ಬಾಂಗ್ಲಾದೇಶದಲ್ಲಿರುವ ಪುರಾತನ ಪ್ರಸಿದ್ಧ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ; ಬೆಳ್ಳಿಯ ಮುಕುಟ ಸಮರ್ಪಣೆ

|

Updated on: Mar 27, 2021 | 11:47 AM

ಕಾಳಿ ಮಾತೆಯ ಎದುರು ಮಂತ್ರ ಪಠಿಸುತ್ತಿದ್ದ ಅರ್ಚಕರ ಪಕ್ಕ ಮಾಸ್ಕ್​ ಹಾಕಿಕೊಂಡೇ ನೆಲದ ಮೇಲೆ ಕುಳಿತ ಪ್ರಧಾನಿ ನರೇಂದ್ರ ಮೋದಿ, ಕಾಳಿದೇವಿಯ ಪ್ರಾರ್ಥನೆ ಮಾಡಿದರು. ನಂತರ ಕೈಯಿಂದಲೇ ತಯಾರಿಸಿದ ಮುಕುಟವನ್ನು ಕಾಳಿದೇವಿಗೆ ಅರ್ಪಿಸಿದರು.

ಬಾಂಗ್ಲಾದೇಶದಲ್ಲಿರುವ ಪುರಾತನ ಪ್ರಸಿದ್ಧ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ; ಬೆಳ್ಳಿಯ ಮುಕುಟ ಸಮರ್ಪಣೆ
ಕಾಳಿ ಮಾತೆಗೆ ಚಿನ್ನದ ಲೇಪನ ಇರುವ ಬೆಳ್ಳಿ ಮುಕುಟ ಅರ್ಪಿಸಿದ ಪ್ರಧಾನಿ ಮೋದಿ
Follow us on

ಢಾಕಾ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದು 50 ವರ್ಷ ಪೂರೈಸಿದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಅಲ್ಲಿಗೆ ಹೋಗಿದ್ದು, ನಿನ್ನೆ ಭಾಷಣವನ್ನೂ ಮಾಡಿದ್ದಾರೆ. ಎರಡನೇ ದಿನವಾದ ಇಂದು ಪ್ರಧಾನಿ ಮೋದಿ ಮೊದಲು ಆ ದೇಶದ ಅತ್ಯಂತ ಪುರಾತನ, ಶತಮಾನಗಳಷ್ಟು ಹಳೆಯ ಕಾಳಿ ದೇಗುಲಕ್ಕೆ ಭೇಟಿ ನೀಡಿದರು. ಬಾಂಗ್ಲಾದೇಶದ ನೈಋತ್ಯ ಷಟ್ಕಿರಾ ಜಿಲ್ಲೆಯ ಈಶ್ವರೀಪುರ ಗ್ರಾಮದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ತೆರಳಿ, ಕಾಳಿಮಾತೆಗೆ ಪ್ರಾರ್ಥನೆ ಸಲ್ಲಿಸಿದರು.

ಕಾಳಿ ಮಾತೆಯ ಎದುರು ಮಂತ್ರ ಪಠಿಸುತ್ತಿದ್ದ ಅರ್ಚಕರ ಪಕ್ಕ ಮಾಸ್ಕ್​ ಹಾಕಿಕೊಂಡೇ ನೆಲದ ಮೇಲೆ ಕುಳಿತ ಪ್ರಧಾನಿ ನರೇಂದ್ರ ಮೋದಿ, ಕಾಳಿದೇವಿಯ ಪ್ರಾರ್ಥನೆ ಮಾಡಿದರು. ನಂತರ ಕೈಯಿಂದಲೇ ತಯಾರಿಸಿದ ಮುಕುಟವನ್ನು ಕಾಳಿದೇವಿಗೆ ಅರ್ಪಿಸಿದರು. ಈ ಮುಕುಟ ಬೆಳ್ಳಿಯದಾಗಿದ್ದು, ಚಿನ್ನದ ಲೇಪನವನ್ನು ಹೊಂದಿದೆ. ಪರಿಣತ ಕುಶಲಕರ್ಮಿಗಳು ಇದನ್ನು ಮೂರು ವಾರಗಳಲ್ಲಿ ತಯಾರಿಸಿದ್ದಾರೆ ಎನ್ನಲಾಗಿದೆ.

ಬಳಿಕ ಮಾತನಾಡಿದ ನರೇಂದ್ರ ಮೋದಿಯವರು, ನನಗಿವತ್ತು ಈ ಶಕ್ತಿಪೀಠಕ್ಕೆ ಭೇಟಿ ನೀಡಿ, ಕಾಳಿ ಮಾತೆಗೆ ನಮಿಸುವ ಅವಕಾಶ ಸಿಕ್ಕಿತು. ಮನುಕುಲಕ್ಕೆ ಕಾಡುತ್ತಿರುವ ಕೊವಿಡ್​-19 ಸೋಂಕನ್ನು ನಿರ್ಮೂಲನ ಮಾಡುವಂತೆ ನಾನು ಬೇಡಿಕೊಂಡಿದ್ದೇನೆ ಎಂದು ಹೇಳಿದರು.

ಇಲ್ಲಿ ಕಾಳಿ ಮಾತೆಯ ಮೇಳ ನಡೆದಾಗ ಗಡಿಭಾಗದ ಭಾರತೀಯರೂ ಕೂಡ ಇಲ್ಲಿಗೆ ಆಗಮಿಸುತ್ತಾರೆ. ಕಾಳಿ ಪೂಜೆಗೆ ಆಗಮಿಸುವವರಿಗಾಗಿ ಇಲ್ಲೊಂದು ಸಮುದಾಯ ಭವನ ಕಟ್ಟಿಸುವ ಅಗತ್ಯವಿದೆ. ಹೀಗೆ ಸಮುದಾಯ ಭವನ ನಿರ್ಮಾಣವಾದರೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಮಾರಂಭಗಳಿಗೂ ಸಹಾಯವಾಗುತ್ತದೆ. ಅದನ್ನು ದೊಡ್ಡ ಮಟ್ಟದಲ್ಲೇ ಕಟ್ಟಬೇಕು. ಆಗಾ ಚಂಡಮಾರುತದಂತಹ ನೈಸರ್ಗಿಕ ವಿಪತ್ತು ಎದುರಾದಾಗ ಜನರಿಗೆ ಆಶ್ರಯವೂ ಆಗುತ್ತದೆ. ಈ ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ಭಾರತ ಸರ್ಕಾರವೇ ಕೈಗೊಳ್ಳಲಿದೆ. ಇದಕ್ಕೆ ಸಹಕಾರ ನೀಡುತ್ತೇವೆ ಎಂದಿರುವ ಬಾಂಗ್ಲಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಭಾರತ-ಬಾಂಗ್ಲಾ ಗಡಿ ಭಾಗದಲ್ಲಿರುವ ಈ ಕಾಳಿಮಾತೆ ದೇವಸ್ಥಾನ 51 ಶಕ್ತಿಪೀಠಗಳಲ್ಲಿ ಒಂದು. ಈ 51 ಶಕ್ತಿಪೀಠಗಳು ಭಾರತ ಮತ್ತು ಅದರ ನೆರೆ ರಾಷ್ಟ್ರಗಳಲ್ಲಿ ಇವೆ. ಜೆಶೋರೇಶ್ವರಿ ಕಾಳಿ ದೇವಸ್ಥಾನವನ್ನು 16ನೇ ಶತಮಾನದಲ್ಲಿ ಹಿಂದು ರಾಜನೊಬ್ಬ ಕಟ್ಟಿಸಿದ್ದು ಎಂದು ಹೇಳಲಾಗಿದೆ.

ಇದನ್ನೂ ಓದಿ:ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ ಹೋರಾಡಿ ಜೈಲಿಗೂ ಹೋಗಿದ್ದೆ: ಬಾಂಗ್ಲಾ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ

ವಿವಿಧೋದ್ದೇಶ ಹೊತ್ತು ಬಾಂಗ್ಲಾಕ್ಕೆ ಬಂದಿಳಿದ ನರೇಂದ್ರ ಮೋದಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಂದ ಸುಸ್ವಾಗತ