ಪಾಕ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಭಾರತಕ್ಕೆ ಸಿಕ್ತು ಬ್ರಹ್ಮಾಸ್ತ್ರ, ಏನಿದು ಬ್ರಹ್ಮೋಸ್, ಇದರ ಸಾಮಾರ್ಥ್ಯವೇನು?
Brahmos missile: ಭಾರತ ಹಾಗೂ ಪಾಕಿಸ್ತಾನ ನಡುವಿನ ಐದು ದಿನಗಳ ಸಂಘರ್ಷಕ್ಕೆ ಕದನವಿರಾಮ ಅಂತ್ಯ ಹಾಡಿದೆ. ಇಷ್ಟಾದರೂ, ಭಾರತ-ಪಾಕಿಸ್ತಾನ ಗಡಿಯಲ್ಲಿ ಆತಂಕದ ವಾತಾವರಣ ಮುಂದುವರಿದಿದೆ. ಆದಾಗ್ಯೂ, ಭಾರತವು ಗಡಿಯಲ್ಲಿ ಪ್ರತಿದಾಳಿಗೆ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಇದರ ಬೆನ್ನಲ್ಲೇ, ಲಖನೌನಲ್ಲಿ ರಕ್ಷಣಾ ಸಚಿವರ ರಾಜನಾಥ್ ಸಿಂಗ್ ಅವರು ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಕಾರ್ಖಾನೆಗೆ ಭಾನುವಾರ ಚಾಲನೆ ನೀಡಿದೆ. ಇದು ಭಾರತದ ಸೇನೆಗೆ ಆನೆಬಲ ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗಾದ್ರೆ, ಈ ಬ್ರಹ್ಮೋಸ್ ಎಂದರೇನು? ಇದರ ಸಾಮಾರ್ಥ್ಯವೇನು? ಎನ್ನುವ ಮಾಹಿತಿ ಇಲ್ಲಿದೆ.

ನವದೆಹಲಿ, (ಮೇ 11): ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ (India Pakistan Ceasefire) ತಾರಕ್ಕೇರಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಶುಕ್ರವಾರ ಕದನ ವಿರಾಮ ಘೋಷಿಸಲಾಗಿತ್ತು. ಆದ್ರೆ, ಪಾಕಿಸ್ತಾನ ಮತ್ತೆ ಭಾರದತ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದ್ದು, ಪಾಕ್ ದಾಳಿಗೆ ಭಾರತ ಸೇನಾಪಡೆ ಸಹ ತಕ್ಕ ತಿರುಗೇಟು ನೀಡಿದೆ. ಹೀಗಾಗಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯ ಬ್ರಹ್ಮೋಸ್ ಕ್ಷಿಪಣಿ (Brahmos missile) ತಯಾರಿಕಾ ಕಾರ್ಖಾನೆಗೆ (Brahoms Unit) ಇಂದು (ಮೇ 11) ಚಾಲನೆ ನೀಡಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh )ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದು, ಅತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬ್ರಹ್ಮೋಸ್ ಕ್ಷಿಪಣಿ ಮುಂದೆ ನಿಂತಿರುವ ಫೋಟೋ ಸಿಕ್ಕಾಪಟೆ ವೈರಲ್ ಆಗಿದ್ದು, ಈ ಫೋಟೋ ನಾನಾ ಅರ್ಥವನ್ನು ನೀಡುವಂತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯನ್ನು ಘೋಷಣೆ ಮಾಡಿದ್ದರು. ದೇಶೀಯವಾಗಿಯೇ ಕ್ಷಿಪಣಿಗಳನ್ನು ತಯಾರಿಸುವ ದಿಸೆಯಲ್ಲಿ ಮಹತ್ವದ ಘೊಷಣೆ ಮಾಡಿದ್ದರು. ಅದರಂತೆ, ಲಖನೌನಲ್ಲಿ ಕ್ಷಿಪಣಿ ತಯಾರಿಕಾ ಫ್ಯಾಕ್ಟರಿಗೆ 2021ರಲ್ಲಿ ಚಾಲನೆ ನೀಡಲಾಗಿತ್ತು. ಈಗ ಕಾರ್ಖಾನೆಯನ್ನು ರಕ್ಷಣಾ ಸಚಿವರು ಉದ್ಘಾಟನೆ ಮಾಡಿದ್ದಾರೆ. ಇದರೊಂದಿಗೆ ಇದು ಭಾರತದ ಸೇನೆಗೆ ಆನೆಬಲ ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಬಗ್ಗೆ ಸಂದೇಹವಿದ್ದರೆ ಪಾಕಿಸ್ತಾನವನ್ನೇ ಕೇಳಿ ಎಂದ ಯೋಗಿ
ಕಾರ್ಖಾನೆ ಏಕೆ ಮಹತ್ವ?
ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಕಾರ್ಖಾನೆಯನ್ನು ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ 1,600 ಹೆಕ್ಟೇರ್ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದು, ರಕ್ಷಣಾ ಕಾರಿಡಾರ್ ಗೆ ಹಂಚಿಕೆ ಮಾಡಿದೆ. ಈ ಬ್ರಹ್ಮೋಸ್ ಕಾರ್ಖಾನೆಯಲ್ಲಿ ಪ್ರತಿ ವರ್ಷ 80-100 ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಬ್ರಹ್ಮೋಸ್ ಕ್ಷಿಪಣಿಗಳು ಖಂಡಾತರ ಕ್ಷಿಪಣಿಗಳಾಗಿದ್ದು, ವೈರಿಗಳ ಯಾವುದೇ ದಾಳಿಗಳನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿವೆ. ಇವು ಡ್ರೋನ್ ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದ್ದು, ಕಳೆದ ಐದು ದಿನಗಳಿಂದ ನಡೆದ ಪಾಕಿಸ್ತಾನ ವಿರುದ್ಧದ ಸಂಘರ್ಷದಲ್ಲಿ ಇವುಗಳನ್ನು ಬಳಸಲಾಗಿತ್ತು. ಇವು ಭೂಮಿ ಹಾಗೂ ಸಾಗರ ಪ್ರದೇಶದಿಂದ 800-900 ಕಿ.ಮೀ ದೂರದವರೆಗೆ ಹಾರಾಟ ನಡೆಸುತ್ತವೆ. ಆಗಸದಿಂದಲೂ ಇವುಗಳನ್ನು ಉಡಾಯಿಸಬಹುದಾಗಿದ್ದು, 450-500 ಕಿ.ಮೀ ದೂರದವರೆಗೆ ಚಲಿಸುತ್ತವೆ. ಇವು ಖಂಡಾಂತರ ಕ್ಷಿಪಣಿಗಳಾಗಿವೆ. ಹಾಗಾಗಿ, ಲಖನೌ ಕ್ಷಿಪಣಿ ತಯಾರಿಕಾ ಘಟಕವು ಭಾರತೀಯ ಸೇನೆಗೆ ಬಲ ತಂದಿದೆ.
ಮೊದಲ ಬಾರಿಗೆ ಬ್ರಹ್ಮೋಸ್ ಪ್ರಯೋಗಿಸಿದ ಭಾರತ
ಭಾರತದ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಆರಂಭದಲ್ಲಿ ಡ್ರೋನ್, ಸಣ್ಣ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸುತ್ತಿತ್ತು. ಆದರೆ ಮೇ 9, 10 ರ ರಾತ್ರಿ ದೆಹಲಿಯನ್ನು ಗುರಿಯಾಗಿಸಿ ಪಾಕ್ ಫತಾಹ್-II ಕ್ಷಿಪಣಿಯನ್ನು ಪಾಕ್ ಪ್ರಯೋಗಿಸಿತ್ತು. ಪಾಕ್ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದ ಬೆನ್ನಲ್ಲೇ ಭಾರತ ಮೇ 10ರ ಮುಂಜಾನೆ ಮೊದಲ ಬಾರಿಗೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಹಾರಿಸಿತ್ತು. ಇನ್ನೊಂದು ದೇಶದ ಮಧ್ಯೆ ಕಾದಾಟ ನಡೆಸುತ್ತಿದ್ದಾಗ ಭಾರತ ಬ್ರಹ್ಮೋಸ್ ಕ್ಷಿಪಣಿಯನ್ನು ಹಾರಿಸಿದ್ದು ಇದೇ ಮೊದಲು.
ಬ್ರಹ್ಮೋಸ್ ಕ್ಷಿಪಣಿ ಎಂದರೇನು?
ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPO ಮಶಿನೋಸ್ಟ್ರೋಯೆನಿಯಾ ನಡುವಿನ ಜಂಟಿ ಉದ್ಯಮದ ಮೂಲಕ ಅಭಿವೃದ್ಧಿಪಡಿಸಲಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. ‘ಬ್ರಹ್ಮೋಸ್’ ಎಂಬ ಹೆಸರು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಸಂಯೋಜಿತ ರೂಪವಾಗಿದ್ದು, ಈ ಪಾಲುದಾರಿಕೆಯನ್ನು ಸಂಕೇತಿಸುತ್ತದೆ.
ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿ ಏನು?
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (MTCR) ಕ್ಕೆ ಅನುಗುಣವಾಗಿ ಆರಂಭದಲ್ಲಿ 290 ಕಿ.ಮೀ.ಗೆ ಸೀಮಿತಗೊಳಿಸಲಾಗಿತ್ತು, ಆದರೆ ಭಾರತ 2016 ರಲ್ಲಿ MTCR ಗೆ ಸೇರಿದ ನಂತರ ಭೂಮಿ ಮತ್ತು ಹಡಗು ಆಧಾರಿತ ಆವೃತ್ತಿಗಳಿಗೆ ಬ್ರಹ್ಮೋಸ್‌ನ ವ್ಯಾಪ್ತಿಯನ್ನು 800-900 ಕಿ.ಮೀ.ಗೆ ವಿಸ್ತರಿಸಲಾಗಿದೆ. ವಾಯು-ಉಡಾವಣಾ ಆವೃತ್ತಿಗಳು 450-500 ಕಿ.ಮೀ. ವ್ಯಾಪ್ತಿಯನ್ನು ಹೊಂದಿವೆ.
ಬ್ರಹ್ಮೋಸ್ ಸಾಮರ್ಥ್ಯ!
ಬ್ರಹ್ಮೋಸ್ ಒಂದು ಬಹುಮುಖ ಕ್ಷಿಪಣಿಯಾಗಿದ್ದು, ಇದು ಭೂಮಿ, ಸಮುದ್ರ ಮತ್ತು ವಾಯು-ಆಧಾರಿತ ಗುರಿಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಭೂ-ಆಧಾರಿತ ಟ್ರಾನ್ಸ್‌ಪೋರ್ಟರ್ ಎರೆಕ್ಟರ್ ಲಾಂಚರ್‌ಗಳು (TEL), ಹಡಗುಗಳು (ಲಂಬ ಮತ್ತು ಇಳಿಜಾರಾದ ಲಾಂಚರ್‌ಗಳು ಎರಡೂ), ಜಲಾಂತರ್ಗಾಮಿ ನೌಕೆಗಳು (ಮುಳುಗಿದ ಉಡಾವಣೆ) ಮತ್ತು ಯುದ್ಧ ವಿಮಾನಗಳಿಂದ (Su-30MKI ನಂತಹ) ಉಡಾಯಿಸಬಹುದು.
ಭಾರತ-ರಷ್ಯಾ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಅಭಿವೃದ್ಧಿ
ಬ್ರಹ್ಮೋಸ್ ಏರೋಸ್ಪೇಸ್ ಅನ್ನು ಫೆಬ್ರವರಿ 12, 1998 ರಂದು ಸ್ಥಾಪಿಸಲಾಯಿತು, ಇದರಲ್ಲಿ ಭಾರತವು 50.5% ಪಾಲನ್ನು ಹೊಂದಿದೆ ಮತ್ತು ರಷ್ಯಾ 49.5% ಪಾಲನ್ನು ಹೊಂದಿದೆ. ‘ಬ್ರಹ್ಮೋಸ್’ ಎಂಬ ಹೆಸರು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಸಂಯೋಜಿತ ರೂಪವಾಗಿದ್ದು, ಈ ಪಾಲುದಾರಿಕೆಯ ಸಂಕೇತವಾಗಿದೆ.
Published On - 3:38 pm, Sun, 11 May 25








