ಬೆಳೆ ಹಾನಿ ಪರಿಹಾರ ಕೋರಿ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

| Updated By: sandhya thejappa

Updated on: Nov 11, 2021 | 2:12 PM

ಕಳೆದ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಸುಮಾರು 8 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಂದರೆ 77.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿ ಬಿತ್ತನೆಯಾಗಿದೆ.

ಬೆಳೆ ಹಾನಿ ಪರಿಹಾರ ಕೋರಿ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಸಿದ್ದರಾಮಯ್ಯ (Siddaramaiah) ಪತ್ರ ಬರೆದಿದ್ದಾರೆ. ನವೆಂಬರ್ ತಿಂಗಳ ಮಧ್ಯ ಭಾಗಕ್ಕೆ ಬರುತ್ತಿದ್ದರೂ ರಾಜ್ಯದಲ್ಲಿ ಮಳೆ ನಿಲ್ಲುತ್ತಿಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಇದರಿಂದ ಕೊಯಿಲಿಗೆ ಬಂದ ಬೆಳೆಗಳು ಹೊಲ, ಗದ್ದೆಗಳಲ್ಲಿ ಕೊಳೆತು ಹೋಗಿವೆ. ರಾಜ್ಯದಲ್ಲಿ ವಾಡಿಕೆಯಂತೆ 69, 79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತದೆ. ಆದರೆ ಕೊರೊನಾ ಸಮಸ್ಯೆ ಬಂದ ನಂತರ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರ ಬೆಳೆಗಳನ್ನು ಸಮರ್ಪಕವಾಗಿ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಅಂತ ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕಳೆದ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಸುಮಾರು 8 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಂದರೆ 77.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿ ಬಿತ್ತನೆಯಾಗಿದೆ. ಮುಂಗಾರು ಬೆಳೆಗಳಾದ ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ಹತ್ತಿ, ಮೆಣಸಿನ ಕಾಯಿ, ಶೇಂಗಾ, ಹೆಸರು, ಉದ್ದು ಮುಂತಾದವುಗಳ ಕೊಯಿಲಿನ ಕೆಲಸ ನಡೆಯುತ್ತಿದೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾದ ಮಳೆ ಇನ್ನೂ ನಿಂತಿಲ್ಲ. ಆರಂಭದಲ್ಲಿ ಬಿತ್ತನೆ ಮಾಡುವಾಗ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ ದಕ್ಷಿಣ ಒಳನಾಡು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರು ಹಾಕಿದ ಬಿತ್ತನೆ ಬೀಜಗಳು ಸರಿಯಾಗಿ ಹುಟ್ಟಲಿಲ್ಲ. ಜೊತೆಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗಲಿಲ್ಲ. ಇಷ್ಟರ ನಡುವೆಯೂ ರೈತರು ಕಷ್ಟ ಪಟ್ಟು ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ರೈತಾಪಿ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ ಅಂತ ಪತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಅಡಿಕೆ, ಕಾಫಿ, ಮೆಣಸು ಮುಂತಾದ ವಾಣಿಜ್ಯ ಬೆಳೆಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೊಳೆ ರೋಗದ ಜೊತೆಗೆ ಅಡಿಕೆಗೆ ಹಳದಿ ಎಲೆ ರೋಗ ಬಂದಿದೆ. ಮೆಣಸಿನ ಬಳ್ಳಿಗಳು ಕೊಳೆತು ಹೋಗುತ್ತಿವೆ. ಕಾಫಿಯೂ ಕೊಳೆ ರೋಗದ ಸಮಸ್ಯೆಯನ್ನು ಎದುರಿಸುತ್ತಿದೆ.

ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ವ್ಯಾಪಕ ಮಳೆಯಿಂದಾಗಿ ಅಕ್ಟೋಬರ್ ಅಂತ್ಯದ ವೇಳೆಗೆ 11.22 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ಆದರೆ ಕೃಷಿ ಇಲಾಖೆಯ ಮಾಹಿತಿಗಳಲ್ಲಿ ಕಳೆದ ಒಂದೂವರೆ ತಿಂಗಳಿಂದ ಅತಿ ಹೆಚ್ಚು ಮಳೆ ಬಿದ್ದು ಹಾನಿಯಾಗಿರುವ ಜಿಲ್ಲೆಗಳ ಮಾಹಿತಿಯೇ ಇಲ್ಲ. ಮಲೆನಾಡು, ಕರಾವಳಿ ಜಿಲ್ಲೆಗಳ ಅಡಿಕೆ, ಮೆಣಸು, ಕಾಫಿಗೆ ಆಗಿರುವ ನಷ್ಟದ ಮಾಹಿತಿ ಇಲ್ಲ ಹೀಗಾಗಿ ಈ ಬಗ್ಗೆ ಗಮನಹಿಸರಿಸಿ ಪರಿಹಾರ ನೀಡಬೇಕು ಅಂತ ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ

Tamil Nadu Rains: ತಮಿಳುನಾಡಿನಲ್ಲಿ ಇಂದು ಸಂಜೆ ಭರ್ಜರಿ ಮಳೆ ಸಾಧ್ಯತೆ; ಚೆನ್ನೈನಲ್ಲಿ ರೆಡ್​ ಅಲರ್ಟ್​​

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ವಿಚಾರ; ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ ಎಂದು ಪ್ರಶ್ನಿಸಿದ ಹೈಕೋರ್ಟ್