ಫ್ಲಾಪ್ ಕೊಟ್ಟ ನಿರ್ದೇಶಕನಿಗೆ ಕಾರ್ ಉಡುಗೊರೆ ಕೊಟ್ಟ ನಟ ಕಾರ್ತಿ-ಸೂರ್ಯ
Karthi and Suriya: ಹಿಟ್ ಸಿನಿಮಾ ನೀಡಿದ ನಿರ್ದೇಶಕರುಗಳು ಭಾರು ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚಾಗಿದೆ. ಹಲವು ತಮಿಳು ನಿರ್ದೇಶಕರು ಇತ್ತೀಚೆಗೆ ಕಾರುಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆದರೆ ಫ್ಲಾಪ್ ಸಿನಿಮಾ ನೀಡಿದ ನಿರ್ದೇಶಕನಿಗೆ ನಟರಾದ ಕಾರ್ತಿ ಮತ್ತು ಸೂರ್ಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕರುಗಳಿಗೆ ಕಾರು ಉಡುಗೊರೆ ಕೊಡುವ ಟ್ರೆಂಡ್ ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ (South Movie Industry) ನಡೆಯುತ್ತಿದೆ. ‘ಜೈಲರ್’ ಸಿನಿಮಾ ಹಿಟ್ ಆದಾಗ ಅದರ ನಿರ್ದೇಶಕ ನೆಲ್ಸನ್, ಸಂಗೀತ ನಿರ್ದೇಶಕ ಅನಿರುದ್ದ್, ನಟ ರಜನೀಕಾಂತ್ ಅವರಿಗೆ ದುಬಾರಿ ಕಾರು ಉಡುಗೊರೆ ನೀಡಿದ್ದರು ನಿರ್ಮಾಪಕರು, ಆ ನಂತರ ಉದಯನಿಧಿ ಸ್ಟಾಲಿನ್ ಸಹ ನಿರ್ದೇಶಕ ಮಾಮನ್ನನ್ ನಿರ್ದೇಶಕ ಮಾರಿ ಸೆಲ್ವರಾಜ್ಗೆ ಕಾರು ಕೊಟ್ಟಿದ್ದರು. ಇನ್ನೂ ಕೆಲವು ನಿರ್ದೇಶಕರು ಉಡುಗೊರೆಯಾಗಿ ಕಾರು ಪಡೆದಿದ್ದಾರೆ. ಇದೀಗ ಫ್ಲಾಪ್ ಕೊಟ್ಟ ನಿರ್ದೇಶಕನಿಗೆ ನಟ ಕಾರ್ತಿ ಹಾಗೂ ಅವರ ಸಹೋದರ ಸೂರ್ಯ ಉಡುಗೊರೆಯಾಗಿ ದುಬಾರಿ ಕಾರು ಉಡುಗೊರೆಯಾಗಿ ನೀಡಿದ್ದಾರೆ.
ನಟ ಕಾರ್ತಿ ಹಾಗೂ ಅರವಿಂದ ಸ್ವಾಮಿ ನಟಿಸಿದ್ದ ‘ಮೇಯಳಗನ್’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಅದ್ಭುತವಾಗಿತ್ತು ಆದರೆ ಚಿತ್ರಮಂದಿರದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಯಾವುದೇ ಆಕ್ಷನ್ ದೃಶ್ಯಗಳಿಲ್ಲದೆ, ಕೇವಲ ಸಂಭಾಷಣೆ, ಸನ್ನಿವೇಶ, ಸಂಗೀತವನ್ನಷ್ಟೆ ನೆಚ್ಚಿಕೊಂಡಿದ್ದ ಸಿನಿಮಾ ಪ್ರೇಕ್ಷಕರಿಗೆ ಭಾವುಕ ಅನುಭೂತಿ ನೀಡಿತ್ತು. ಬಹುತೇಕ ಒಳ್ಳೆಯ ಸಿನಿಮಾಗಳಂತೆ ಇದೂ ಸಹ ಚಿತ್ರಮಂದಿರದಲ್ಲಿ ಓಡಲಿಲ್ಲ, ಆದರೆ ಒಟಿಟಿಗೆ ಬಂದ ಮೇಲೆ ಜನ ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಗಂಟೆ-ಗಟ್ಟಲೆ ಪಾಡ್ಕಾಸ್ಟ್ಗಳಲ್ಲಿ ಈ ಸಿನಿಮಾ ಬಗ್ಗೆ ಮಾತನಾಡಲಾಗುತ್ತಿದೆ.
ಇದೀಗ ‘ಮೇಯಳಗನ್’ ಸಿನಿಮಾದ ನಿರ್ದೇಶಕ ಪ್ರೇಮ್ ಕುಮಾರ್ ಅವರಿಗೆ ನಟ ಕಾರ್ತಿ ಹಾಗೂ ಅವರ ಸಹೋದರ ನಟ ಸೂರ್ಯ ಸೇರಿಕೊಂಡು ಥಾರ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಥಾರ್ ಕಾರು ಅದರಲ್ಲೂ ಬಿಳಿಯ ಬಣ್ಣದ ಥಾರ್ ಕಾರು ಪ್ರೇಮ್ ಕುಮಾರ್ ಅವರ ಮೆಚ್ಚಿನ ಕಾರಾಗಿತ್ತಂತೆ. ಈ ಬಗ್ಗೆ ಸೂರ್ಯ ಅವರ ಹತ್ತಿರದವರ ಬಳಿ ಮಾತನಾಡಿದ್ದ ಪ್ರೇಮ್ ಕುಮಾರ್, ಬಿಳಿ ಬಣ್ಣದ ಥಾರ್ ಸಿಕ್ಕರೆ ಹೇಳಿ ನಾನು ಖರೀದಿಸುತ್ತೇನೆ ಎಂದಿದ್ದರು. ಅದರಂತೆ ಸೂರ್ಯ ಅವರಿಗೆ ಆಪ್ತರಾಗಿದ್ದ ಒಬ್ಬರು ಬಿಳಿ ಬಣ್ಣದ ಥಾರ್ ಕಾರು ಸಿಕ್ಕಿದೆ ಎಂದು ಹೇಳಿದಾಗ, ಇಲ್ಲ ಈಗ ನನ್ನ ಬಳಿ ಅಷ್ಟು ಬಜೆಟ್ ಇಲ್ಲ, ಮತ್ಯಾವಾಗಾದರೂ ಖರೀದಿಸುವೆ ಎಂದಿದ್ದರಂತೆ.
ಇದನ್ನೂ ಓದಿ:‘ರೆಟ್ರೋ’ ಸಿನಿಮಾದ ಲಾಭದಲ್ಲಿ 10 ಕೋಟಿ ರೂಪಾಯಿ ದಾನ ಮಾಡಿದ ನಟ ಸೂರ್ಯ
ಈ ವಿಷಯ ಸೂರ್ಯಗೆ ಗೊತ್ತಾಗಿದೆ. ಕೂಡಲೇ ಸೂರ್ಯ ಮತ್ತು ಕಾರ್ತಿ ಸೇರಿ ಆ ಬಿಳಿಯ ಬಣ್ಣದ ಥಾರ್ ಕಾರು ಖರೀದಿಸಿ ಆ ಕಾರನ್ನು ಪ್ರೇಮ್ ಕುಮಾರ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಂದಹಾಗೆ ಪ್ರೇಮ್, ಭಿನ್ನ ರೀತಿಯ ನಿರ್ದೇಶಕ, ಹೊಡಿ-ಬಡಿ ಸಿನಿಮಾಗಳಲ್ಲದೆ ತಣ್ಣನೆಯ ನೀರಿನಂತೆ ಹರಿಯುವ ಸಿನಿಮಾಗಳನ್ನು ಕಟ್ಟುವುದು ಅವರ ಶೈಲಿ. ಈ ಹಿಂದೆ ಅವರು ‘96’ ಸಿನಿಮಾ ಮಾಡಿದ್ದರು. ತ್ರಿಷಾ, ವಿಜಯ್ ಸೇತುಪತಿ ನಟಿಸಿದ್ದ ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಅದೇ ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್ ಸಹ ಮಾಡಿದರು. ಅದಾದ ಬಳಿಕ ‘ಮೇಯಳಗನ್’ ಸಿನಿಮಾ ಮಾಡಿದರು. ಈಗ ಅದೂ ಸಹ ಒಟಿಟಿ, ಟಿವಿಯಿಂದಾಗಿ ಜನರ ಮೆಚ್ಚುಗೆ ಗಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ