ENG vs IND: ಕನ್ನಡಿಗ ಕರುಣ್ ನಾಯರ್ಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ
Karun Nair Returns: ಐಪಿಎಲ್ 2025 ರ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸಲ್ಲಿ ಕನ್ನಡಿಗ ಕರುಣ್ ನಾಯರ್ ಭಾರತ-ಎ ತಂಡಕ್ಕೆ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕರುಣ್, ಇಂಗ್ಲೆಂಡ್ ಲಯನ್ಸ್ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಅರ್ಧಕ್ಕೆ ನಿಂತಿರುವ 2025 ರ ಐಪಿಎಲ್ (IPL 2025) ಮತ್ತೆ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಈ ಪಂದ್ಯಾವಳಿಯನ್ನು ನಿಲ್ಲಿಸಲಾಗಿದ್ದು, ಕದನ ವಿರಾಮದ ನಂತರ, ಬಿಸಿಸಿಐ (BCCI) ಈ ಪಂದ್ಯಾವಳಿಯನ್ನು ಯಾವಾಗ ಪುನರಾರಂಭಿಸುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಆದರೆ ಈ ಲೀಗ್ ನಂತರ ನಡೆಯಲಿರುವ ಇಂಗ್ಲೆಂಡ್ ಪ್ರವಾಸದ ಮೇಲೂ ಬಿಸಿಸಿಐ ಕಣ್ಣಿಟ್ಟಿದ್ದು, ಇದಕ್ಕಾಗಿ ತಂಡದ ಆಯ್ಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಬಹಳ ದಿನಗಳಿಂದ ಭಾರತ ತಂಡದಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದ ಕನ್ನಡಿಗ ಕರುಣ್ ನಾಯರ್ಗೆ (Karun Nair) ಈ ಪ್ರವಾಸದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಕರುಣ್‌ಗೆ ಭಾರತ-ಎ ತಂಡದಲ್ಲಿ ಅವಕಾಶ
ಕಳೆದ 8 ವರ್ಷಗಳಿಂದ ಭಾರತ ತಂಡದಿಂದ ಹೊರಗಿರುವ ಕರುಣ್ ನಾಯರ್, ಕಳೆದ ದೇಶೀಯ ಸೀಸನ್ನಲ್ಲಿ ಶತಕಗಳ ಮಳೆ ಸುರಿಸುತ್ತಾ ರನ್‌ಗಳ ಬೆಟ್ಟವನ್ನೇ ಕಟ್ಟಿದ್ದಾರೆ. ರಣಜಿ ಟ್ರೋಫಿಯಾಗಿರಲಿ ಅಥವಾ ವಿಜಯ್ ಹಜಾರೆ ಟ್ರೋಫಿಯಾಗಿರಲಿ, ವಿದರ್ಭ ಪರ ದೇಶೀ ಟೂರ್ನಿ ಆಡುತ್ತಿರುವ ಕರುಣ್ ನಾಯರ್ ಎಲ್ಲಾ ಸ್ವರೂಪಗಳಲ್ಲಿ ರನ್ ಕಲೆಹಾಕಿದ್ದಾರೆ. ಅಂದಿನಿಂದ, ಅವರನ್ನು ಟೀಂ ಇಂಡಿಯಾಕ್ಕೆ ಮರಳಿ ಆಯ್ಕೆ ಮಾಡಬೇಕೆಂಬ ಬೇಡಿಕೆ ಇತ್ತು. ಇದೀಗ ಅವರು ಟೀಂ ಇಂಡಿಯಾಕ್ಕೆ ಮರಳಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.
ವಾಸ್ತವವಾಗಿ, ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಆದರೆ ಈ ಸರಣಿಗೂ ಮುನ್ನ ಭಾರತ-ಎ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 2 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಭಾರತ-ಎ ತಂಡವನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಈ ಪ್ರವಾಸಕ್ಕಾಗಿ ಕರುಣ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಆಯ್ಕೆ ಸಮಿತಿ ನಿರ್ಧರಿಸಿದೆ. ಬಿಸಿಸಿಐ ಮೇ 12-13 ರೊಳಗೆ ಇಂಡಿಯಾ-ಎ ತಂಡವನ್ನು ಘೋಷಿಸಲಿದ್ದು, ಕರುಣ್ ನಾಯರ್ ತಂಡ ಸೇರುವುದು ಖಚಿತವಾಗಿದೆ.
Ranji Trophy 2025: ವಿದರ್ಭ ತಂಡಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟ ಕನ್ನಡಿಗ ಕರುಣ್ ನಾಯರ್
ದೇಶೀಯ ಕ್ರಿಕೆಟ್‌ನಲ್ಲಿ ಶತಕಗಳ ಮಳೆ
ಕಳೆದ ದೇಶೀಯ ಸೀಸನ್ನಲ್ಲಿ ಕರುಣ್ ಏಕದಿನ ಮತ್ತು ಪ್ರಥಮ ದರ್ಜೆ ಮಾದರಿಗಳಲ್ಲಿ 1600 ಕ್ಕೂ ಹೆಚ್ಚು ರನ್ ಗಳಿಸಿದ್ದರು. ರಣಜಿ ಟ್ರೋಫಿಯಲ್ಲಿ 4 ಶತಕ ಸೇರಿದಂತೆ 893 ರನ್‌ಗಳನ್ನು ಗಳಿಸಿದ್ದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 5 ಶತಕಗ ಬಾರಿಸುವ ಮೂಲಕ 779 ರನ್ ಕಲೆಹಾಕಿದ್ದರು. ಇಷ್ಟೇ ಅಲ್ಲ, ಕರುಣ್ ಕಳೆದ ವರ್ಷ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಹಲವು ಪಂದ್ಯಗಳನ್ನು ಆಡಿದ್ದು ಅಲ್ಲಿಯೂ ಶತಕ ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Sun, 11 May 25
