ಪಶ್ಚಿಮ ಬಂಗಾಳ ಕದನ ಕಣ: ಮೊದಲ ಹಂತದ ಚುನಾವಣೆಯಲ್ಲಿ ಈ 5 ಕ್ಷೇತ್ರಗಳೇ ನಿರ್ಣಾಯಕ
West Bengal Assembly Elections 2021: ಮೊದಲ ಹಂತದ ಚುನಾವಣೆ ನಡೆಯುವ 30 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಸಿನಿಮಾ ಕಲಾವಿದರು ಸ್ಪರ್ಧಿಸುತ್ತಿದ್ದಾರೆ. ನಂದಿಗ್ರಾಮದ ಪಕ್ಕದಲ್ಲಿರುವ ಖೆಜುರಿ ಚುನಾವಣಾ ಕ್ಷೇತ್ರ ನಿರ್ಣಾಯಕ ಪಾತ್ರವಹಿಸಲಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ 30 ವಿಧಾನಸಭಾ ಕ್ಷೇತ್ರಗಳು ಸಿದ್ಧವಾಗಿವೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿವರ ಮತ್ತು ಚುನಾವಣಾ ಕ್ಷೇತ್ರಗಳ ಮಾಹಿತಿ ಆಧರಿಸಿ ಟಿವಿ9 ಚುನಾವಣಾ ಅಧ್ಯಯನ ತಂಡವು ಜಿದ್ದಾಜಿದ್ದಿ ಪೈಪೋಟಿ ನಡೆಯಲಿರುವ ಐದು ಪ್ರಮುಖ ಸೀಟುಗಳನ್ನು ಗುರುತಿಸಿದೆ. ಝಾಗ್ರಾಮ್ ಜಿಲ್ಲೆಯ ಝಾಗ್ರಾಮ್, ಪಶ್ಚಿಮ ಮಿಡ್ನಾಪುರದ ಮೇದಿನಿಪುರ್, ಬಂಕುರಾ ಜಿಲ್ಲೆಯ ರಾಣಿಬಂಧ್, ಪುರುಲಿಯಾದ ಬಾಘಮುಂಡಿ, ಪೂರ್ವ ಮಿಡ್ನಾಪುರದ ಪೊರ್ನ ಖೆಜುರಿ ಇವು ಪ್ರಮುಖ ಚುನಾವಣಾ ಕ್ಷೇತ್ರಗಳಾಗಿವೆ.
ಝಾಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಬಿರ್ಬಹಾ ಹನ್ಸದಾ (38), ಬಿಜೆಪಿಯ ಸುಖ್ಮಯ್ ಸತ್ಪತಿ (52), ಮಾರ್ಕ್ಸಿಸ್ಟ್ ಪಕ್ಷದ ಮಧುಜಾ ಸೆನ್ ರಾಯ್ (37) ಕಣದಲ್ಲಿದ್ದಾರೆ. 38ರ ಹರೆಯದ ಬಿರ್ಬಹಾ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಬಿನ್ಪುರ್ ಚುನಾವಣಾ ಕ್ಷೇತ್ರದ ಮಾಜಿ ಶಾಸಕ ನರೇಂದ್ರ ಹನ್ಸದಾ ಅವರ ಪುತ್ರಿ. ಬಿರ್ಬಹಾ ಕೆಲವು ಸಂಥಾಲಿ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದರು.ಈ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ 2016 ವಿಧಾನಸಭೆ ಚುನಾವಣೆ ಅಥವಾ 2019ರ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
2016ರಲ್ಲಿ ಸುಕುಮಾರ್ ಹನ್ಸದಾ, ಬಂಗಾಳದ ಆಡಳಿತಾರೂಢ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಶೇ 55ರಷ್ಟು ಮತಗಳನ್ನು ಇವರು ಗಳಿಸಿದ್ದರು. 2019ರಲ್ಲಿ ಬಿಜೆಪಿ ಈ ಚುನಾವಣಾ ಕ್ಷೇತ್ರದಲ್ಲಿ 1,643 ಮತಗಳ ಮುನ್ನಡೆ ಸಾಧಿಸಿತ್ತು. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೇ 10 ಮತಗಳಿಸಿ ಗೆದ್ದಿದ್ದರು.
ಝಾಗ್ರಾಮ್ ಚುನಾವಣಾ ಕ್ಷೇತ್ರದ ಬಗ್ಗೆ ಹೇಳುವುದಾದರೆ ಇಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹತೊ ಸಮುದಾಯದವರು ಶೇ 16, ಪರಿಶಿಷ್ಟ ಜಾತಿ ಶೇ 19 ಮತ್ತು ಪರಿಶಿಷ್ಟ ಪಂಗಡದವರ ಸಂಖ್ಯೆ ಶೇ 23ರಷ್ಟಿದೆ. ಹಾಗಾಗಿ ಒಟ್ಟು ಜನಸಂಖ್ಯೆಯ ಶೇ 58ರಷ್ಟು ಜನರು ಹಿಂದುಳಿದ ಜಾತಿಯವರಾಗಿದ್ದಾರೆ. ಇಲ್ಲಿ ಶೇ 4ರಷ್ಟು ಮುಸ್ಲಿಂ ಮತಗಳಿವೆ.
ಮೇದಿನಿಪುರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸಿನಿಮಾ ನಟಿ ಜೂನ್ ಮಲಿಹಾ (51), ಬಿಜೆಪಿ ಪಕ್ಷದಿಂದ ಶಮಿತ್ ದಾಸ್ (51), ಸಿಪಿಎಂನಿಂದ ತರುಣ್ ಕುಮಾರ್ ಘೋಷ್ (61) ಸ್ಪರ್ಧಿಸಲಿದ್ದಾರೆ. 2016ರಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷ ಶೇ 50ರಷ್ಟು ಮತಗಳನ್ನು ಗಳಿಸಿ ಗೆದ್ದಿತ್ತು. ಮೂರು ವರ್ಷಗಳ ನಂತರ ಲೋಕಸಭೆ ಚುನಾವಣೆಯಲ್ಲಿ 16,641 ಮತಗಳ ಮುನ್ನಡೆ ಸಾಧಿಸಿತ್ತು. ಮೇದಿನಿಪುರ್ ವಿಧಾನಸಭಾ ಕ್ಷೇತ್ರವು ಖರಗ್ಪುರ್ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸ್ಪರ್ಧಿಸಿದ್ದರು.
ಝಾಗ್ರಾಮ್ನಂತೆಯೇ ಮೇದಿನಿಪುರ್ ಚುನಾವಣಾ ಕ್ಷೇತ್ರದಲ್ಲಿ ಹಿಂದುಳಿದ ಜಾತಿಯದ್ದೇ ಪ್ರಾಬಲ್ಯವಿದೆ. ಮಹತೊ ಶೇ 9, ಎಸ್ಸಿ ಶೇ 15 ಮತ್ತು ಎಸ್ಟಿ ಶೇ 10 ಇದ್ದು, ಒಟ್ಟು ಇವರ ಪ್ರಾತಿನಿಧ್ಯ ಶೇ 34 ಇದೆ. ಅಂದರೆ ಮೂವರಲ್ಲಿ ಒಬ್ಬರು ಹಿಂದುಳಿದ ಜಾತಿಗೆ ಸೇರಿದವರಾಗಿದ್ದಾರೆ. ಇಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 11ರಷ್ಟಿದೆ.
ರಾಣಿಬಂಧ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಷುದಿರಮ್ ಟುಡು (49), ಟಿಎಂಸಿ ಪಕ್ಷದ ಜ್ಯೋತ್ಸಾ ಮಂಡಿ (35), ಸಿಪಿಐ(ಎಂ) ಪಕ್ಷದ ದೆಬ್ಲಿನಾ ಹೆಂಬ್ರಾಮ್ (49) ಸ್ಪರ್ಧಿಸುತ್ತಿದ್ದಾರೆ. 2016ರಲ್ಲಿ ಜ್ಯೋತ್ಸಾ ಮಂಡಿ ಶೇ 47ಕ್ಕಿಂತಲೂ ಹೆಚ್ಚು ಮತಗಳಿಸಿ ಗೆದ್ದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಸ್ ಸರ್ಕಾರ್ 15,814 ಮತಗಳ ಮುನ್ನಡೆ ಸಾಧಿಸಿದ್ದರು.
ರಾಣಿಬಂಧ್ ಕ್ಷೇತ್ರದಲ್ಲಿ ಶೇ 64ರಷ್ಟು ಜನರು ಹಿಂದುಳಿದ ಜಾತಿಗೆ ಸೇರಿದವರಾಗಿದ್ದಾರೆ. ಈ ಪೈಕಿ ಮಹತೊ ಶೇ 10, ಎಸ್ಸಿ ಶೇ 21, ಎಸ್ಟಿ ಶೇ 33 ಮತ್ತು ಮುಸ್ಲಿಮರ ಸಂಖ್ಯೆ ಶೇ 3ರಷ್ಟಿದೆ.
ಪುರುಲಿಯಾ ಜಿಲ್ಲೆಯ ಪಕ್ಕದ ಬಾಘಮುಂಡಿ ಚುನಾವಣಾ ಕ್ಷೇತ್ರದಲ್ಲಿ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (AJSU) ಪಕ್ಷ ಬಿಜೆಪಿ ಮೈತ್ರಿ ಪಕ್ಷವಾಗಿ ಕಣಕ್ಕಿಳಿದಿದೆ. ಜಾರ್ಖಂಡ್ ಮೂಲದ ಎಜೆಎಸ್ಯು ಪಕ್ಷ 1986ರಲ್ಲಿ ಆರಂಭವಾಗಿತ್ತು. ಎಜೆಎಸ್ಯು ಅಭ್ಯರ್ಥಿಯಾಗಿ ಅಶುತೋಷ್ ಮಹತೊ (53), ಎಡಪಕ್ಷದಿಂದ ದೆರ್ಬಂಜವ್ ಮಹತೊ (37) , ಟಿಎಂಸಿ ಪಕ್ಷದಿದಂ ಸುಶಾಂತ್ ಮಹತೊ (39), ಮತ್ತು ಕಾಂಗ್ರೆಸ್ ಪಕ್ಷದಿಂದ ನೇಪಾಳ್ ಚಂದ್ರ ಮಹತೊ ಕಣಕ್ಕಿಳಿದಿದ್ದಾರೆ.
ನೇಪಾಳ್ ಚಂದ್ರ ಮಹತೊ ಅವರು ಕಾಂಗ್ರೆಸ್ ನ ಹಿರಿಯ ನೇತಾರರಾಗಿದ್ದು, 2016ರಲ್ಲಿ ಶೇ 47ರಷ್ಟು ಮತಗಳಿಸಿ ಗೆದ್ದಿದ್ದರು. ಆದಾಗ್ಯೂ, 2016 ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿಜೆಪಿ ಅಭ್ಯರ್ಥಿ ಜ್ಯೋತಿರ್ಮಯ್ ಸಿಂಗ್ ಮಹತೊ 2019ರ ಲೋಕಸಭಾ ಚುನಾವಣೆಯಲ್ಲಿ 52,708 ಮತಗಳ ಮುನ್ನಡೆ ಸಾಧಿಸಿ ಶೇ 51ರಷ್ಟು ಮತಗಳಿಸಿದ್ದರು. ಪುರುಲಿಯಾ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬಾಘಮುಂಡಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದರು ಜ್ಯೋತಿರ್ಮಯಿ ಸಿಂಗ್ ಮಹತೊ. ಈ ಚುನಾವಣಾ ಕ್ಷೇತ್ರದಲ್ಲಿ ಎಲ್ಲ ಅಭ್ಯರ್ಥಿಗಳು ಮಹತೊ ಸಮುದಾಯದವರಾಗಿದ್ದಾರೆ. ಇಲ್ಲಿ ಇವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 31ರಷ್ಟಿದೆ. ಎಸ್ ಸಿ ಮತ್ತು ಎಸ್ ಟಿ ಸಮುದಾಯದವರು ಶೇ. 32 ಇದ್ದು, ಮುಸ್ಲಿಂ ಜನಸಂಖ್ಯೆ ಶೇ.6ರಷ್ಟಿದೆ.
ಪೂರ್ವ ಮಿಡ್ನಾಪುರ ಜಿಲ್ಲೆಯ ಖೆಜುರಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣೆ ನಿರ್ಣಾಯಕ ಪಾತ್ರ ವಹಿಸಲಿದೆ. 2007 -08ರಲ್ಲಿ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಸರ್ಕಾರ ಕೆಮಿಕಲ್ ಹಬ್ ಮಾಡಲು ಭೂಸ್ವಾಧೀನ ಪಡಿಸಿದ್ದನ್ನು ಅಲ್ಲಿನ ಜನರು ವಿರೋಧಿಸಿದ್ದರು. ಭೂಸ್ವಾಧೀನ ವಿರುದ್ಧ ಖೆಜುರಿಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಅಂದಹಾಗೆ ಖೆಜುರಿ ನಂದಿಗ್ರಾಮದ ಗಡಿಭಾಗದಲ್ಲಿದ್ದು ನಂದಿಗ್ರಾಮದಲ್ಲಿ ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿದ್ದು, ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರವಾದ ಸುವೇಂದು ಅಧಿಕಾರಿ ಇಲ್ಲಿ ಮಮತಾ ವಿರುದ್ಧ ಕಣಕ್ಕಿಳಿದಿದ್ದಾರೆ.
ಖೆಚುರಿಯಲ್ಲಿ ಟಿಎಂಸಿ ಅಭ್ಯರ್ಥಿ ಪಾರ್ಥ ಪ್ರತಿಮ್ ದಾಸ್ (50), ಬಿಜೆಪಿಯ ಪ್ರಾಮಾಣಿಕ್ (36) ಎಡಪಕ್ಷದ ಹಿಂಮಾಂಗ್ಶು ದಾಸ್ (60) ಸ್ಪರ್ಧಿಸುತ್ತಿದ್ದಾರೆ. 2016ರ ವಿಧಾನಸಭೆ ಚುನಾವಣೆಯಲ್ಲಿ ಖೆಜುರಿ ಚುನಾವಣಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿ ರಣಜಿತ್ ಮೊಂಡಾಲ್ ಶೇ 53ರಷ್ಟು ಮತಗಳನ್ನು ಗಳಿಸಿ ಗೆದ್ದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 5,553 ಮತಗಳ ಮುನ್ನಡೆ ಸಾಧಿಸಿತ್ತು.
ಕಾಂಥಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ ಖೆಜುರಿ ವಿಧಾನಸಭಾ ಕ್ಷೇತ್ರ . ಇಲ್ಲಿ ಟಿಎಂಸಿ ಟಿಕೆಟ್ನಿಂದ ಸ್ಪರ್ಧಿಸಿ ಸಿಸಿರ್ ಅಧಿಕಾರಿ ಗೆದ್ದಿದ್ದರು. ಸುವೇಂದು ಅಧಿಕಾರಿಯ ಅಪ್ಪ ಸಿಸಿರ್ ಅಧಿಕಾರಿ ಇತ್ತೀಚೆಗೆ ಟಿಎಂಸಿಯಿಂದ ಬಿಜೆಪಿ ಸೇರಿದ್ದರು. ಹಾಗಾಗಿ ಖೆಜುರಿ ಚುನಾವಣಾ ಕ್ಷೇತ್ರ ಮಮತಾ ಬ್ಯಾನರ್ಜಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಖೆಜುರಿ ಚುನಾವಣಾ ಕ್ಷೇತ್ರದಲ್ಲಿ ಶೇಕಡಾ 33.6 ಎಸ್ ಸಿ ಸಮುದಾಯ, ಶೇಕಡಾ 4ರಷ್ಟು ಎಸ್ ಟಿ ಸಮುದಾಯದವರಿದ್ದಾರೆ. ಮುಸ್ಲಿಮರ ಸಂಖ್ಯೆ ಶೇ.6.9ರಷ್ಟಿದೆ.
ಇದನ್ನೂ ಓದಿ: ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ