Elon Musk: ಎಲಾನ್ ಮಸ್ಕ್ 1.14 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಒಂದೇ ಟ್ವೀಟ್​ಗೆ ಖಲಾಸ್

|

Updated on: Feb 23, 2021 | 5:23 PM

ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್ ಒಂದೇ ಒಂದು ಟ್ವೀಟ್ ನಿಂದ 1.14 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಕಳೆದುಕೊಂಡಿದ್ದಾರೆ. ಅವರ ಆಸ್ತಿ ಮಾತ್ರವಲ್ಲ, ಹೂಡಿಕೆದಾರರ ಸಂಪತ್ತು ಕೂಡ ಕರಗಿಹೋಗಿದೆ. ಏನು ಟ್ವೀಟ್, ಇದೆಂತಹ ಏಟು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ...

Elon Musk: ಎಲಾನ್ ಮಸ್ಕ್ 1.14 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಒಂದೇ ಟ್ವೀಟ್​ಗೆ ಖಲಾಸ್
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us on

ಆತ ಒಂದು ಟ್ವೀಟ್​ನಿಂದ ಕಳೆದುಕೊಂಡಿದ್ದು 1520 ಕೋಟಿ ಅಮೆರಿಕನ್ ಡಾಲರ್. ಅಷ್ಟೇ ಅಲ್ಲ, ಜಗತ್ತಿನ ನಂಬರ್ ಒನ್ ಶ್ರೀಮಂತ ಎಂಬ ಕಿರೀಟವೂ ಪಟಕ್ಕನೆ ಕಳಚಿಬಿದ್ದಿದೆ. ನಿಮಗೆ ಈಗಾಗಲೇ ಆ ಬಗ್ಗೆ ಸುಳಿವು ಸಿಕ್ಕಿರಬಹುದು. ಆತನ ಹೆಸರು ಎಲಾನ್ ಮಸ್ಕ್. ಟೆಸ್ಲಾ ಕಂಪೆನಿಯ ಸಿಇಒ ಆತ. ಸೋಮವಾರದಂದು ಟೆಸ್ಲಾ ಕಂಪೆನಿಯ ಷೇರಿನ ಬೆಲೆ 8.6% ಕುಸಿತ ಕಾಣುತ್ತಿದ್ದಂತೆಯೇ ಮಸ್ಕ್ ಆಸ್ತಿ 1520 ಕೋಟಿ ಯುಎಸ್ ಡಿ ಕೂಡ ಕರಗಿಹೋಯಿತು. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 1.14 ಲಕ್ಷ ಕೋಟಿಗೂ ಹೆಚ್ಚು ಮೊತ್ತವಾಗುತ್ತದೆ. ಭಾರತದ ಹತ್ತಕ್ಕೂ ಹೆಚ್ಚು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜಿಎಸ್ ಡಿಪಿಗಿಂತ ಹೆಚ್ಚಿನ ಮೊತ್ತ ಒಂದೇ ರಾತ್ರಿಯಲ್ಲಿ ಮಸ್ಕ್ ಕಳೆದುಕೊಂಡಿದ್ದಾರೆ.

ಬಿಟ್ ಕಾಯಿನ್ ಮತ್ತು ಎಥರ್ (ether) ಕ್ರಿಪ್ಟೊಕರೆನ್ಸಿ ದರ “ವಿಪರೀತ ಹೆಚ್ಚಾದಂತೆ ಕಾಣುತ್ತಿದೆ” ಎಂದು ಎಲಾನ್ ಮಸ್ಕ್ ಶನಿವಾರ ಮಾಡಿದ ಒಂದು ಟ್ವೀಟ್ ನಿಂದ ಟೆಸ್ಲಾ ಕಂಪೆನಿಯ ಷೇರಿನ ಬೆಲೆ ನೆಲ ಕಚ್ಚಿತು. ಎರಡು ವಾರದ ಹಿಂದಷ್ಟೇ, ಬಿಟ್ ಕಾಯಿನ್​ನಲ್ಲಿ ನೂರೈವತ್ತು ಕೋಟಿ ಅಮೆರಿಕನ್ ಡಾಲರ್ ಹೂಡಿದ್ದಾಗಿ ಘೋಷಿಸಿತ್ತು. ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಮಂಗಳವಾರದಂದು ಶೇ 12.5ರಷ್ಟು ಕುಸಿದು, 48,071 ಯುಎಸ್​ಡಿ ತಲುಪಿತ್ತು. ಇನ್ನು ಟೆಸ್ಲಾದ ಮಾಡೆಲ್ ವೈ ಸ್ಟ್ಯಾಂಡರ್ಡ್ ಬಗ್ಗೆ ಮಸ್ಕ್ ನೀಡಿದ ಹೇಳಿಕೆ ಕೂಡ ಟೆಸ್ಲಾ ಕಂಪೆನಿಯ ಷೇರು ಬೆಲೆ ಇಳಿಕೆಗೆ ಕಾರಣವಾಗಿದೆ.

ಟೆಸ್ಲಾ ಕಂಪೆನಿಯ ಷೇರಿನ ಬೆಲೆಯಲ್ಲಿ ಏರಿಳಿತ ಆಗುತ್ತಿದ್ದಂತೆ ವಿಶ್ವದ ನಂಬರ್ ಒನ್ ಶ್ರೀಮಂತ ಕುರ್ಚಿಗೆ ಪೋಟಿ ಕಂಡುಬರುತ್ತಿದೆ. ಮಸ್ಕ್ ಆಸ್ತಿ ಪ್ರಮಾಣ ಈ ವರ್ಷ ಇಲ್ಲಿಯ ತನಕ 1360 ಕೋಟಿ ಯುಎಸ್ ಡಿ ಹೆಚ್ಚಾಗಿದೆ. ಈ ವರದಿಯಲ್ಲಿನ ಲೆಕ್ಕಾಚಾರಗಳು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕವನ್ನು ಅವಲಂಬಿಸಿದೆ.

ವಿಶ್ವದ ಟಾಪ್ ಟೆನ್ ಶ್ರೀಮಂತರು ಹಾಗೂ ಆಸ್ತಿ ಮೌಲ್ಯ (ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಪಟ್ಟಿಯಂತೆ)

  1. ಜೆಫ್ ಬೆಜೋಸ್ 186 ಬಿಲಿಯನ್ ಯುಎಸ್​ಡಿ
  2. ಎಲಾನ್ ಮಸ್ಕ್ 183 ಬಿಲಿಯನ್ ಯುಎಸ್​ಡಿ
  3. ಬಿಲ್ ಗೇಟ್ಸ್ 135 ಬಿಲಿಯನ್ ಯುಎಸ್​ಡಿ
  4. ಬರ್ನಾರ್ಡ್ ಅರ್ನಾಲ್ಟ್ 118 ಬಿಲಿಯನ್ ಯುಎಸ್​ಡಿ
  5. ಮಾರ್ಕ್ ಝುಕರ್ ಬರ್ಗ್ 98 ಬಿಲಿಯನ್ ಯುಎಸ್​ಡಿ
  6. ಲ್ಯಾರಿ ಪೇಜ್ 94.9 ಬಿಲಿಯನ್ ಯುಎಸ್​ಡಿ
  7. ವಾರೆನ್ ಬಫೆಟ್ 93 ಬಿಲಿಯನ್ ಯುಎಸ್ಡಿ
  8. ಸೆರ್ಗಿ ಬ್ರಿನ್ 91.8 ಬಿಲಿಯನ್ ಯುಎಸ್​ಡಿ
  9. ಝೋಂಗ್ ಶನ್ಷನ್ 89.5 ಬಿಲಿಯನ್ ಯುಎಸ್​ಡಿ
  10. ಸ್ಟೀವ್ ಬಲ್ಮರ್ 84.6 ಬಿಲಿಯನ್ ಯುಎಸ್​ಡಿ

ಇದನ್ನೂ ಓದಿ: Karnataka Budget 2021: ಕರ್ನಾಟಕ ಬಜೆಟ್ ಇತಿಹಾಸ, 10 ಆಸಕ್ತಿಕರ ಸಂಗತಿ

Published On - 5:19 pm, Tue, 23 February 21