಿವರ ನೀಡಲು ಆನ್​ಲೈನ್ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ