ವಿವಿಧೋದ್ದೇಶ ಹೊತ್ತು ಬಾಂಗ್ಲಾಕ್ಕೆ ಬಂದಿಳಿದ ನರೇಂದ್ರ ಮೋದಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಂದ ಸುಸ್ವಾಗತ
ಕೊವಿಡ್ಗೂ ಮುನ್ನ ಹಲವು ದೇಶಗಳಿಗೆ ಭೇಟಿಯಿಡುವ ಸಂಪ್ರದಾಯ ಹೊಂದಿದ್ದ ಪ್ರಧಾನಿ ನರೇಂದ್ರ ಮೋದಿ, ಕೊವಿಡ್ ಕಾರಣಗಳಿಂದ ವಿದೇಶ ಪ್ರಯಾಣಗಳನ್ನು ಸ್ಥಗಿತಗೊಳಿಸಿದ್ದರು. ಇಂದಿನಿಂದ ಆರಂಭವಾಗಿರುವ ಅವರ ಬಾಂಗ್ಲಾದೇಶ ಭೇಟಿ ಈ ಕಾರಣಗಳಿಂದ ಅತ್ಯಂತ ಮಹತ್ವ ಪಡೆದಿದೆ.
ಢಾಕಾ: ಕೊವಿಡ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ವಿದೇಶ ಪ್ರವಾಸಕ್ಕೆ ತೆರಳಿದ್ದು ಇಂದು ಬೆಳಗ್ಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬಂದಿಳಿದ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸ್ವಾಗತಿಸಿದ್ದಾರೆ. ಬಾಂಗ್ಲಾದ 50ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗಯಾಗಲಿರುವ ಪ್ರಧಾನಿ ಮೋದಿ, ನಾಳೆ ಮಾಟುವ ಸಮುದಾಯದ ಒರಾಕಂಡಿಯಲ್ಲಿರುವ ದೇಗುಲ ದರ್ಶನ ಕೈಗೊಳ್ಳಲಿದ್ದಾರೆ. ಅವರ ಬಾಂಗ್ಲಾ ಭೇಟಿಯ ಹಿಂದೆ ‘ವಿವಿದೋದ್ಧೇಶಗಳು’ ಕಂಡುಬಂದಿವೆ.
ಕೊವಿಡ್ ಸೋಂಕು ವಿಶ್ವದಾದ್ಯಂತ ಕಾಣಿಸಿಕೊಂಡ ನಂತರ ಅಂತರಾಷ್ಟ್ರೀಯ ಪ್ರವಾಸ, ತಿರುಗಾಟಗಳು ಸ್ಥಗಿತಗೊಂಡಿದ್ದವು. ಯಾವುದೇ ರಾಷ್ಟ್ರಗಳ ನಾಯಕೂ ವಿದೇಶ ಪ್ರಯಾಣ ಕೈಗೊಂಡಿರಲಿಲ್ಲ. ಕೊವಿಡ್ಗೂ ಮುನ್ನ ಹಲವು ದೇಶಗಳಿಗೆ ಭೇಟಿಯಿಡುವ ಸಂಪ್ರದಾಯ ಹೊಂದಿದ್ದ ಪ್ರಧಾನಿ ನರೇಂದ್ರ ಮೋದಿ, ಕೊವಿಡ್ ಕಾರಣಗಳಿಂದ ವಿದೇಶ ಪ್ರಯಾಣಗಳನ್ನು ಸ್ಥಗಿತಗೊಳಿಸಿದ್ದರು. ಇಂದಿನಿಂದ ಆರಂಭವಾಗಿರುವ ಅವರ ಬಾಂಗ್ಲಾದೇಶ ಭೇಟಿ ಈ ಕಾರಣಗಳಿಂದ ಅತ್ಯಂತ ಮಹತ್ವ ಪಡೆದಿದೆ.
ಸಿಎಎ ಕಾಯ್ದೆ; ಬಾಂಗ್ಲಾ ಮುನಿಸು ಭಾರತದಲ್ಲಿ ಸಿಎಎ ಕಾಯ್ದೆಯ ಪ್ರಸ್ತಾಪದ ನಂತರ ಬಾಂಗ್ಲಾದೇಶ ಕೇಂದ್ರ ಸರ್ಕಾರದ ಜತೆ ಮುನಿಸು ಪ್ರದರ್ಶನ ಮಾಡಿತ್ತು. ದೇಶದ ವಿವಿಧೆಡೆ ಹರಡಿರುವ ಬಾಂಗ್ಲಾ ನಿರಾಶ್ರಿತರು ತಮ್ಮ ವಾಸ್ತವ್ಯ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಬಹು ಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನರೇಂದ್ರ ಮೋದಿ ಸರ್ಕಾರಕ್ಕೆ ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿ ಸಹ ದೊರೆತಿತ್ತು. ಈ ಎಲ್ಲ ವಿರೋಧಗಳನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಬಗ್ಗೆಯೂ ಚರ್ಚೆಯಾಗುತ್ತಿದೆ.
ಪಶ್ಚಿಮ ಬಂಗಾಳ ಮತದಾರ ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಮತ್ತು ಬಂಗಬಂಧು ಶೇಖ್ ಮುಜೀಬುರ್ ರಹಮಾನ್ ಅವರ ಜನ್ಮಶತಮಾನೋತ್ಸವದ ನಿಮಿತ್ತಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆ ಬಾಂಗ್ಲಾದೇಶದ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅವರ ಈ ನಡೆ ಬಂಗಾಳ ಮತದಾರರ ಮೇಲೆ ಪ್ರಭಾವ ಬೀರುವ ಗಾಢ ಉದ್ದೇಶ ಹೊಂದಿದೆ ಎಂಬ ವ್ಯಾಖ್ಯಾನ ಕೇಳಿಬಂದಿದೆ.
ಢಾಕಾ ಸಮೀಪದ ಓರ್ಖಾಂಡಿ ಮಾತುವಾ ದೇವಸ್ಥಾನ ಮತ್ತು ಜೆಸ್ಸೋರೇಶ್ವರಿ ಕಾಳಿ ದೇಗುಲಕ್ಕೆ ಭೇಟಿ ನೀಡಲಿರುವ ಪ್ರಧಾನಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದು ಅದೇ ದಿನ ನಡೆಯಲಿರುವ ಪಶ್ಚಿಮ ಬಂಗಾಳದ ಚುನಾವಣೆಯ ಮೊದಲ ಹಂತವನ್ನೂ ಸೇರಿ, ಮುಂದಿನ 7 ಹಂತಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಿವೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಮೊದಲ ಬಾರಿಗೆ ಹೊರ ದೇಶದ ಗಣ್ಯರೊಬ್ಬರು ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಾಂಗ್ಲಾದೇಶದ ಪಾಲಿಗೆ ಮಹತ್ವದ್ದಾಗಿ ಪರಿಣಮಿಸಲಿದೆ.
ಅಲ್ಲದೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಅಕ್ಕಪಕ್ಕದ ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಭೂತಾನ್ ದೇಶಗಳ ಉನ್ನತ ಮಟ್ಟದ ನಾಯಕರು ಇದೇ ಅವಧಿಯಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ. ಈ ಎಲ್ಲ ದೇಶಗಳ ನಾಯಕರು ಒಟ್ಟಿಗೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರೊನಾ ನಂತರ ಭಾರತದ ಪ್ರಧಾನಿ ಸೇರಿ ಇತರ ರಾಷ್ಟ್ರಗಳ ನಾಯಕರು ದೇಶಕ್ಕೆ ಭೇಟಿ ನೀಡುತ್ತಿರುವುದು ಐತಿಹಾಸಿಕ ಘಳಿಗೆ ಎಂದೇ ಬಾಂಗ್ಲಾದೇಶ ವ್ಯಾಖ್ಯಾನಿಸಿದೆ.
ಚುನಾವಣೆ ಯಾವಾಗ? ಪಶ್ಚಿಮ ಬಂಗಾಳದಲ್ಲಿ ನಾಳೆ (ಮಾರ್ಚ್27)ರಿಂದಲೇ ಚುನಾವಣೆ ಆರಂಭವಾಗಲಿದೆ. ಒಟ್ಟು ಎಂಟು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 29ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಕದನ ಕಣ: ಮೊದಲ ಹಂತದ ಚುನಾವಣೆಯಲ್ಲಿ ಈ 5 ಕ್ಷೇತ್ರಗಳೇ ನಿರ್ಣಾಯಕ