ಮೈಸೂರು: ಪ್ರತಿ ವರ್ಷ ಸಂಭ್ರಮ ಸಡಗರದಿಂದ ಆರು ದಿನಗಳ ವರೆಗೆ ನಡೆಯುತ್ತಿದ್ದ ರಾಜ್ಯದ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ ಕೊರೊನಾದಿಂದಾಗಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕೇವಲ 2 ದಿನಕ್ಕೆ ಸುತ್ತೂರು ಜಾತ್ರೆ ಸೀಮಿತವಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆಯುವ ಈ ಜಾತ್ರೆಗೆ ಅದರದೇ ಆದ ಪ್ರಸಿದ್ಧತೆ, ಇತಿಹಾಸ ಇದ್ದು ಕೊರೊನಾ ಎಲ್ಲದಕ್ಕೂ ಕಂಟಕವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸುತ್ತೂರು ಜಾತ್ರೆಯನ್ನು ಸರಳವಾಗಿ ಹಾಗೂ ಕೇವಲ ಎರಡು ದಿನಕ್ಕೆ ಸೀಮಿತ ಮಾಡಲು ನಿರ್ಧರಿಸಲಾಗಿದೆ. ಇಂದಿನಿಂದ ಜಾತ್ರೆ ಆರಂಭವಾಗಿದ್ದು ಇಂದು ರಥೋತ್ಸವ ನಡೆದಿದೆ. ಸುತ್ತೂರು ಶ್ರೀ, ವಿಜಯಪುರದ ಸಿದ್ದೇಶ್ವರ ಶ್ರೀ ರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಸುತ್ತೂರಿನ ಗದ್ದುಗೆ ಮಠದಿಂದ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿ ಮೆರವಣಿಗೆ ನೆರವೇರಿದೆ. ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಸಾಮೂಹಿಕ ವಿವಾಹ ಹಾಗೂ ರಥೋತ್ಸವಕ್ಕೆ ಈ ಬಾರಿಯ ಸುತ್ತೂರು ಜಾತ್ರೆ ಸೀಮಿತಗೊಳಿಸಲಾಗಿದೆ. ಇನ್ನು ಸುತ್ತೂರು ಮಠ ಮಹಾದಾಸೋಹವನ್ನು ರದ್ದು ಮಾಡಿದೆ.
ರಾಜ್ಯದ ನಾನಾ ಭಾಗಗಳಿಂದ ಜಾತ್ರೆಗೆ ಜನರು ಬರುತ್ತಿದ್ದರು. ಮುಖ್ಯಮಂತ್ರಿ, ಸಚಿವರು, ಕೇಂದ್ರದ ಮಂತ್ರಿಗಳು, ಶಾಸಕರು ಜಾತ್ರೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆಯುತ್ತಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜನ ಸೇರುವುದು ಬೇಡ ಎನ್ನುವ ಕಾರಣಕ್ಕೆ ಈ ಬಾರಿ ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಯಲಿದೆ.