ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ ಹೋರಾಡಿ ಜೈಲಿಗೂ ಹೋಗಿದ್ದೆ: ಬಾಂಗ್ಲಾ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ
‘ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲೊಂದು. ಈ ಸಮಾರಂಭದಲ್ಲಿ ನಾನು ಭಾಗವಹಿಸುವ ಅವಕಾಶವನ್ನು ಬಾಂಗ್ಲಾದೇಶ ನೀಡಿದೆ’ ಎಂದು ಮೋದಿ ತಿಳಿಸಿದ್ದಾರೆ. 1971ರ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಸೇನೆಯ ಕೊಡುಗೆಯನ್ನೂ ಅವರು ಸ್ಮರಿಸಿಕೊಂಡಿದ್ದಾರೆ.
ಢಾಕಾ: ಸ್ವಾತಂತ್ರ್ಯ ಪಡೆದು 50 ವರ್ಷಗಳನ್ನು ಪೂರೈಸಿದ ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ತಮ್ಮ ರಾಜಕೀಯ ಜೀವನದ ಮೊದಲ ಹೋರಾಟಗಳಲ್ಲಿ ಬಾಂಗ್ಲಾ ವಿಮೋಚನೆಯ ಹೋರಾಟವೂ ಒಂದು ಎಂದು ಮೋದಿ ಬಾಂಗ್ಲಾದೇಶದಲ್ಲಿ ಇಂದು (ಮಾರ್ಚ್ 24) ತಿಳಿಸಿದ್ದಾರೆ.
‘ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟ ನನ್ನ ಜೀವನದ ಪ್ರಮುಖ ಅಂಗವೂ ಹೌದು. ನನ್ನ ಜೊತೆಗಾರರು ಮತ್ತು ನಾನು ಬಾಂಗ್ಲಾ ವಿಮೋಚನೆಗಾಗಿ ಸತ್ಯಾಗ್ರಹ ಕೈಗೊಂಡಿದ್ದೆವು. ಆಗ ನಾನು 20ರ ಹರೆಯದಲ್ಲಿದ್ದೆ. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಸತ್ಯಾಗ್ರಹಕ್ಕಾಗಿ ಜೈಲಿಗೆ ಹೋಗುವ ಅವಕಾಶವನ್ನೂ ನಾನು ಪಡೆದಿದ್ದೆ’ ಎಂದು ಮೋದಿ ಮಾತನಾಡಿದ್ದಾರೆ.
ಮುಜಿಬ್ ಜ್ಯಾಕೆಟ್ ಧರಿಸಿಕೊಂಡು ಕಂಡ ಪ್ರಧಾನಿ ಮೋದಿ, ಬಾಂಗ್ಲಾದೇಶದ ಪಿತಾಮಹ ಶೇಖ್ ಮುಜಿಬುರ್ ರಹಮಾನ್ಗೆ ಗೌರವ ಸಲ್ಲಿಸಿದ್ದಾರೆ. ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಅವರು ಪಾಲ್ಗೊಂಡಿದ್ದಾರೆ. ಈ ವೇಳೆ ಬಾಂಗ್ಲಾ ರಾಷ್ಟ್ರಪತಿ ಅಬ್ದುಲ್ ಹಮೀದ್ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಕೂಡ ಜೊತೆಗಿದ್ದರು. ಬಾಂಗ್ಲಾದೇಶದ ರಾಷ್ಟ್ರೀಯ ಪರೇಡ್ ಗ್ರೌಂಡ್ ಢಾಕಾದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲೊಂದು. ಈ ಸಮಾರಂಭದಲ್ಲಿ ನಾನು ಭಾಗವಹಿಸುವ ಅವಕಾಶವನ್ನು ಬಾಂಗ್ಲಾದೇಶ ನೀಡಿದೆ’ ಎಂದು ಮೋದಿ ತಿಳಿಸಿದ್ದಾರೆ. 1971ರ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಸೇನೆಯ ಕೊಡುಗೆಯನ್ನೂ ಅವರು ಸ್ಮರಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ ಮಾಡಿದ ಬಾಂಗ್ಲಾ ಸೇನೆಯ ಹೋರಾಟವನ್ನು ಹಾಗೂ ಬಾಂಗ್ಲಾಕ್ಕೆ ಜೊತೆಯಾದ ಭಾರತೀಯ ಸೈನಿಕರ ಕೊಡುಗೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಸೈನಿಕರ ಧೈರ್ಯ ಮತ್ತು ಸ್ಥೈರ್ಯವನ್ನು ನಾವು ಮರೆತಿಲ್ಲ ಎಂದು ಮೋದಿ ಹೇಳಿದ್ದಾರೆ.
ಬಾಂಗ್ಲಾದೇಶ ಹಾಗೂ ಭಾರತ ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಭವಿಷ್ಯಕ್ಕೆ ಬೇಕಾದ ದೂರದೃಷ್ಟಿ ಇದೆ. ಎರಡೂ ದೇಶಗಳು ಒಟ್ಟಾಗಿ ಅಭಿವೃದ್ಧಿ ಹೊಂದುವುದು ಕೂಡ ಅಗತ್ಯವಿದೆ. ಅದೇ ಕಾರಣಕ್ಕೆ ಭಾರತ ಹಾಗೂ ಬಾಂಗ್ಲಾದೇಶ ಸರ್ಕಾರಗಳು ಈ ನೆಲೆಯಲ್ಲಿ ಅರ್ಥಪೂರ್ಣ ಪ್ರಯತ್ನ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
Speaking at the National Day programme of Bangladesh. https://t.co/ka54Wleu7x
— Narendra Modi (@narendramodi) March 26, 2021
ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಮೋದಿ ಇಂದಿನ ಸಮಾರಂಭಕ್ಕೂ ಮೊದಲು ಬಾಂಗ್ಲಾ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಅವರನ್ನು ಢಾಕಾದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಕೆಲವು ಸಮುದಾಯದ ನಾಯಕರನ್ನೂ ಮೋದಿ ಭೇಟಿಯಾಗಿದ್ದಾರೆ. ಬಾಂಗ್ಲಾದ ಅಲ್ಪಸಂಖ್ಯಾತರನ್ನು, ಮುಕ್ತಿಜೊಧಾಸ್ ಅಥವಾ ಸ್ವಾತಂತ್ರ್ಯ ಹೋರಾಟಗಾರರನ್ನು, ಭಾರತದ ಗೆಳೆಯರು ಹಾಗೂ ಯುವ ನಾಯಕರನ್ನು ಮೋದಿ ಭೇಟಿಯಾಗಿದ್ದಾರೆ.
ಬಾಂಗ್ಲಾದೇಶದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕಲಾಪ್ರದರ್ಶನ ನೀಡಲು ಪಶ್ಚಿಮ ಬಂಗಾಳದ ಇಬ್ಬರು ಪ್ರಮುಖ ಕಲಾವಿದರನ್ನೂ ಭಾರತದಿಂದ ಆಹ್ವಾನಿಸಲಾಗಿತ್ತು. ಸ್ವಾತಂತ್ರ್ಯ ಪಡೆದು 50 ವರ್ಷ ಪೂರೈಸುತ್ತಿರುವ ಬಾಂಗ್ಲಾ, ಅಲ್ಲಿನ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವವನ್ನೂ ಆಚರಿಸಿಕೊಳ್ಳುತ್ತಿದೆ.
ಮೋದಿ ಬಾಂಗ್ಲಾ ಭೇಟಿ ವೇಳೆ ದೇಶದ ಕೆಲವೆಡೆಗಳಲ್ಲಿ ಪ್ರತಿಭಟನೆಗಳೂ ನಡೆದಿವೆ. ಚಿತ್ತಗಾಂವ್ನಲ್ಲಿ ನಡೆದ ಗಲಭೆಯಲ್ಲಿ ಒಂದು ಗುಂಪಿನ ನಾಲ್ವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದ ರಾಷ್ಟ್ರಿಯ ಹುತಾತ್ಮ ಸ್ಮಾರಕದಲ್ಲಿ ಗಿಡ ನೆಟ್ಟು ನೀರೆರೆದ ಪ್ರಧಾನಿ ಮೋದಿ
ವಿವಿಧೋದ್ದೇಶ ಹೊತ್ತು ಬಾಂಗ್ಲಾಕ್ಕೆ ಬಂದಿಳಿದ ನರೇಂದ್ರ ಮೋದಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಂದ ಸುಸ್ವಾಗತ
Published On - 11:07 pm, Fri, 26 March 21