ತನ್ವೀರ್ ಸೇಠ್ ವಿರುದ್ಧ ಸಿಡಿದ ಸಿದ್ದರಾಮಯ್ಯ.. ಡಿ.ಕೆ.ಶಿವಕುಮಾರ್ ಜೊತೆ ತನ್ವೀರ್ ಸೇಠ್ ಮಹತ್ವದ ಮೀಟಿಂಗ್

|

Updated on: Mar 01, 2021 | 9:06 AM

ಪ್ಲ್ಯಾನ್ ಮಾಡ್ಕೊಂಡು ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದಿರೋ ಸಿದ್ದರಾಮಯ್ಯ, ಕಾದು ನೋಡುವ ತಂತ್ರಕ್ಕೂ ಮೊರೆ ಹೋಗಿದ್ದಾರೆ. ಅದೇಗೆ ಅಂದ್ರೆ, ಡಿಕೆಶಿ ಮೇಲೆ ಒತ್ತಡ ತರ್ತಿರೋ ಸಿದ್ದರಾಮಯ್ಯ, ಇಂದಿನ ತನ್ವೀರ್-ಡಿಕೆಶಿ ಭೇಟಿ ನಂತ್ರ ಹೊಸ ಪ್ಲ್ಯಾನ್ ಮಾಡೋಕೆ ತಯಾರಿ ನಡೆಸಿದ್ದಾರೆ.

ತನ್ವೀರ್ ಸೇಠ್ ವಿರುದ್ಧ ಸಿಡಿದ ಸಿದ್ದರಾಮಯ್ಯ.. ಡಿ.ಕೆ.ಶಿವಕುಮಾರ್ ಜೊತೆ ತನ್ವೀರ್ ಸೇಠ್ ಮಹತ್ವದ ಮೀಟಿಂಗ್
ಸಿದ್ದರಾಮಯ್ಯ
Follow us on

ಸಿದ್ದರಾಮಯ್ಯ ವರ್ಸಸ್ ತನ್ವೀರ್.. ಅರ್ಥಾತ್ ಸಿದ್ದು ವರ್ಸಸ್ ಡಿಕೆಶಿ.. ಯೆಸ್.. ರಾಜ್ಯ ಕಾಂಗ್ರೆಸ್​ನೊಳಗಿನ ಬೇಗುದಿ ಧಗಧಗಿಸ್ತಿದೆ. ಮೈಸೂರು ಮೇಯರ್​ಗಿರಿ ಜೆಡಿಎಸ್​ ಪಾಲಾಗುತ್ತಲೆ ಕಾಂಗ್ರೆಸ್ ದಳಪತಿಗಳಿಗೆ ಪಟ್ಟ ಬಿಟ್ಟುಕೊಡುತ್ತಲೇ, ಟಗರು ಕಾಲ್ಕೆರೆದಿತ್ತು. ಕೈಯೊಳಗೆ ಕಿಡಿ ಹೊತ್ತಿಕೊಂಡಿತ್ತು. ತವರೂರಿನ ಪಾಲಿಕೆಯಲ್ಲಾದ ಮುಖಭಂಗ ಸಹಿಸಿಕೊಳ್ಳಲಾಗದೆ, ಹಿನ್ನಡೆಯನ್ನ ಅರಗಿಸಿಕೊಳ್ಳಲಾಗದೆ ಸಿದ್ದರಾಮಯ್ಯ ಸ್ವಪಕ್ಷದ ನಾಯಕರ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ತನ್ವೀರ್ ಸೇಠ್ ವಿರುದ್ಧ ಮತ್ತೆ ಸಿಡಿದ ಸಿದ್ದರಾಮಯ್ಯ
ಮೈಸೂರು ಮೇಯರ್ ಸ್ಥಾನ ಜೆಡಿಎಸ್​ಗೆ ಬಿಟ್ಟುಕೊಟ್ಟಿರೋದ್ರಲ್ಲಿ ತನ್ವೀರ್ ಪಾತ್ರವಿದೆ ಅಂತಾ ಆರೋಪಿಸಿ ಸಿದ್ದರಾಮಯ್ಯ ಕೆಂಡವಾಗಿದ್ರು. ತನ್ವೀರ್​ಗೆ ನೋಟಿಸ್ ನೀಡಿ ಕಠಿಣ ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಆಗ್ರಹಿಸಿದ್ರು. ಅತ್ತ ತನ್ವೀರ್​ ಕೂಡ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ರು. ಇಬ್ಬರೂ ನಾಯಕರ ಬೆಂಬಲಿಗರ ಮಧ್ಯೆ ಮಾತಿನ ಮಲ್ಲಯುದ್ಧವೇ ನಡೆದಿತ್ತು. ಇದ್ರ ಬೆನ್ನಲ್ಲೇ ಸಿದ್ದು, ತನ್ವೀರ್ ಸೇಠ್ ವಿರುದ್ಧ ಮತ್ತೆ ಗುಟುರು ಹಾಕಿದ್ದಾರೆ.

‘ನನ್ನ ವಿರುದ್ಧ ನನ್ನ ಕ್ಷೇತ್ರದಲ್ಲೇ ಸೇಠ್ ರಾಜಕೀಯ’
ತನ್ವೀರ್ ಸೇಠ್ ಮೇಲಿನ ಸಿಟ್ಟು ಸಿದ್ದರಾಮಯ್ಯಗೆ ಸದ್ಯಕ್ಕಂತೂ ಕಡಿಮೆಯಾಗಲ್ಲ ಬಿಡಿ. ಮೇಯರ್​ ಸ್ಥಾನ ಪಕ್ಷದ ಕೈ ಜಾರಿದ್ದಕ್ಕೆ ರೊಚ್ಚಿಗೆದ್ದಿರೋ ಸಿದ್ದು ಮೇಲಿಂದ ಮೇಲೆ ಸೇಠ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನನ್ನ ವಿರುದ್ಧ ನನ್ನ ಕ್ಷೇತ್ರದಲ್ಲೇ ಸೇಠ್ ರಾಜಕೀಯ ಮೇಲಾಟವಾಡ್ತಿದ್ದಾರೆ. ಅವರು ಹೀಗೆ ಮಾಡಿದ್ರೂ ನಾನು ಸುಮ್ಮನೆ ಇರಬೇಕಾ ಅಂತಾ ತನ್ವೀರ್ ಸೇಠ್ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಇಂದು ಡಿಕೆಶಿ ಭೇಟಿಯಾಗಲಿರೋ ತನ್ವೀರ್ ಸೇಠ್
ಈ ಮಧ್ಯೆ, ಇಂದು ತನ್ವೀರ್ ಸೇಠ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರನ್ನ ಭೇಟಿಯಾಗಲಿದ್ದಾರೆ. ಈ ವೇಳೆ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್​ ಜೊತೆಗಿನ ಒಪ್ಪಂದದ ಕುರಿತು ಡಿಕೆಶಿಗೆ ವರದಿ ನೀಡಲಿದ್ದಾರೆ. ಹೀಗಾಗಿ ಇಂದಿನ ತನ್ವೀರ್-ಡಿಕೆಶಿ ಭೇಟಿ, ಸಿದ್ದು ಮುಂದಿನ ನಡೆ ಈಗ ತೀವ್ರ ಕುತೂಹಲ ಕೆರಳಿಸಿದೆ. ಜೊತೆಗೆ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮೈಸೂರು ನಗರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಮೂರ್ತಿಯಿಂದಲೂ ಇಂದು ವರದಿ ಸಲ್ಲಿಕೆಯಾಗಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಮನವೊಲಿಸಲು ವೇಣುಗೋಪಾಲ್​ರಿಂದ ‘ಜಾದೂ ಕೀ ಝಪ್ಪಿ’!.. KCV ಕಾರ್ಯತಂತ್ರ ವರ್ಕ್​ಔಟ್​ ಆಯ್ತಾ?