ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದ ಬೆನ್ನಲ್ಲೆ ಸಂಗೊಳ್ಳಿ ರಾಯಣ್ಣ ಮೂರ್ತಿ ಸುತ್ತಲು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿದ್ದಾರೆ.
ಇಂದು ಬೆಳಿಗ್ಗೆ ಕನ್ನಡಿಗರು ಬೆಳಗಾವಿಯ ಹೊರವಲಯದ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಸ್ಠಾಪನೆ ಮಾಡಿದ ನಂತರ ಕೆಲ ಎಂಇಎಸ್ ಹಾಗೂ ಶಿವಸೇನೆ ಪುಂಡರು ಗಲಾಟೆ ಆರಂಭಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರು.
ಈ ನಡುವೆ ಪರಿಸ್ಥಿತಿಯನ್ನು ಶಾಂತಗೊಳಿಸಲು ಬೆಳಗಾವಿ ಜಿಲ್ಲಾಧಿಕಾರಿ ಎಂಇಎಸ್ ಮತ್ತು ಶಿವಸೇನೆ ಮುಖಂಡರ ಜತೆ ಶಾಂತಿ ಸಭೆ ಮಾಡಿದ್ದಾರೆ. ಆದ್ರೆ ಸಭೆಯಲ್ಲಿ ಮತ್ತೆ ಉದ್ಧಟತನ ತೋರಿರುವ ಶಿವಸೇನೆ ಮತ್ತು ಎಂಇಎಸ್ ಪೀರನವಾಡಿಯಲ್ಲಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ಸಂಗೊಳ್ಳಿ ರಾಯಣ್ಣ ಮೂರ್ತಿ ವಿವಾದ ಬಗೆ ಹರಿಯುವವರೆಗೆ ಮೂರ್ತಿಯನ್ನು ಮುಚ್ಚಲು ಪಟ್ಟು ಹಿಡಿದಿದ್ದಾರೆ. ಆದ್ರೆ ಇದಕ್ಕೆ ಡಿಸಿ ಸೊಪ್ಪು ಹಾಕಿಲ್ಲ. ಹೀಗಾಗಿ ಎಂಇಎಸ್ ಹಾಗೂ ಶಿವಸೇನೆ ಪುಂಡರು ಡಿಸಿ ಸಭೆಯಿಂದ ಅರ್ಧದಲ್ಲಿಯೇ ಹೊರ ನಡೆದಿದ್ದಾರೆ.
ಈ ನಡುವೆ ಬೆಳಗಾವಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಪೀರನವಾಡಿಯಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಗಲಭೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ.
Also Read: ಕಾನೂನು ಸುವ್ಯವಸ್ಥೆ ಕಾಪಾಡಲು ADGP ಅಮರಕುಮಾರ್ ಪಾಂಡೆ ಬೆಳಗಾವಿಗೆ
Also Read: ರಾಯಣ್ಣ ಪ್ರತಿಮೆ ವಿವಾದ: ಪರಿಸ್ಥಿತಿ ಶಾಂತವಾಗಿದೆ ಎಂದ CM ಯಡಿಯೂರಪ್ಪ!
Also Read: ರಾಯಣ್ಣ ಪ್ರತಿಮೆ ವಿವಾದ: ಸ್ವತಃ CM ಜವಾಬ್ದಾರಿ ಕೊಟ್ಟರೂ ಸ್ಥಳಕ್ಕೆ ಬಾರದ DC ಹಿರೇಮಠ್
Published On - 2:16 pm, Fri, 28 August 20