
ಬೆಳಗಾವಿ: ಮದುವೆಗೆ ತೆರಳುವ ಬದಲು ಮನೆಯೊಂದರಲ್ಲಿ ಸಿಲುಕಿದ್ದ ನಾಗರಹಾವನ್ನು ಉರಗ ತಜ್ಞೆ ನಿರ್ಜರಾ ಚಿಟ್ಟಿ ಬರಿಗೈಯಲ್ಲೇ ರಕ್ಷಣೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿರ್ಜರಾ ಹಾಗೂ ಆಕೆಯ ಪತಿ ಆನಂದ್ ಮೂಲತಃ ವನ್ಯಜೀವಿ ತಜ್ಞರು. ಬೆಳಗಾವಿ ನಿವಾಸಿಗಳಾದ ದಂಪತಿ ತಮ್ಮ ಸಂಬಂಧಿಕರ ಮದುವೆಗೆ ತೆರಳಲು ನಿನ್ನೆ ಸಜ್ಜಾಗುತ್ತಿದ್ದರಂತೆ. ಈ ನಡುವೆ ದಂಪತಿಗೆ ನಮ್ಮ ಮನೆಯಲ್ಲಿ ನಾಗರಹಾವು ಒಂದು ಸಿಲುಕಿಕೊಂಡಿದೆ. ದಯವಿಟ್ಟು ಬಂದು ಅದನ್ನು ಅಲ್ಲಿಂದ ಹೊರೆತೆಗೆಯಿರಿ ಅಂತಾ ನಗರದ ನಿವಾಸಿಯೊಬ್ಬರ ಫೋನ್ ಕರೆ ಬಂದಿದೆ.
ಮದುವೆಗೆ ತಯಾರಾಗಿದ್ದ ನಿರ್ಜರಾ ಮರುಯೋಚಿಸದೆ ಸಮಾರಂಭಕ್ಕಾಗಿ ಉಟ್ಟ ಸೀರೆಯಲ್ಲೇ ಹಾವು ಸಿಲುಕಿದ್ದ ಮನೆಗೆ ಧಾವಿಸಿದ್ದಾರೆ. ಅವಸರದಲ್ಲಿ ತಮ್ಮ ನಿವಾಸದಲ್ಲಿದ್ದ ಹಾವು ರಕ್ಷಣಾ ಸಾಧನಗಳನ್ನು ಸಹ ತೆಗೆದುಕೊಂಡು ಹೋಗಿರಲಿಲ್ಲ.
ಆದರೆ, ಇದರ ಬಗ್ಗೆ ಕಿಂಚಿತ್ತು ಚಿಂತಿಸದ ನಿರ್ಜರಾ ತಮ್ಮ ಫೋನ್ನ ಟಾರ್ಚ್ಲೈಟ್ ಬಳಸಿ ಸಣ್ಣದೊಂದು ಕಡ್ಡಿಯ ಸಹಾಯದಿಂದ ಕಪಾಟಿನ ಹಿಂದೆ ಅವಿತುಕೊಂಡಿದ್ದ ನಾಗರಹಾವನ್ನು ಹೊರಗೆಳೆದರು. ಬಳಿಕ ಅದನ್ನು ಬರಿಗೈಯಲ್ಲೇ ಹಿಡಿದು ಅಲ್ಲಿಂದ ಹೊರತಂದರು.
ನಿರ್ಜರಾ ಇದೆಲ್ಲಾ ಕಾರ್ಯವನ್ನು ತಾವು ಮದುವೆಗೆಂದು ಉಟ್ಟ ಸೀರೆಯಲ್ಲೇ ನಿಭಾಯಿಸಿದ್ದು ವನ್ಯಜೀವಿ ತಜ್ಞೆಯ ಸಾಹಸಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಈ ವೇಳೆ ಹಾವು ಹಿಡಿಯೋದು ದೊಡ್ಡ ವಿಷಯವಲ್ಲ. ಆದರೆ, ಸೀರೆ ಉಟ್ಟಿರುವಾಗ ಕೊಂಚ ಕಷ್ಟವಾಗುತ್ತದೆ ಎಂದು ನಿರ್ಜರಾ ವಿಡಿಯೋದಲ್ಲಿ ಹೇಳಿದ್ದಾರೆ.