ಪಾಕಿಸ್ತಾನದ ಬಳಿ ಪ್ರಬಲ ಡಿಫೆನ್ಸ್ ಸಿಸ್ಟಂ ಇದ್ದರೂ ವಿಫಲವಾಗಿದ್ದು ಹೇಗೆ? ಭಾರತದ ತಂತ್ರ, ಜಾಣ್ಮೆ ಬಿಚ್ಚಿಟ್ಟ ಜಾನ್ ಸ್ಪೆನ್ಸರ್
Air Defense in the Modern Era: No Silver Bullets, Only Layers, says John Spencer: ಆಪರೇಷನ್ ಸಿಂದೂರ ಹಾಗೂ ನಂತರದ ಚಕಮಕಿಯಲ್ಲಿ ಭಾರತವು ಪಾಕಿಸ್ತಾನವನ್ನು ಸಮರದ ಎಲ್ಲಾ ತಂತ್ರಗಳಲ್ಲಿ ಲೀಲಾಜಾಲವಾಗಿ ಹಿಂದಿಕ್ಕಿದೆ. ಪಾಕಿಸ್ತಾನದ ಬಳಿಕ ಮೇಲ್ನೋಟಕ್ಕೆ ಬಹಳ ಬಲಿಷ್ಠವಾಗಿರುವ ಚೀನೀ ನಿರ್ಮಿತ ಡಿಫೆನ್ಸ್ ಸಿಸ್ಟಂ ಇದ್ದರೂ ಭಾರತ ಸುಲಭವಾಗಿ ಅದನ್ನು ಭೇದಿಸಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಈ ಕ್ಷೇತ್ರದ ತಜ್ಞ ಜಾನ್ ಸ್ಪೆನ್ಸರ್ ತಮ್ಮ ಬ್ಲಾಗ್ನಲ್ಲಿ ಬಿಚ್ಚಿಟ್ಟಿದ್ದಾರೆ.

ನವದೆಹಲಿ, ಮೇ 11: ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಬಾರಿಯ ಸಂಘರ್ಷವು (India Pakistan war) ಅನೇಕ ಕುತೂಹಲ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಾಕಿಸ್ತಾನದ ಸಾಲು ಸಾಲು ಡ್ರೋನ್ ಮತ್ತು ಕ್ಷಿಪಣಿಗಳು ಭಾರತದ ರಕ್ಷಣಾ ಜಾಲವನ್ನು ಭೇದಿಸಲು ಹೇಗೆ ವಿಫಲವಾದುವು ಎಂಬುದು ವೇದ್ಯವಾಗಿದೆ. ಹಾಗೆಯೇ, ಭಾರತವು ಆಪರೇಷನ್ ಸಿಂದೂರ ಮೂಲಕ 24 ಕ್ಷಿಪಣಿಗಳನ್ನು ಪಾಕಿಸ್ತಾನದೊಳಗೆ ನುಗ್ಗಿಸಿ ನಿಖರವಾಗಿ ಉಗ್ರರ ತಾಣಗಳನ್ನು ನಾಶ ಮಾಡಿದ ಘಟನೆಯೂ ಭಾರತದ ತಂತ್ರಜ್ಞಾನ ಸಾಮರ್ಥ್ಯವನ್ನು ತೋರಿಸಿದೆ. ಡಿಫೆನ್ಸ್ ಕ್ಷೇತ್ರದ ತಜ್ಞರಾದ ಜಾನ್ ಸ್ಪೆನ್ಸರ್ ಪ್ರಕಾರ, ಭಾರತವು ಈ ಯುದ್ಧ ಸಾಮರ್ಥ್ಯ ಹೊಂದಿರುವುದು ಯಾವುದೋ ದೊಡ್ಡ ಖರೀದಿಯಿಂದಲ್ಲ, ಬದಲಾಗಿ, ಇರುವ ಸಂಪನ್ಮೂಲವನ್ನು ಜಾಣತನದಿಂದ ಸಂಯೋಜಿಸಿದ ಫಲವಾಗಿ ಸಮರದಲ್ಲಿ ಬಲಿಷ್ಠತೆಯನ್ನು ತೋರಿಸಲು ಶಕ್ಯವಾಗಿದೆ.
ಹೊಸ ಏರ್ ಡಿಫೆನ್ಸ್ ವ್ಯವಸ್ಥೆ ಹೇಗೆ ಬೆಳವಣಿಗೆ ಹೊಂದುತ್ತಿದೆ, ಹೇಗೆ ಅದನ್ನು ಅಭಿವೃದ್ಧಿಪಡಿಸಬಹುದು, ಹೇಗೆ ಅದನ್ನು ಕರಾರುವಾಕ್ ಫಲಿತಾಂಶಕ್ಕೆ ಎಡೆ ಮಾಡಿಕೊಡುವಂತೆ ರೂಪಿಸಬಹುದು ಎಂಬುದನ್ನು ಭಾರತವು ಈ ಯುದ್ಧದಲ್ಲಿ ತೋರಿಸಿದೆ ಎಂದು ಹೇಳುತ್ತಾರೆ ಸ್ಪೆನ್ಸರ್.
ಇದನ್ನೂ ಓದಿ: ಕದನವಿರಾಮ ಪ್ರಸಂಗ: ಬೇರೆಯೇ ಕಥೆ ಹೇಳುತ್ತವೆ ಭಾರತ ಮತ್ತು ಪಾಕಿಸ್ತಾನ ನಾಯಕರ ಹೇಳಿಕೆಗಳು
ಭಾರತದ ರಕ್ಷಣಾ ವ್ಯವಸ್ಥೆ ಹೇಗಿದೆ?
ಭಾರತದ ಬಳಿ ಇಸ್ರೇಲ್ನ ಬರಾಕ್-8 ಸಿಸ್ಟಮ್ಸ್ ಮತ್ತು ರಷ್ಯಾ ನಿರ್ಮಿತ ಎಸ್-400 ಸಿಸ್ಟಮ್ಸ್ ಇದೆ. ಇದರ ಜೊತೆಗೆ ದೇಶೀಯವಾಗಿ ಅಭಿವೃದ್ದಿಪಡಿಸಲಾದ ಆಕಾಶ್ ಮತ್ತು ಕ್ಯೂಆರ್ಎಸ್ಎಎಂ ಸಿಸ್ಟಂಗಳನ್ನು ಸಂಯೋಜಿಸಲಾಗಿದೆ. ಇವೆಲ್ಲವೂ ಪ್ರತ್ಯೇಕವಾಗಿ ನೋಡಿದಾಗ ಭಿನ್ನ ಭಿನ್ನ ಎನಿಸುತ್ತವೆ. ಇವುಗಳನ್ನು ಪರಿಸ್ಪರ ಪೂರಕವಾಗಿ ವರ್ತಿಸುವ ರೀತಿಯಲ್ಲಿ ದೂರ ಶ್ರೇಣಿ, ಮಧ್ಯಮ ಶ್ರೇಣಿ ಮತ್ತು ಕಿರು ಶ್ರೇಣಿ ಎಳೆಗಳಾಗಿ ಭಾರತವು ರೂಪಿಸಿದೆ ಎಂದು ಜಾನ್ ಸ್ಪೆನ್ಸರ್ ತಮ್ಮ ಬ್ಲಾಗ್ನಲ್ಲಿ ವಿವರಿಸಿದ್ದಾರೆ.
“Air Defense in the Modern Era: No Silver Bullets, Only Layers ”
In recent weeks, India has demonstrated the evolving nature of modern air defense—not only in defending its own airspace with a robust, layered architecture, but also in successfully penetrating the Chinese-made… pic.twitter.com/VJlkLqwdIp
— John Spencer (@SpencerGuard) May 11, 2025
ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಬಲಿಷ್ಠ ಎನಿಸಿದರೂ ವಿಫಲವಾಗಿದ್ದು ಯಾಕೆ?
ಪಾಕಿಸ್ತಾನದ ಬಳಿ ಚೀನೀ ನಿರ್ಮಿತ ಎಚ್ಕ್ಯು-9/ಪಿ, ಎಲ್ವೈ-80 ಮತ್ತು ಎಫ್ಎಂ-90 ಇತ್ಯಾದಿ ಡಿಫೆನ್ಸ್ ಸಿಸ್ಟಮ್ಸ್ ಇದೆ. ಮೇಲ್ನೋಟಕ್ಕೆ ಇವೇನೂ ಸಾಧಾರಣ ಅಲ್ಲ. ರಷ್ಯಾದ ಎಸ್-300 ಡಿಫೆನ್ಸ್ ಸಿಸ್ಟಂ ರೀತಿಯಲ್ಲೇ ಎಚ್ಕ್ಯು-9/ಪಿ ಸಿಸ್ಟಂ ಅನ್ನು ಚೀನಾ ನಿರ್ಮಿಸಿದೆ. ಇದು ಅತ್ಯಾಧುನಿಕ ಡಿಫೆನ್ಸ್ ಸಿಸ್ಟಂಗಳಲ್ಲಿ ಒಂದೆನಿಸುತ್ತದೆ. ಆದರೆ, ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಪೂರ್ಣ ವಿಫಲವಾಯಿತು. ಈ ಅಂಶವನ್ನು ಜಾನ್ ಸ್ಪೆನ್ಸರ್ ಎತ್ತಿಹೇಳಿದ್ದಾರೆ. ಎಲೆಕ್ಟ್ರಾನಿಕ್ ವಾರ್ಫೇರ್, ಕೈನೆಟಿಕ್ ಸ್ಟ್ರೈಕ್ಸ್ ಇತ್ಯಾದಿಯ ಸಂಯೋಜನೆಯಿಂದ ಡಿಫೆನ್ಸ್ ಸಿಸ್ಟಂ ಅನ್ನು ಭೇದಿಸಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ ಎಂದೆನ್ನುತ್ತಾರೆ ಸ್ಪೆನ್ಸರ್.
ಇದನ್ನೂ ಓದಿ: 1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್
ಉಕ್ರೇನ್ನಿಂದಲೂ ಯುದ್ಧ ತಂತ್ರಜ್ಞಾನದ ಜಾಣತನದ ಬಳಕೆ
ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಸಂಯೋಜನೆಯಿಂದ ನಿಖರ ಪರಿಣಾಮ ಸಾಧಿಸಬಹುದು ಎನ್ನುವುದಕ್ಕೆ ಜಾನ್ ಸ್ಪೆನ್ಸರ್ ಅವರು ಉಕ್ರೇನ್ ಉದಾಹರಣೆಯನ್ನೂ ನೀಡಿದ್ದಾರೆ. ಆರು ಲಕ್ಷ ಚದರ ಕಿಮೀಯಷ್ಟು ಬೃಹತ್ ಬಹಿರಂಗ ಪ್ರದೇಶ ಮತ್ತು ನಗರ ಸೌಕರ್ಯ ಹೊಂದಿರುವ ಉಕ್ರೇನ್ನಲ್ಲಿ ಅತ್ಯಾಧುನಿಕವಾದ ಆದರೆ, ಕಡಿಮೆ ಸಂಖ್ಯೆಯ ಸಿಸ್ಟಂಗಳನ್ನು ನೆಚ್ಚಿಕೊಂಡು ಇರರಲು ಆಗುವುದಿಲ್ಲ. ತನ್ನಲ್ಲಿ ಲಭ್ಯ ಇರುವ ಪ್ರತಿಯೊಂದನ್ನೂ ಅದು ಸರಿಯಾಗಿ ಬಳಸಬೇಕು. ಅಮೆರಿಕದ ಎಸ್ಎಎಂಗಳು, ಸೋವಿಯತ್ ಕಾಲದ ಬುಕ್, ಎಸ್-300 ಯುನಿಟ್ಗಳು, ಜರ್ಮನ್ ನಿರ್ಮಿತ ಆಂಟಿ ಏರ್ಕ್ರಾಫ್ಟ್ ಗನ್, ಐರಿಸ್ ಟಿ ಬ್ಯಾಟರಿ, ಮ್ಯಾನ್ಪ್ಯಾಡ್ ಡಿಫೆನ್ಸ್ ಸಿಸ್ಟಂ ಹೀಗೆ ಸಾಕಷ್ಟು ಯುದ್ಧೋಪಕರಣಗಳು ಉಕ್ರೇನ್ನಲ್ಲಿವೆ. ಇವುಗಳನ್ನು ಉಕ್ರೇನ್ ಒಂದಕ್ಕೊಂದು ಪೂರಕವಾಗುವ ರೀತಿಯಲ್ಲಿ ವ್ಯವಸ್ಥೆ ರೂಪಿಸಿದ ಪರಿಣಾಮವಾಗಿ ರಷ್ಯಾವನ್ನು ಸುದೀರ್ಘ ಕಾಲ ಎದುರಿಸಲು ಸಾಧ್ಯವಾಗಿದೆ ಎನ್ನುವ ವಿಚಾರವನ್ನು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Sun, 11 May 25








