IPL 2025: ಐಪಿಎಲ್ ಫೈನಲ್ ಕೋಲ್ಕತ್ತಾದಿಂದ ಶಿಫ್ಟ್..! ಕಾರಣ ಯುದ್ಧದ ಭೀತಿಯಲ್ಲ
IPL 2025 Final Venue Change: ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದ್ದ ಐಪಿಎಲ್ 2025 ಪುನರಾರಂಭದ ಭರವಸೆ ಹೆಚ್ಚಾಗಿದೆ. ಆದರೆ, ಮೇ 25ಕ್ಕೆ ನಿಗದಿಯಾಗಿದ್ದ ಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ಮಳೆಯ ಸಾಧ್ಯತೆಯಿಂದಾಗಿ ಅಹಮದಾಬಾದ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಉಳಿದ ಪಂದ್ಯಗಳ ವೇಳಾಪಟ್ಟಿ ಇನ್ನೂ ಘೋಷಣೆಯಾಗಿಲ್ಲ. ವಿದೇಶಿ ಆಟಗಾರರ ಲಭ್ಯತೆಯೂ ಒಂದು ಪ್ರಮುಖ ಅಂಶವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ ಅರ್ಧಕ್ಕೆ ನಿಂತಿದ್ದ ಐಪಿಎಲ್ 2025 (IPL 2025) ರ ಪುನರಾರಂಭದ ಭರವಸೆ ಹೆಚ್ಚಿದೆ. ಉಳಿದ ಐಪಿಎಲ್ ಪಂದ್ಯಗಳ ಪುನರಾರಂಭದ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಈ ಸೀಸನ್ನ ಫೈನಲ್ ಪಂದ್ಯದ ಬಗ್ಗೆ ಮಾತ್ರ ಬಿಗ್ ಅಪ್ಡೇಟ್ ಹೊರಬಿದ್ದಿದೆ. ವಾಸ್ತವವಾಗಿ ಈ ಸೀಸನ್ನ ಫೈನಲ್ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Kolkata Eden Gardens) ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಈ ಪಂದ್ಯ ಮೇ 25 ರಂದು ಸಂಜೆ 7:30 ಕ್ಕೆ ಆರಂಭವಾಗಬೇಕಿತ್ತು. ಆದರೆ ಈಗ ಈ ಫೈನಲ್ ಪಂದ್ಯದ ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಇದು ಇನ್ನೂ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲವಾದರೂ, ಇದು ಸಂಭವಿಸಿದಲ್ಲಿ ಕೋಲ್ಕತ್ತಾದ ಕ್ರಿಕೆಟ್ ಪ್ರಿಯರಿಗೆ ತುಂಬಾ ನಿರಾಶೆಯಾಗಲಿದೆ.
ಮಳೆಯೇ ಪ್ರಮುಖ ಕಾರಣ
ಮೇಲೆ ಹೇಳಿದಂತೆ ಈ ಸೀಸನ್ನ ಫೈನಲ್ ಪಂದ್ಯವು ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ, ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಲಾಯಿತು. ಈಗ ಹೊಸ ವೇಳಾಪಟ್ಟಿ ಘೋಷಣೆಯ ನಂತರವೇ ಪಂದ್ಯಗಳು ಯಾವಾಗ ಪ್ರಾರಂಭವಾಗುತ್ತವೆ ಎಂದು ತಿಳಿಯುತ್ತದೆ. ಆದಗ್ಯೂ ಈ ಸೀಸನ್ನ ಫೈನಲ್ ಪಂದ್ಯವೂ ಮೇ 30 ರಂದು ನಡೆಯುವ ಸಾಧ್ಯತೆಗಳಿದ್ದು, ಅದೇ ದಿನ ಕೋಲ್ಕತ್ತಾದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಪಿಟಿಐ ವರದಿಯ ಪ್ರಕಾರ, ಮೇ 30 ರಂದು ಕೋಲ್ಕತ್ತಾದಲ್ಲಿ ಶೇ. 65 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಫೈನಲ್ ಪಂದ್ಯವನ್ನು ಕೋಲ್ಕತ್ತಾದ ಬದಲು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಬಹುದು ಎಂದು ಹೇಳಲಾಗುತ್ತಿದೆ.
IPL 2025: ಐಪಿಎಲ್ ಆರಂಭದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ; ರಾಜೀವ್ ಶುಕ್ಲಾ
ಒಂದು ವಾರ ಮುಂದೂಡಿಕೆ
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮೇ 9 ರಂದು ಪಂದ್ಯಾವಳಿಯನ್ನು ಒಂದು ವಾರ ಮುಂದೂಡುವುದಾಗಿ ಘೋಷಿಸಿತ್ತು. ಈ ಸೀಸನ್ನಲ್ಲಿ ಇದುವರೆಗೆ 57 ಪಂದ್ಯಗಳನ್ನು ಆಡಲಾಗಿದೆ. ಆದರೆ ಒಟ್ಟು 74 ಪಂದ್ಯಗಳು ನಡೆಯಬೇಕಿತ್ತು. ಇದರರ್ಥ ಇನ್ನೂ 17 ಪಂದ್ಯಗಳು ಉಳಿದಿದ್ದು, ಈ ಪಂದ್ಯಗಳನ್ನು ಪೂರ್ಣಗೊಳಿಸಲು ಕನಿಷ್ಠ ಎರಡು ವಾರ ಬೇಕಾಗಬಹುದು. ಬಿಸಿಸಿಐ ಈ ಲೀಗ್ ಅನ್ನು ಆದಷ್ಟು ಬೇಗ ಆಯೋಜಿಸುವ ಬಗ್ಗೆ ಯೋಚಿಸುತ್ತಿದೆ. ಇದಕ್ಕಾಗಿ ಸುರಕ್ಷಿತ ಸ್ಥಳವನ್ನು ಸಹ ಹುಡುಕುತ್ತಿದೆ. ಆದರೆ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ವಿದೇಶಿ ಆಟಗಾರರು ತವರಿಗೆ ಮರಳಿದ್ದು, ಅವರಲ್ಲಿ ಕೆಲವರು ಮತ್ತೆ ಭಾರತಕ್ಕೆ ಬರುವ ಬಗ್ಗೆ ಅನುಮಾನ ಮೂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Sun, 11 May 25
