Target Success: ಆಪರೇಷನ್ ಸಿಂದೂರ್ನಿಂದ ಮೂರೂ ಗುರಿ ಈಡೇರಿಕೆ: ಭಾರತ ಹೇಳಿಕೆ
Operation Sindoor and govt objectives: ಆಪರೇಷನ್ ಸಿಂದೂರ ಹಾಗೂ ನಂತರದ ಘರ್ಷಣೆಯಲ್ಲಿ ದೇಶದ ಮೂರು ಗುರಿಗಳು, ಉದ್ದೇಶಗಳು ಈಡೇರಿವೆ ಎಂದು ಸರ್ಕಾರ ಹೇಳಿದೆ. ಉಗ್ರರ ಶಿಬಿರ ನೆಲಸಮ ಮಾಡುವುದು, ಪಾಕಿಸ್ತಾನದ ಹೃದಯಭಾಗದೊಳಗೆ ನುಗ್ಗಿ ಹೊಡೆಯುವುದು ಮತ್ತು ರಾಜಕೀಯವಾಗಿ ಕಟ್ಟಿ ಹಾಕುವುದು, ಈ ಉದ್ದೇಶಗಳು ನೆರವೇರಿವೆ ಎಂದೆನ್ನಲಾಗಿದೆ.

ನವದೆಹಲಿ, ಮೇ 11: ಆಪರೇಷನ್ ಸಿಂದೂರ ಕಾರ್ಯಾಚರಣೆ, ಹಾಗೂ ನಂತರದ ಸಂಘರ್ಷದಲ್ಲಿ ಭಾರತಕ್ಕೆ ಎಲ್ಲಾ ಮೂರು ಉದ್ದೇಶಗಳು (objectives) ನೆರವೇರಿವೆ ಎಂದು ಸರ್ಕಾರ ಹೇಳಿದೆ. ಮಿಲಿಟರಿ ಗುರಿ, ರಾಜಕೀಯ ಗುರಿ ಮತ್ತು ಮಾನಸಿಕ ಗುರಿಗಳನ್ನು (Psychological objective) ಮುಟ್ಟಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆಪರೇಷನ್ ಸಿಂದೂರ (Operation Sindoor) ಬಳಿಕ ಪಾಕಿಸ್ತಾನ ನಡೆಸಿದ ಪ್ರತಿದಾಳಿ ಹಾಗೂ ನಂತರದ ಸಂಘರ್ಷದಲ್ಲಿ ಭಾರತ ಸ್ಪಷ್ಟ ಮೇಲುಗೈ ಪಡೆದು, ಪಾಕಿಸ್ತಾನವು ಕದನ ವಿರಾಮಕ್ಕಾಗಿ ಅಮೆರಿಕದ ನೆರವು ಯಾಚಿಸಬೇಕಾದ ಸ್ಥಿತಿ ಬಂದಿತು ಎನ್ನಲಾಗಿದೆ.
ಭಾರತಕ್ಕೆ ಈಡೇರಿದ ಮೂರು ಉದ್ದೇಶಗಳು ಯಾವುವು?
- ಮಿಲಿಟರಿ ಗುರಿ: ಪ್ರಧಾನಿ ನರೇಂದ್ರ ಮೋದಿ ಅವರು ಮಿಟ್ಟಿ ಮೇ ಮಿಲಾ ದೇಂಗೆ ಎಂದಿದ್ದರು. ಅಂದರೆ, ಉಗ್ರರ ನೆಲೆಗಳನ್ನು ನೆಲಸಮ ಮಾಡುತ್ತೇವೆ ಎಂದಿದ್ದರು. ಅದರಂತೆ, ಬಹವಾಲಪುರ್, ಮುರಿಡ್ಕೆ ಮತ್ತು ಮುಜಾಫರಾಬಾದ್ನಲ್ಲಿರುವ ಉಗ್ರರ ಶಿಬಿರಗಳನ್ನು ನೆಲಸಮ ಮಾಡಲಾಗಿದೆ.
- ರಾಜಕೀಯ ಗುರಿ: ಸಿಂಧೂ ಜಲ ಒಪ್ಪಂದವನ್ನು ಭಾರತ ಹಿಂಪಡೆದಿದೆ. ಇದರಿಂದ ಪಾಕಿಸ್ತಾನಕ್ಕೆ ಭಾರತವು ಸಿಂಧೂ ನದಿ ನೀರು ಬಿಡುಗಡೆ ತಡೆದಿದೆ. ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರೆಗೂ ಇದು ಹೀಗೇ ಮುಂದುವರಿಯಲಿದೆ.
- ಮಾನಸಿಕ ಗುರಿ: ಅವರ ಹೃದಯ ಭಾಗಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿಗಳು ಹೇಳಿದ್ದರು. ಅದರಂತೆ, ನುಗ್ಗಿ ಹೊಡೆಯಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ: ಪಾಕ್ನ ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?
ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ ಭಾರತವು ಏರ್ಸ್ಟ್ರೈಕ್ ನಡೆಸಿತ್ತು. ಆಗ ಬಾಲಾಕೋಟ್ನಲ್ಲಿರುವ ಜೇಷೆ ಉಗ್ರ ಶಿಬಿರವನ್ನು ಮಾತ್ರ ಗುರಿ ಮಾಡಲಾಗಿತ್ತು. ಈಗ ಪಹಲ್ಗಾಂ ಉಗ್ರ ದಾಳಿಯಲ್ಲಿ 26 ಮಂದಿ ಅಯಾಯಕರನ್ನು ಉಗ್ರರು ಬಲಿಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಆಪರೇಷನ್ ಸಿಂದೂರ ನಡೆಸಿತು. ಪಾಕಿಸ್ತಾನದ 9 ಸ್ಥಳಗಳಲ್ಲಿರುವ ಉಗ್ರರ ಶಿಬಿರಗಳನ್ನು 24 ಕ್ಷಿಪಣಿಗಳು ಧ್ವಂಸ ಮಾಡಿದವು. ಭಯೋತ್ಪಾದಕರ ಅಡುದಾಣ, ತರಬೇತಿ ಸ್ಥಳಗಳು ಇದರಲ್ಲಿ ಒಳಗೊಂಡಿದ್ದುವು.
ಹೊಡೆದರೆ ಸರಿಯಾಗಿ ಹೊಡೆಯುತ್ತೇವೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಾಗಿದೆ…
ಬಹವಾಲಪುರ್ ಮತ್ತು ಮುರಿಡ್ಕೆಯಲ್ಲಿರುವ ಉಗ್ರರ ಶಿಬಿರಗಳು ಐಎಸ್ಐ ಜೊತೆ ನಿಕಟವಾಗಿವೆ. ಅವರನ್ನು ನೆಲಕ್ಕುರುಳಿಸುವ ಮೂಲಕ ನಾವು ಸಣ್ಣ ಕ್ಯಾಂಪಲ್ಲ, ಹೊಡೆದರೆ ಹೆಡ್ಕ್ವಾರ್ಟರ್ಸನ್ನೇ ಹೊಡೆಯುತ್ತೇವೆ ಎಂಬುದನ್ನು ತೋರಿಸಿದ್ದೇವೆ ಎಂದು ಸರ್ಕಾರದ ಮೂಲಗಳು ಹೇಳಿದ್ದು, ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ. ಅವರು ದಾಳಿ ಮಾಡಿದರೆ ನಾವೂ ದಾಳಿ ಮಾಡುತ್ತೇವೆ ಎನ್ನುವ ಗಟ್ಟಿ ನಿಲುವನ್ನು ಸರ್ಕಾರ ತೆಗೆದುಕೊಂಡಿದೆ ಎಂದಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








