ಗದಗ: ಸರ್ಕಾರಿ ಕಚೆರಿಯ ಆವರಣದಲ್ಲಿದ್ದ ಮರ ಕಡಿಯುವಾಗ ಬಿದ್ದು ಗಾಯಗೊಂಡಿದ್ದ ಗುತ್ತಿಗೆ ನೌಕರನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗದಗದಲ್ಲಿ ಸಂಭವಿಸಿದೆ.
ಕರ್ನಾಟಕ ಸರ್ಕಾರದ ಪಿಡಬ್ಲುಡಿ ಇಲಾಖೆಯ ಆವರಣದಲ್ಲಿದ್ದ ಮರ ಕಡಿಯುವಾಗ ಗುತ್ತಿಗೆ ನೌಕರನೊಬ್ಬ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಹೀಗೆ ಬಿದ್ದು ಗಂಭೀರ ಗಾಯಗೊಂಡ ಸಿಬ್ಬಂದಿ ನೋವಿನಿಂದ ಒದ್ದಾಡುತ್ತಿದ್ರೆ ಸಕಾಲಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ. ಪಿಡ್ಲ್ಯೂಡಿ ಇಲಾಖೆ ಅಧಿಕಾರಿಗಳು ಕೂಡಾ ಘಟನೆ ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಲ್ಲ.
ಹಾಗೂ ಹೀಗೂ ಮಾಡಿ ಕೆಲ ಹೊತ್ತಿನ ನಂತರ ಗದಗ ನಗರದಲ್ಲಿ ಚಿಕಿತ್ಸೆಗಾಗಿ ಸುತ್ತಾಡಿದ್ರೂ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಗದಗದ ಜಿಮ್ಸ್ ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಂಡಿಲ್ಲ, ಬದಲು ಪ್ರಾಥಮಿಕ ಚಿಕಿತ್ಸೆ ನೀಡಿ ಸಾಗ ಹಾಕಿದ್ದಾರೆ ಅಲ್ಲಿನ ಸಿಬ್ಬಂದಿ.
ಗದಗನಲ್ಲಿ ಚಿಕಿತ್ಸೆ ಸಿಗದೇ ಅನಿವಾರ್ಯವಾಗಿ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲಿಸಲಾಗಿದೆ. ಆದ್ರೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗುತ್ತಿಗೆ ನೌಕರ ಸಾವನ್ನಪ್ಪಿದ್ದಾನೆ. ಆತನ ಕುಟುಂಬ ವರ್ಗ ಮತ್ತು ಸ್ಥಳದಲ್ಲಿದ್ದವರು ಸಕಾಲಕ್ಕೆ ಗದಗದಲ್ಲೇ ಚಿಕಿತ್ಸೆ ನೀಡಿದ್ದರೆ ಆತ ಬದುಕುತ್ತಿದ್ದ ಎಂದು ಕಣ್ಣೀರು ಹಾಕುತ್ತಿದ್ದಾರೆ.