ಧಾರವಾಡ: ಧಾರವಾಡದಲ್ಲಿ ಮಂಗವೊಂದು ಹಲವು ಅವಾಂತರ ಸೃಷ್ಟಿಸಿದೆ. ಕಳೆದ ಒಂದೆರಡು ವಾರಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹಾವಳಿ ನಡೆಸಿದ್ದು ಅನೇಕರಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದ ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರಿಂದ ಮಂಗವನ್ನು ಹಿಡಿಯಲು ಬಂದ ಸಿಬ್ಬಂದಿ ಬರೀ ಕೈಯಿಂದ ಮರಳುವಂತಾಗಿದೆ.
ಧಾರವಾಡ ನಗರದ ಮುರುಘಾ ಮಠ ಹಾಗೂ ಡಿಪೋ ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಗಂಡು ಮಂಗವೊಂದು ಹಾವಳಿ ನಡೆಸುತ್ತಿದೆ. ಜನರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸುತ್ತಿರೋ ಮಂಗನ ವರ್ತನೆಯಿಂದ ಜನರು ಆತಂಕಗೊಂಡಿದ್ದಾರೆ. ಈಗಾಗಲೇ ಸುಮಾರು 30 ಜನರಿಗೆ ಕಚ್ಚಿರೋ ಮಂಗ ದಿನದಿಂದ ದಿನಕ್ಕೆ ಹಾವಳಿಯನ್ನು ಹೆಚ್ಚಿಸುತ್ತಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗವನ್ನು ಹಿಡಿಯಲು ಬಲೆ ಸಮೇತ ಬಂದ ಸಿಬ್ಬಂದಿಯನ್ನೇ ಯಾಮಾರಿಸಿ ಮಂಗ ಪರಾರಿಯಾಗಿದೆ.
ಬಲೆಯನ್ನೇ ಕತ್ತರಿಸಿ ಮಂಗ ಪರಾರಿ:
ಯಾವಾಗ ಬಲೆ ಕತ್ತರಿಸಿತೋ ಕೂಡಲೇ ಮಂಗ ಅಲ್ಲಿಂದ ಎಲ್ಲರನ್ನೂ ಯಾಮಾರಿಸಿ ಪರಾರಿಯಾಗಿದೆ. ಸಿಬ್ಬಂದಿ ಎಷ್ಟೇ ಜಾಣತನದಿಂದ ಬಲೆ ಬೀಸಿ ಹಿಡಿದರೂ ಅದರಿಂದ ಯಾವುದೇ ಪ್ರಯೋಜನವಾಗಲೇ ಇಲ್ಲ. ಮುಂದಿನ ದಿನಗಳಲ್ಲಿ ಮತ್ತೆಷ್ಟು ಜನರ ಮೇಲೆ ಇದು ಹಲ್ಲೆ ಮಾಡಲಿದೆಯೋ ಅನ್ನೋ ಆತಂಕ ಸ್ಥಳೀಯರದ್ದಾಗಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಈ ಮಂಗವನ್ನು ಹಿಡಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
Published On - 2:15 pm, Fri, 29 May 20