
ಬೆಂಗಳೂರು: ನಗರಕ್ಕೆ ವಕ್ಕರಿಸಿರುವ ಕೊರೊನಾ ಎಲ್ಲೆಡೆ ಹೋದರೂ ಸಾವಿನ ಕರಿಛಾಯೆಯನ್ನು ಬೀರುತ್ತಲೇ ಇದೆ. ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗದೆ ಕುಟುಂಬಸ್ಥರು ಸಂಕಟ ಅನುಭವಿಸುತ್ತಿದ್ದಾರೆ.
ಈಗ ಬೆಂಗಳೂರಲ್ಲಿ ಅಂಥದ್ದೇ ಮತ್ತೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕುರುಬರಹಳ್ಳಿಯ 60 ವರ್ಷದ ವ್ಯಕ್ತಿಯೊಬ್ಬರು ಕೊರೊನಾಗೆ ಅಸುನೀಗಿದ್ದರು. ಹೀಗಾಗಿ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯ ಸಂಸ್ಕಾರವನ್ನ ಸುಮನಹಳ್ಳಿಯ ಚಿತಾಗಾರದಲ್ಲಿ ನೆರವೇರಿಸಲು ಮುಂದಾದರು.
ಈ ಮಧ್ಯೆ ತನ್ನ ತಂದೆಯ ಮುಖವನ್ನ ಕೊನೆಯ ಬಾರಿ ನೋಡಲಾಗದೆ ಅವರ ಮಗ ಸಂಕಟದಿಂದ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಅತ್ತ ತಂದೆಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ ಮಗ ರೋದಿಸುತ್ತಿದ್ದರೆ ಇತ್ತ ಮೃತನ ಪತ್ನಿಗೂ ಸೋಂಕು ಇದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹಾಗಾಗಿ ಅವರಿಗೂ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲೇ ವಿಷಯ ತಿಳಿದ ಮೃತನ ಹೆಂಡತಿ ಪತಿಯ ಮುಖ ನೋಡಲಾಗದೆ ಬಿಕ್ಕಿಬಿಕ್ಕಿ ಅತ್ತರು.
Published On - 12:21 pm, Sun, 5 July 20